ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್'ಗೆ ಹಾಲಿವುಡ್ ಮಂದಿ ಬಹುಪರಾಕ್
'KGF- 2' ಬಳಿಕ ವಾಟ್ ನೆಕ್ಸ್ಟ್ ಎನ್ನುತ್ತಿದ್ದವರಿಗೆ ಬಹಳ ತಡವಾಗಿಯೇ ಯಶ್ ಉತ್ತರ ಕೊಟ್ಟಿದ್ದರು. 'ಟಾಕ್ಸಿಕ್' ಸಿನಿಮಾ ಘೋಷಿಸಿದ್ದರು. ಮೇಕಿಂಗ್ ಹಂತದಲ್ಲೇ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬರ್ತಿದೆ.
ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಸ್ವತಃ ಯಶ್ 'ಟಾಕ್ಸಿಕ್' ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಬೆಂಗಳೂರು ಹಾಗೂ ಮುಂಬೈನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಕನ್ನಡದ ಜೊತೆಗೆ ಇಂಗ್ಲೀಷ್ ಭಾಷೆಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಏಕಕಾಲಕ್ಕೆ ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಟಾಕ್ಸಿಕ್' ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ ಎನ್ನುವ ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಕ್ಕಿಲ್ಲ. ಆದರೆ ನಾಯಕಿಯಾಗಿ ಕಿಯಾರಾ ಅದ್ವಾನಿ ಹಾಗೂ ಯಶ್ ಸಹೋದರಿ ಪಾತ್ರದಲ್ಲಿ ನಯನತಾರ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಅಪ್‌ಡೇಟ್ ಸಿಗಲಿದೆ. ಇನ್ನು ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಯಶ್ ಜೊತೆ ಕೆಲಸ ಮಾಡುತ್ತಿರುವ ಅನುಭವವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
"ಟಾಕ್ಸಿಕ್' ಚಿತ್ರದಲ್ಲಿ ನನ್ನ ಸ್ನೇಹಿತ ಯಶ್ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿತು. ಭಾರತದಲ್ಲಿ ಕೆಲಸ ಮಾಡಿದ್ದು ಚೆನ್ನಾಗಿತ್ತು. ಯುರೋಪ್‌ನಾದ್ಯಂತ ಇರುವ ನನ್ನ ಅನೇಕ ಆತ್ಮೀಯ ಸ್ನೇಹಿತರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿತು. ಎಲ್ಲರೂ ಇದನ್ನು ಯಾವಾಗ ನೋಡುತ್ತಾರೆ ಎಂದು ಕಾಯುತ್ತಿದ್ದೇನೆ. ಇದು ನಿಜಕ್ಕೂ ಅದ್ಭುತ. ನಾವು ಏನು ಮಾಡಿದ್ದೇವೋ ಆ ಬಗ್ಗೆ ತುಂಬಾ ಹೆಮ್ಮೆ ಇದೆ" ಎಂದು ಯಶ್ ಜೊತೆಗಿನ ಫೋಟೊ ಹಂಚಿಕೊಂಡು ಪೆರ್ರಿ ಬರೆದುಕೊಂಡಿದ್ದಾರೆ.
ಯೂರೋಪ್ ಕಲಾವಿದರು ಕೂಡ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಮಾಡಿರುವ ಪೋಸ್ಟ್‌ಗೆ ಉಕ್ರೇನ್ ಮೂಲದ ಹಾಲಿವುಡ್ ನಟಿ ನಟಾಲಿ ಬರ್ನ್ ಕಾಮೆಂಟ್ ಮಾಡಿದ್ದಾರೆ. "ಟಾಕ್ಸಿಕ್ ಚಿತ್ರಕ್ಕಾಹಿ ನಿಮ್ಮೊಂದಿಗೆ(ಜೆಜೆ ಪೆರ್ರಿ), ಯಶ್ ಮತ್ತು ನಿಮ್ಮ ಇಡೀ ತಂಡದೊಂದಿಗೆ ಕೆಲಸ ಮಾಡುವುದು ಅದ್ಭುತ ಅನುಭವವಾಗಿತ್ತು. ಭಾರತಕ್ಕೆ ಬಂದು ನಿಮ್ಮ ಅದ್ಭುತ ತಂಡದ ಭಾಗವಾಗಲು ಅವಕಾಶ ಸಿಕ್ಕಿದ್ದಕ್ಕಾಗಿ ನಾನು ನಿಜವಾಗಿಯೂ ಕೃತಜ್ಞಳಾಗಿದ್ದೇನೆ. ನಾನು ನಿಮ್ಮೆಲ್ಲರಿಂದ ಬಹಳಷ್ಟು ಕಲಿತಿದ್ದೇನೆ. ಈ ಅನುಭವಕ್ಕಾಗಿ ನಾನು ಶಾಶ್ವತವಾಗಿ ಕೃತಜ್ಞನಾಗಿದ್ದೇನೆ. ಜಗತ್ತು 'ಟಾಕ್ಸಿಕ್' ಚಿತ್ರವನ್ನು ಯಾವಾಗ ನೋಡುತ್ತದೆ ಎಂದು ನಾನು ಕಾಯುತ್ತಿದ್ದೇನೆ" ಎಂದು ಕಾಮೆಂಟ್ ಮಾಡಿದ್ದಾರೆ.
ಸದ್ಯ ಹಾಲಿವುಡ್ ಸ್ಟಂಟ್‌ಮನ್ ಹಾಗೂ ನಟಿ 'ಟಾಕ್ಸಿಕ್' ಸಿನಿಮಾ ಬಗ್ಗೆ ಮಾತನಾಡಿರುವುದನ್ನು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಈಗಾಗಲೇ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂದಿದ್ದ ಟೀಸರ್ ಹಿಟ್ ಆಗಿ ದಾಖಲೆ ಬರೆದಿದೆ. ಶೀಘ್ರದಲ್ಲೇ ಚಿತ್ರದ ಬಗ್ಗೆ ಅಪ್‌ಡೇಟ್ ಸಿಗುತ್ತದೆ ಎಂದು ಅಭಿಮಾನಿಗಳು ಕಾಯುವಂತಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇದೇ ಏಪ್ರಿಲ್ 10ರಂದು ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಿದೆ.
ರಾಜೀವ್ ರವಿ 'ಟಾಕ್ಸಿಕ್' ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಗೀತು ಮೋಹನ್ ದಾಸ್ ಕಥೆ ಬರೆದಿದ್ದು ಯಶ್ ಜೊತೆ ಸೇರಿ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ರವಿ ಬಸ್ರೂರು ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಾರೆ ಎನ್ನಲಾಗ್ತಿದೆ. ತಾರಾ ಸುತಾರಿಯಾ, ಅಚ್ಯುತ್ ಕುಮಾರ್, ಸುದೇವ್ ನಾಯರ್, ಅಮಿತ್ ತಿವಾರಿ, ಡೇರೆಲ್ ಡಿಸಿಲ್ವಾ, ಅಕ್ಷಯ್ ಒಬೆರಾಯ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.


Click it and Unblock the Notifications











