ನೋವಾಗುತ್ತೆ ಅನ್ನೋದು ಸುಲಭ ಆದರೆ ಸಹಿಸಿಕೊಳ್ಳೋದು ಕಷ್ಟ: ಶಿವರಾಜ್ ಕುಮಾರ್
ಸಂಚಾರಿ ವಿಜಯ್ ಅಂತಿಮ ದರ್ಶನ ಪಡೆದ ಹಿರಿಯ ನಟ ಶಿವರಾಜ್ ಕುಮಾರ್, ಮಾಧ್ಯಮಗಳೊಟ್ಟಿಗೆ ಮಾತನಾಡಿ, 'ನೋವಾಗುತ್ತೆ ಎಂದು ಹೇಳೋದು ಸುಲಭ ಆದರೆ ನಷ್ಟ ಯಾವತ್ತಿದ್ದರೂ ನಷ್ಟವೇ ಅದನ್ನು ಸಹಿಸುವುದು ಸುಲಭವಲ್ಲ' ಎಂದಿದ್ದಾರೆ.
Recommended Video
'ನಾನು ವಿಜಯ್ ಅನ್ನು ಹತ್ತಿರದಿಂದ ಬಲ್ಲೆ. 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು. ಯಲ್ಲಾಪುರದಲ್ಲಿ ಚಿತ್ರೀಕರಣ ಮಾಡುವಾಗ ಎರಡು ವಾರಕ್ಕಿಂತಲೂ ಹೆಚ್ಚು ಕಾಲ ನಾವು ಜೊತೆಯಾಗಿದ್ದೆವು' ಎಂದು ನೆನಪಿಸಿಕೊಂಡರು ಶಿವರಾಜ್ ಕುಮಾರ್.
'ಶೂಟಿಂಗ್‌ನಲ್ಲಿದ್ದಾಗ ಅವರೊಂದಿಗೆ ಸಾಕಷ್ಟು ಮಾತನಾಡಿದ್ದೆ. ಅವರಿಗೆ ಉನ್ನತವಾದುದನ್ನು ಮಾಡಬೇಕು ಎಂಬ ಆಸೆ ಇತ್ತು. ಸದಾ ಕಲಿಕೆಯ ಗುಣ ಅವರಲ್ಲಿ ಇತ್ತು. ಬೇರೆಯವರ ಚಿತ್ರೀಕರಣ ನಡೆಯುವಾಗಲೂ ಬಂದು ನೋಡುತ್ತಿದ್ದರು. ಇನ್ನಷ್ಟು ಕಲಿಯಲು ಯತ್ನಿಸುತ್ತಿದ್ದರು' ಎಂದಿದ್ದಾರೆ ನಟ ಶಿವರಾಜ್ ಕುಮಾರ್.

'ವಿಜಯ್ ನಟನೆಯ 'ನಾನು ಅವನಲ್ಲ ಅವಳು' ಸಿನಿಮಾ ನಾನು ನೋಡಿದ್ದೇನೆ. ಒಬ್ಬ ನಟನಿಗೆ ರಾಷ್ಟ್ರಪ್ರಶಸ್ತಿ ಏಕೆ ಬರುತ್ತದೆ. ರಾಷ್ಟ್ರಪ್ರಶಸ್ತಿ ಪಡೆಯಬೇಕೆಂದರೆ ಎಂಥಹಾ ನಟನೆ ನೀಡಬೇಕು ಎಂಬುದಕ್ಕೆ ಆ ಸಿನಿಮಾ ಉದಾಹರಣೆ' ಎಂದಿದ್ದಾರೆ ಶಿವಣ್ಣ.
'ಹೆಲ್ಮೆಟ್ ಹಾಕಬೇಕಿತ್ತು ಎಂಬುದು ನಿಜ. ಈ ಘಟನೆಯನ್ನು ಉದಾಹರಣೆಯನ್ನು ಹೆಲ್ಮೆಟ್ ಧರಿಸಿ ಎಂದು ಹೇಳಲು ಸಹ ಬೇಸರವಾಗುತ್ತದೆ. ಆದರೆ ಹೆಲ್ಮೆಟ್ ಧರಿಸಿದ್ದಿದ್ದರೆ ಇಂದಿನ ಸ್ಥಿತಿ ಭಿನ್ನವಾಗಿರುತ್ತಿತ್ತೊ ಏನೋ. ದಯವಿಟ್ಟು ಎಲ್ಲರೂ ಹೆಲ್ಮೆಟ್ ಧರಿಸಿ' ಎಂದಿದ್ದಾರೆ ಶಿವರಾಜ್ ಕುಮಾರ್.
'ಬಹಳ ಸಣ್ಣ ವಯಸ್ಸಿಗೆ ಅವರನ್ನು ದೇವರು ಕರೆಸಿಕೊಂಡು ಬಿಟ್ಟಿದ್ದಾರೆ. ಅವರು ಹೋಗುವಾಗಲೂ ಸಹ ಅಂಗಾಂಗ ದಾನ ಮಾಡಿ ಹಲವರಿಗೆ ಸಹಾಯ ಮಾಡಿ ಹೋಗಿದ್ದಾರೆ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ' ಎಂದಿದ್ದಾರೆ ಶಿವಣ್ಣ.


Click it and Unblock the Notifications











