'ರಾಜಾಹುಲಿ' ಮನೆಯಿಂದ ಸೂಟ್ ಕೇಸ್ ಹಿಡಿದು ಹೊರಟ ಐಟಿ ಅಧಿಕಾರಿಗಳು
ರಾಕಿಂಗ್ ಸ್ಟಾರ್ ಯಶ್ ಮನೆ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, 57 ಗಂಟೆಗಳ ಬಳಿಕ ದಾಳಿ ಅಂತ್ಯಗೊಳಿಸಿದ್ದಾರೆ. ಒಂದು ಸೂಟ್ ಕೇಸ್, ನೋಟ್ ಕೌಂಟಿಂಗ್ ಮಷಿನ್ ಜೊತೆ ಐಟಿ ಆಫಿಸರ್ಸ್ ಮನೆಯಿಂದ ಹೊರ ಹೋಗಿದ್ದಾರೆ. ಅಲ್ಲಿಗೆ ಯಶ್ ಮನೆ ಮೇಲೆ ದಾಳಿ ಮುಗಿದಿದೆ.
ಗುರುವಾರ ಬೆಳಿಗ್ಗೆ ಹೊಸಕೆರೆಹಳ್ಳಿಯಲ್ಲಿರುವ ಯಶ್ ನಿವಾಸ ಹಾಗೂ ಗಾಯಿತ್ರಿ ನಗರದಲ್ಲಿರುವ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ರೇಡ್ ಮಾಡಿದ್ದರು.
ಈ ಸುದ್ದಿ ಕೇಳಿದ ಮುಂಬೈನಲ್ಲಿದ್ದ ಯಶ್, ಬೆಂಗಳೂರಿಗೆ ವಾಪಸ್ ಆಗಿ ತಾಜ್ ವೆಸ್ಟೆಂಟ್ ಹೋಟೆಲ್ ಗೆ ಹೋಗಿದ್ದರು. ಅಲ್ಲಿ ಯಶ್ ಅವರನ್ನ ವಿಚಾರಣೆಗೆ ಒಳಪಡಿಸಿದ ಐಟಿ ಅಧಿಕಾರಿಗಳು, ದಾಖಲೆ, ಆಸ್ತಿ ವಿವರ ಮತ್ತು ಆದಾಯದ ಬಗ್ಗೆ ವಿವರ ಪಡೆದುಕೊಂಡಿದ್ದಾರೆ.
ಐಟಿ ದಾಳಿ ಬಳಿಕ ಮಾತನಾಡಿದ ಯಶ್ ''ವಿಜಯ್ ಕಿರಗಂದೂರ್, ತಿಮ್ಮೆಗೌಡ ಅವರಿಂದ ಐಟಿ ಅಧಿಕಾರಿಗಳು ಬಂದಿದ್ದರು. ಕೆಜಿಎಫ್ ಸಂಬಂಧ ಅಂತ ಗೊತ್ತಿಲ್ಲ. ಅವರು ಕೆಲಸ ಅವರು ಮಾಡಿದ್ದಾರೆ, ನಾವು ಸಹಕಾರ ಕೊಟ್ಟಿದ್ದೇವೆ. ಊಹಾಪೋಹಗಳು ಬೇಡ, ಯಾವುದೇ ಗೊಂದಲ ಬೇಡ'' ಎಂದು ಸ್ಪಷ್ಟನೆ ನೀಡಿದ್ದಾರೆ.

ಹೀಗೆ, ಸತತ ಮೂರನೇ ದಿನ ಯಶ್ ಅವರ ನಿವಾಸದಲ್ಲಿ ಪರಿಶೀಲನೆ ನಡೆಸಿ, ಕೊನೆಗೂ ವಿಚಾರಣೆ ಅಂತ್ಯ ಮಾಡಿದ್ದಾರೆ. ಸದ್ಯಕ್ಕೆ, ಯಶ್ ಮನೆಯಿಂದ ಏನು ವಶಪಡಿಸಿಕೊಂಡಿದ್ದಾರೆ, ಯಾವ ದಾಖಲೆ ಪತ್ರಗಳನ್ನ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.
ಆದ್ರೆ, ಒಂದು ಸೂಟ್ ಕೇಸ್ ಜೊತೆ ಮನೆಯಿಂದ ಹೋಗಿರುವುದು ಕುತೂಹಲ ಮೂಡಿಸಿದೆ. ಇಲ್ಲಿಯವರೆಗೂ ಯಶ್ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.


Click it and Unblock the Notifications











