‘Jackie’ Turns 15: 'ಜಾಕಿ' 15 ವರ್ಷ ಪೂರೈಸಿದ ಸಂಭ್ರಮದಲ್ಲೂ ಆ ಕೊರಗು ಕಾಡ್ತಿದೆ ಎಂದ ನಟಿ ಭಾವನಾ
ಪುನೀತ್ ರಾಜ್‌ಕುಮಾರ್ ಹಾಗೂ ದುನಿಯಾ ಸೂರಿ ಜೋಡಿಯಾ ಬ್ಲಾಕ್‌ಬಸ್ಟರ್ 'ಜಾಕಿ' ಸಿನಿಮಾ ಮರೆಯೋಕೆ ಸಾಧ್ಯವಿಲ್ಲ. ಕಳೆದ ವರ್ಷ ಅಪ್ಪು ಹುಟ್ಟುಹಬ್ಬಕ್ಕೆ ಹೊಸ ರೂಪದಲ್ಲಿ ಸಿನಿಮಾ ರೀ-ರಿಲೀಸ್ ಆಗಿ ಹಿಟ್ ಆಗಿತ್ತು. ಸದ್ಯ ಈ ಎವರ್‌ಗ್ರೀನ್ ಚಿತ್ರಕ್ಕೆ 15 ವರ್ಷಗಳ ಸಂಭ್ರಮ. ಈ ಬಗ್ಗೆ ನಾಯಕಿ ಭಾವನಾ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿ ಸಂತಸ ಹಂಚಿಕೊಂಡಿದ್ದಾರೆ.
ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ 'ಜಾಕಿ' ಸಿನಿಮಾ ನಿರ್ಮಿಸಿದ್ದರು. ವಿ. ಹರಿಕೃಷ್ಣ ಸಂಗೀತ ಹಾಗೂ ಯೋಗರಾಜ್ ಭಟ್ ಸಾಹಿತ್ಯ ಆಲ್ಬಮ್ ಚಿತ್ರಕ್ಕೆ ಪ್ಲಸ್ ಆಗಿತ್ತು. ಚಿತ್ರದ ಎಲ್ಲಾ ಹಾಡುಗಳು ಹಿಟ್ ಲಿಸ್ಟ್ ಸೇರಿದ್ದವು. ಪುನೀತ್ ಜೋಡಿಯಾಗಿ ಭಾವನಾ ಮಿಂಚಿದ್ದರು. ಮತ್ತೊಂದು ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ಮಿಂಚಿದ್ದರು.

ಇದು ಪಕ್ಕಾ ಸುಕ್ಕಾ ಸೂರಿ ಸ್ಟೈಲ್ ಸಿನಿಮಾ. ಜಾನಕಿರಾಮ ಅಲಿಯಾಸ್ 'ಜಾಕಿ'ಯ ಜೀವನದ ಜರ್ನಿ ಕಥೆ ಇದು. ತನ್ನ ಊರಿನಲ್ಲಿ ತಾನಾಯ್ತು ತನ್ನ ಕೆಲ್ಸ ಆಯ್ತು ಅಂತ ಇದ್ದವನು ಆಪ್ತ ಬಳಗದ ಹುಡುಗಿ ಯಶೋಧ ಪ್ರೀತಿಗೆ ಸಹಾಯ ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳುತ್ತಾನೆ. ಆದರೆ ಮಾನ ಕಳ್ಳಸಾಗಣೆ ಬಲೆಗೆ ಬೀಳುತ್ತಾಳೆ. ಮಾಡದ ತಪ್ಪಿಗೆ ಪೊಲೀಸರ ಕಣ್ಣಲ್ಲಿ ಕ್ರಿಮಿನಲ್ ಆಗಿ ತಗ್ಲಾಕಿಕೊಂಡು ಮತ್ತೊಂದು ಕಡೆ ಯಶೋಧಳನ್ನು ಹುಡುಕುತ್ತಾ ಜಾಕಿ ಬೆಂಗಳೂರು ಎನ್ನುವ ಮಾಯಾನಗರಿಗೆ ಬರ್ತಾನೆ. ಪೊಲೀಸರು ಅಂದು ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಅವನು ಮುಂದೆ ಪೊಲೀಸರಿಗೆ ಪರಮಾಪ್ತನಾಗಿಬಿಡುತ್ತಾನೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಸಿನಿಮಾ ಕಥೆ.
ಎಲ್ಲಿಂದ ಎಲ್ಲಿಗೂ ಕರೆದುಕೊಂಡು ಹೋಗುವ ಕಥೆ ಪ್ರೇಕ್ಷಕರನ್ನು ರಂಜಿಸುತ್ತಾ ಸಾಗುತ್ತದೆ. ಅಭಿಮಾನಿಗಳಿಗೆ ಅದರಲ್ಲೂ ಮಾಸ್ ಪ್ರೇಕ್ಷಕರಿಗೆ ಭರ್ಜರಿ ಬಾಡೂಟದಂತಹ ಸಿನಿಮಾ ಇದು. ಅವತ್ತಿನ ಕಾಲಕ್ಕೆ ಅಂದಾಜು 7 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 18 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಅಪ್ಪು ಅಭಿಮಾನಿಗಳು 'ಜಾಕಿ' ಸಿನಿಮಾ ಮರೆಯೋಕೆ ಸಾಧ್ಯವಿಲ್ಲ. ಮತ್ತೆ ಪುನೀತ್ ಜೊತೆ ಸೂರಿ ಕೈ ಜೋಡಿಸಿದ್ರು 'ಅಣ್ಣಾ ಬಾಂಡ್' ಚಿತ್ರದಲ್ಲಿ ಜಾಕಿ ಮ್ಯಾಜಿಕ್ ಕ್ರಿಯೇಟ್ ಆಗಲಿಲ್ಲ.

'ಜಾಕಿ' ಕನ್ನಡದಲ್ಲಿ ನಟಿ ಭಾವನಾ ಅವರಿಗೆ ಮೊದಲ ಸಿನಿಮಾ. ಕೇರಳದ ತ್ರಿಶೂರ್‌ನಲ್ಲಿ ಹುಟ್ಟಿಬೆಳೆದ ಆಕೆ ಬಳಿಕ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು. 'ಜಾಕಿ' ಚಿತ್ರದಲ್ಲಿ ಅಪ್ಪುಗೆ ಜೊತೆಯಾಗಿ ಕಮಾಲ್ ಮಾಡಿದ್ದರು. ಹಾಡುಗಳಲ್ಲಿ ಸೊಸಗಾಗಿ ಕಾಣಿಸಿಕೊಂಡು ಕುಣಿದು ರಂಗೇರಿಸಿದ್ದರು. ಮುಂದೆ ಕನ್ನಡದಲ್ಲಿ 'ವಿಷ್ಣುವರ್ಧನ', 'ರೋಮಿಯೊ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. 'ರೋಮಿಯೊ' ಚಿತ್ರದ ನಿರ್ಮಾಪಕ ನವೀನ್ ಅವರನ್ನು ಮದುವೆ ಆಗಿ ಬೆಂಗಳೂರು ಸೊಸೆ ಆಗಿಬಿಟ್ಟರು. ಹಾಗಾಗಿ 'ಜಾಕಿ' ಅವರ ಜೀವನದಲ್ಲಿ ಬಹಳ ಮುಖ್ಯವಾದ ಸಿನಿಮಾ.
ಲಕ್ಷ್ಮಿ ಎಂಬ ಮುಗ್ಧ ಹುಡುಗಿ ಪಾತ್ರದಲ್ಲಿ ಭಾವನಾ ನಟಿಸಿದ್ದರು. ಜಾಕಿಯ ಜರ್ನಿಯ ನಡುವೆ ಆತನಿಗೆ ಆಕೆ ಜೊತೆಯಾಗುತ್ತಾಳೆ. ಈ ಹಾದಿಯಲ್ಲಿ ಲಕ್ಷ್ಮಿ ಮುಂದೆ ಆತನ ಮನಸ್ಸಿಗೆ ಆಪ್ತವಾಗಿ ಕೊನೆಗೆ ಜೋಡಿ ಒಂದಾಗುತ್ತದೆ. ಹೆಚ್ಚು ಡೈಲಾಗ್‌ಗಳು ಇಲ್ಲದೇ ಇದ್ದರೂ ಭಾವನಾ ಇಷ್ಟವಾಗುತ್ತಾರೆ. ಸದ್ಯ 'ಜಾಕಿ' ಸಿನಮಾ 15 ವರ್ಷ ಪೂರೈಸಿರುವ ಬಗ್ಗೆ ಭಾವನಾ ಪ್ರತಿಕ್ರಿಯಿಸಿದ್ದಾರೆ.
"ಜಾಕಿ ಚಿತ್ರ ಬಂದು 15 ವರ್ಷ ಆಗಿದೆ ಎನ್ನುವುದೇ ಅಚ್ಚರಿ. ವರ್ಷದ ಹಿಂದೆ ಸಿನಿಮಾ ಮಾಡಿದಂತಿದೆ. ಕನ್ನಡದಲ್ಲಿ ಇದು ನನ್ನ ಮೊದಲ ಸಿನಿಮಾ. ಬಹಳ ಇಷ್ಟದ ಸಿನಿಮಾ. ಪುನೀತ್ ಸರ್, ಸೂರಿ ಸರ್ ಜೊತೆ ಸಿನಿಮಾ ಮಾಡಿದ್ದ ಖುಷಿಯ ವಿಚಾರ. ಬಹಳ ಸಂತಸದ ವಿಷಯ ಇದು, ಪುನೀತ್ ಸರ್ ಇಲ್ಲ ಎನ್ನುವ ಕೊರಗಿದೆ. ಅವರೊಟ್ಟಿಗೆ 'ಯಾರೇ ಕೂಗಾಡಲಿ' ಹಾಗೂ 'ಮೈತ್ರಿ' ಚಿತ್ರದಲ್ಲಿ ಕೂಡ ನಾವಿಬ್ಬರು ಒಟ್ಟಿಗೆ ನಟಿಸಿದ್ದೆವು. ಮರೆಯೋಕೆ ಸಾಧ್ಯವಿಲ್ಲ" ಎಂದು ಭಾವನಾ ಹೇಳಿದ್ದಾರೆ.
ಇದು ನನ್ನ ಮೊದಲ ಕನ್ನಡ ಸಿನಿಮಾ ಆಗಿತ್ತು. ಕನ್ನಡ ಮಾತನಾಡಲು ಡೈಲಾಗ್ ಹೇಳಲು ಅಷ್ಟಾಗಿ ಬರುತ್ತಿರಲಿಲ್ಲ. ಎಲ್ಲರೂ ಸಹಾಯ ಮಾಡಿದ್ರು. ಕನ್ನಡ ಉಚ್ಚಾರಣೆ ಅಪ್ಪು ಸರ್ ಹೇಳಿಕೊಡ್ತಿದ್ರು. ಸೌತ್ ಆಫ್ರಿಕಾ, ಸ್ವಿಟ್ಜರ್‌ಲ್ಯಾಂಡ್, ಇಟಲಿಯಾಗಿ ಸುತ್ತಾಡಿ ಚಿತ್ರೀಕರಣ ಮಾಡಿದ್ದೆವು. ಶೂಟಿಂಗ್ ಸಖತ್ ಫನ್ ಆಗಿತ್ತು. ಅದನ್ನೆಲ್ಲಾ ಮರೆಯೋಕೆ ಸಾಧ್ಯವಿಲ್ಲ. 'ಶಿವ ಅಂತ ಹೋಗುತ್ತಿದ್ದೆ', 'ಎರಡೂ ಜಡೆಯನ್ನು' ಹೀಗೆ ಎಲ್ಲಾ ಸಾಂಗ್ಸ್ ಇಷ್ಟ, ಚೆನ್ನಾಗಿತ್ತು. ಒಂದರ್ಥದಲ್ಲಿ ಜಾಕಿ ಸಿನಿಮಾ ನನ್ನ ಜೀವನದಲ್ಲಿ ಬದಲಾವಣೆ ತಂದಿತ್ತು" ಎಂದು ಭಾವನಾ ವಿವರಿಸಿದ್ದಾರೆ.


Click it and Unblock the Notifications











