ಮೂರು ದಿನಗಳ ಐಟಿ ದಾಳಿ, ಅಧಿಕಾರಿಗಳ ಕೈ ಖಾಲಿ ಖಾಲಿ
Recommended Video

ಸ್ಯಾಂಡಲ್ ವುಡ್ ನಟ ಮತ್ತು ನಿರ್ಮಾಪಕರ ಮನೆ ಮೇಲೆ ನಡೆದ ಐಟಿ ರೇಡ್ ಚಿತ್ರರಂಗದ ಇತಿಹಾಸದಲ್ಲೇ 'ಐತಿಹಾಸಿಕ ದಾಳಿ' ಎಂದೇ ಬಿಂಬಿತವಾಗಿತ್ತು. ಸ್ಟಾರ್ ನಟರು ಹಾಗೂ ಕೋಟಿ ನಿರ್ಮಾಪಕರ ಮನೆಯಲ್ಲಿ ಬೇಟೆ ಶುರು ಮಾಡಿದ ಐಟಿ ಇಲಾಖೆಯಿಂದ ಯಾವ ವಿಷ್ಯಗಳು ಹೊರಬೀಳುತ್ತೆ ಎಂಬ ಕುತೂಹಲದಿಂದ ಮಾಧ್ಯಮಗಳು, ಸಾಮಾನ್ಯ ಜನ್ರು ಕಾಯುತ್ತಿದ್ದರು.
ಸತತ ಮೂರು ದಿನ ಪರಿಶೀಲನೆ ಮಾಡಿದ್ದನ್ನ ನೋಡಿ ಬೇರೆ ಏನೋ ಆಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ವಿಚಾರಣೆ ನಡೆಯುತ್ತಿದೆ. ರಾತ್ರಿ-ಹಗಲು ಎನ್ನದೇ ತನಿಖೆ ನಡೆಯುತ್ತಿದೆ ಎಂಬ ಅನುಮಾನಗಳು ಚರ್ಚೆಯಾಗಿದ್ದವು.
ಚಿನ್ನದ ಪರಿಶೋಧಕರು, ಲಾಯರ್ ಗಳು, ಆಡಿಟರ್ ಗಳು, ಐಟಿ ಅಧಿಕಾರಿಗಳ ಚಲನವಲನ ನೋಡಿ ಇದು ಗಂಭೀರ ಪ್ರಕರಣ ಎಂದು ಆತಂಕ ಪಟ್ಟುಕೊಂಡಿದ್ದರು. ಕೊನೆಗೂ ಮೂರು ದಿನದ ನಂತರ ಪುನೀತ್, ಶಿವಣ್ಣ, ಸುದೀಪ್ ಮನೆಯಲ್ಲಿ ಐಟಿ ಪರಿಶೀಲನೆ ಮುಗಿಸಿದ್ದಾರೆ. ಮೂರು ದಿನ ವಿಚಾರಣೆಯಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು? ಮುಂದೆ ಓದಿ....

ಐಟಿ ದಾಳಿ, ಕೈ ಖಾಲಿ ಖಾಲಿ
ಸದ್ಯ, ಪುನೀತ್, ಶಿವರಾಜ್ ಕುಮಾರ್, ಸುದೀಪ್ ಅವರ ಮನೆಯಲ್ಲಿ ಸತತ ಮೂರು ದಿನದ ನಂತರ ಪರಿಶೀಲನೆ ಮುಗಿಸಿದ ಐಟಿ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ ಎಂಬ ಮಾಹಿತಿ ಇದೆ. ಬರಿ ಕೈಯಲ್ಲಿ ಖಾಲಿ ಖಾಲಿಯಾಗಿ ಹೊರಹೋಗಿದ್ದಾರೆ ಎನ್ನಲಾಗಿದೆ. ಸ್ವತಃ ನಟರು ಹೇಳುವ ಪ್ರಕಾರ, ''ಕೆಲವು ದಾಖಲೆ ಪತ್ರಗಳನ್ನ ತೆಗೆದುಕೊಂಡು ಹೋಗಿದ್ದಾರೆ, ಅದಕ್ಕೆ ವಿವರಣೆ ಕೊಡಲು ಸಮಯ ಕೇಳಲಾಗಿದೆ'' ಎಂದಿದ್ದಾರೆ. ಅಲ್ಲಿಗೆ ಈ ರೇಡ್ ಠುಸ್ ಆಗಿದೆ.

ಪುನೀತ್ ಮನೆಯಲ್ಲಿ ಸಿಕ್ಕಿದೇನು?
''ಇದು ಅಕೌಂಟ್ ಗೆ ಸಂಬಂಧಿಸಿದ ಸಾಮಾನ್ಯವಾದ ರೇಡ್, ಇದಕ್ಕೆ ನಾವು ಸಹಕರಿಸಿದ್ದೇವೆ, ನಮಗೂ ಯಾವುದೇ ತೊಂದರೆಯಾಗಿಲ್ಲ. ಕೆಲವು ದಾಖಲೆ ಪತ್ರಗಳನ್ನ ಮಾತ್ರ ತೆಗೆದುಕೊಂಡು ಹೋಗಿದ್ದಾರೆ. ಅದಕ್ಕೆ ವಿವರಣೆ ನೀಡಲು ಮತ್ತೆ ಕರೆದರೇ ಹೋಗಬೇಕಾಗುತ್ತೆ. ಇಲ್ಲವಾದದಲ್ಲಿ ಯಾವುದೇ ತೊಂದರೆ ಇಲ್ಲ'' ಎಂದು ಪುನೀತ್ ಹೇಳಿದ್ದಾರೆ.

ಶಿವಣ್ಣ ಮನೆಯಲ್ಲೂ ಅದೇ ಕಥೆ
ಈ ಕಡೆ ನಾಗವಾರದಲ್ಲಿರುವ ಶಿವರಾಜ್ ಕುಮಾರ್ ಮನೆಯಲ್ಲೂ ಅದೇ ಪರಿಸ್ಥಿತಿ. ಕೆಲವು ದಾಖಲೆ ಪತ್ರಗಳನ್ನ ಬಿಟ್ಟರೇ ಬೇರೆ ಏನೂ ತೆಗೆದುಕೊಂಡು ಹೋಗಿಲ್ಲ ಎಂದು ಸ್ವತಃ ಶಿವಣ್ಣ ಹೇಳಿದ್ದಾರೆ. ಅಲ್ಲಿಗೆ ಅಣ್ಣಾವ್ರ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಏನೂ ಅಕ್ರಮ ಸಿಕ್ಕಿಲ್ಲ ಅಂತ ಆಯ್ತು.

ಸುದೀಪ್ ಮನೆಯಲ್ಲೂ ರೇಡ್ ಅಂತ್ಯ
ಮತ್ತೊಂದೆಡೆ ಕಿಚ್ಚ ಸುದೀಪ್ ಅವರ ಮನೆಯಲ್ಲೂ ಐಟಿ ರೇಡ್ ಅಂತ್ಯವಾಗಿದೆ. ಇಲ್ಲಿಯೂ ಯಾವುದೇ ಮಹತ್ವದ ದಾಖಲೆ ವಶಪಡಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹಾಗ್ನೋಡಿದ್ರೆ, ಸುದೀಪ್ ಮನೆಯಲ್ಲೂ ಐಟಿ ಅಧಿಕಾರಿಗಳು ಖಾಲಿ ಕೈಯಿಂದಲೇ ಹೊರಹೋಗಿದ್ದಾರೆ ಎನ್ನಲಾಗಿದೆ.

ರಾಕ್ ಲೈನ್ ಮತ್ತು ಯಶ್ ಮನೆ ಕಥೆ ಏನು?
ಸದ್ಯ, ಪುನೀತ್, ಶಿವಣ್ಣ, ಸುದೀಪ್ ಮನೆಯಲ್ಲಿ ರೇಡ್ ಅಂತ್ಯವಾಗಿದ್ದು, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಯಶ್, ವಿಜಯ್ ಕಿರಗಂದೂರ್, ಜಯಣ್ಣ, ಸಿಆರ್ ಮನೋಹರ್ ಮನೆಯಲ್ಲಿ ಪರಿಶೀಲನೆ ಅಂತಿಮ ಹಂತದಲ್ಲಿದೆಯಂತೆ. ಇಲ್ಲಿ ಏನಾದರೂ ಲೆಕ್ಕವಿಲ್ಲದ ದಾಖಲೆ ಸಿಗುತ್ತಾ? ಗೊತ್ತಿಲ್ಲ. ಒಟ್ನಲ್ಲಿ, ಮೂರು ದಿನ ರೇಡ್ ನಿಂದ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದು ಮಾತ್ರ ಖಾಲಿ ಎನ್ನಲಾಗಿದೆ.


Click it and Unblock the Notifications











