Jackie Re-Release: ಮತ್ತೆ ಬಂದ 'ಜಾಕಿ'ಗೆ ಭರ್ಜರಿ ಸ್ವಾಗತ; ಮಧ್ಯರಾತ್ರಿಯಿಂದ್ಲೇ ಥಿಯೇಟರ್‌ಗಳಲ್ಲಿ ಹಬ್ಬ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಸಿನಿಮಾ ರೀ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಹೊಸದಾಗಿ ಅಪ್ಪು ಸಿನಿಮಾ ಬಿಡುಗಡೆಯಾದಾಗ ಸಿಕ್ಕಂತೆ ರೆಸ್ಪಾನ್ಸ್ ಸಿಕ್ತಿದೆ. ಮತ್ತೆ ತೆರೆಮೇಲೆ ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಕೆಲ ಶೋಗಳು ಹೌಸ್‌ಫುಲ್ ಆಗಿ 'ಜಾಕಿ' ಆರ್ಭಟ ಜೋರಾಗಿದೆ.
14 ವರ್ಷಗಳ ಹಿಂದೆ 'ಜಾಕಿ' ಚಿತ್ರವನ್ನು ದುನಿಯಾ ಸೂರಿ ಕಟ್ಟಿಕೊಟ್ಟಿದ್ದರು. ಅಪ್ಪು ಜೊತೆಗೆ ಭಾವನಾ ಮೆನನ್ ನಾಯಕಿಯಾಗಿ ಮಿಂಚಿದ್ದರು. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಜಾಕಿ' ಚಿತ್ರವನ್ನು ರೀ ರಿಲೀಸ್ ಮಾಡುವ ಪ್ರಯತ್ನ ಮಾಡಿದೆ. ನವೀಕರಣಗೊಂಡ ಆಡಿಯೋ ಜೊತೆಗೆ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಅಭಿಮಾನಿಗಳಂತೂ ಅಡ್ವಾನ್ಸ್ ಆಗಿ ಟಿಕೆಟ್ ಬುಕ್ ಮಾಡಿಕೊಂಡು ಸಿನಿಮಾ ನೋಡಲು ಕಾಯುತ್ತಿದ್ದರು.

ಕಟೌಟ್, ಬ್ಯಾನರ್, ಹಾರ, ಪಟಾಕಿ, ಜೈಕಾರ ಸೇರಿ ಥಿಯೇಟರ್‌ಗಳಲ್ಲಿ 'ಜಾಕಿ' ಸಡಗರ ಮುಗಿಲುಮುಟ್ಟಿದೆ. ಭಾನುವಾರ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. 2 ದಿನ ಮೊದ್ಲೆ 'ಜಾಕಿ' ಬಂದು ಆ ಸಂಭ್ರಮ ಹೆಚ್ಚಿಸಿದ್ದಾನೆ. ರಾಜ್ಯಾದ್ಯಂತ ದೊಟ್ಟಮಟ್ಟದಲ್ಲೇ 'ಜಾಕಿ' ಸಿನಿಮಾ ತೆರೆಗಪ್ಪಳಿಸಿದೆ. ಅಡ್ವಾನ್ಸ್ ಬುಕ್ಕಿಂಗ್‌ಗೂ ಕೂಡ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಬೆಂಗಳೂರು, ಮೈಸೂರಿನಲ್ಲಿ ಸಿನಿಮಾ ಬಿಡುಗಡೆಗೂ ಮುನ್ನ ತಲಾ 2 ಶೋ ಸೋಲ್ಡೌಟ್ ಆಗಿತ್ತು.
ನಗರದ ಕೆ. ಜಿ ರಸ್ತೆಯ ನರ್ತಕಿ ಹಾಗೂ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದೆ. ಈ ಎರಡು ಥಿಯೇಟರ್‌ಗಳಲ್ಲಿ ಸೂರ್ಯ ಹುಟ್ಟುವ ಮುನ್ನ 'ಜಾಕಿ' ಸಿನಿಮಾ ಶೋಗಳು ಆರಂಭವಾಗಿತ್ತು. ಚಿತ್ರದಲ್ಲಿ ಜಾನಕಿರಾಮ ಅಲಿಯಾಸ್ ಜಾಕಿ ಆಗಿ ಅಪ್ಪು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಹಲವು ವರ್ಷಗಳ ಹಿಂದೆ 'ಜಾಕಿ' ಸಿನಿಮಾ ಬಿಡುಗಡೆಯಾದಾಗ ಇದೇ ರೀತಿಯ ರೆಸ್ಪಾನ್ಸ್, ಸೆಲೆಬ್ರೇಷನ್ ಕಂಡು ಬಂದಿತ್ತು. ಇದೀಗ ಅದು ಪುನರಾವರ್ತನೆ ಆಗುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಪವರ್ ಸ್ಟಾರ್ 'ಜಾಕಿ' ಫೀವರ್ ಜೋರಾಗಿದೆ. ಥಿಯೇಟರ್‌ಗಳ ಮುಂದೆ ಹೌಸ್‌ಫುಲ್ ಬೋರ್ಡ್‌ಗಳು ಬಿದ್ದಿವೆ. ಕನ್ನಡ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಿಲ್ಲ ಎನ್ನುವ ಚರ್ಚೆ ನಡುವೆ 'ಜಾಕಿ'ಯನ್ನು ನೋಡಲು ಜನ ಮುಗಿಬಿದ್ದಿದ್ದಾರೆ.
ಮೊದಲಿಗೆ 'ಜಾಕಿ' ಸಿನಿಮಾ ಬಿಡುಗಡೆಯಾದಾಗ ಕೆ. ಜಿ ರಸ್ತೆಯ 'ಸಂತೋಷ್' ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಈ ಬಾರಿ ಪಕ್ಕದ ನರ್ತಕಿ ಚಿತ್ರಮಂದಿರಕ್ಕೆ ಸಿನಿಮಾ ಬಂದಿದೆ. ನರ್ತಕಿ ಅಪ್ಪು ಫೇವರಿಟ್ ಥಿಯೇಟರ್. ಅಲ್ಲಿ ತೆರೆಕಂಡ ಸಾಕಷ್ಟು ಪುನೀತ್ ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಇನ್ನು ಪ್ರಸನ್ನ ಅರ್ಲಿ ಮಾರ್ನಿಂಗ್ ಶೋಗಳಿಗೆ ಅಭಿಮಾನಿಗಳು ಬೆಳ್ಳಿ ಪರದೆ ಮುಂದೆ ಕುಣಿದು ಸಂಭ್ರಮಿಸಿದ್ದಾರೆ.
'ಜಾಕಿ' ಸಿನಿಮಾ ನೋಡ್ತಾ ನೋಡ್ತಾ ಸಂಭ್ರಮಾಚರಣೆ ವೇಳೆ ಅಭಿಮಾನಿಗಳು ಅಪ್ಪು ನೆನೆದು ಕಣ್ಣೀರಾಗುತ್ತಿದ್ದಾರೆ. ಇನ್ನು 'ಜಾಕಿ' ಮೊದಲಿಗೆ ಬಿಡುಗಡೆ ಆಗಿದ್ದ ಸಮಯದಲ್ಲಿದ್ದ ಕ್ರೇಜ್, ಸೆಲೆಬ್ರೇಷನ್ ಅಭಿಮಾನಿಗಳು ಇನ್ನು ಮರೆತ್ತಿಲ್ಲ. 2010ರ ಏಪ್ರಿಲ್‌ನಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ 'ಪೃಥ್ವಿ' ಚಿತ್ರದಲ್ಲಿ ನಟಿಸಿದ್ದರು. ಜೇಕಬ್ ವರ್ಗೀಸ್ ನಿರ್ದೇಶನದ ಈ ಚಿತ್ರದಲ್ಲಿ ಅಪ್ಪು ಜಿಲ್ಲಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಪೃಥ್ವಿಕುಮಾರ್ ಪಾತ್ರದಲ್ಲಿ ಪುನೀತ್ ಖಡಕ್ ಲುಕ್, ಡೀಸೆಂಟ್ ಅಭಿನಯದ ಪ್ರೇಕ್ಷಕರ ಮನಗೆದ್ದಿತ್ತು. ಅದಾಗಿ 5 ತಿಂಗಳ ಬಳಿಕ ಮಾಸ್ 'ಜಾಕಿ' ಆಗಮನವಾಗಿತ್ತು. ಪಕ್ಕಾ ಲೋಕಲ್ ಹುಡುಗನಾಗಿ ಪುನೀತ್ ಎಲ್ಲರ ಹುಬ್ಬೇರಿಸಿತ್ತು. ರಗಡ್ ಯುವಕನ ಪಾತ್ರದಲ್ಲಿ ಮೋಡಿ ಮಾಡಿದ್ದರು. ಫೈಟ್ಸ್ ಹಾಗೂ ಸಾಂಗ್ಸ್ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿತ್ತು. ಫೈರ್ ಫೈಟ್, ಹುಚ್ಚನ ವೇಷದಲ್ಲಿ ಮಾಡುವ ಫೈಟ್, ಬಿದಿರು ಮೆಳೆಗಳ ನಡುವೆ ನಡೆಯುವ ಫೈಟ್ ಎಲ್ಲವೂ ಅಭಿಮಾನಿಗಳಿಗೆ ಸಖತ್ ಮಜಾ ಕೊಟ್ಟಿತ್ತು.

ವಿ. ಹರಿಕೃಷ್ಣ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ ಬಂದ 'ಜಾಕಿ' ಆಲ್ಬಮ್ ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ರಂಗಾಯಣ ರಘು, ಶೋಭರಾಜ್, ಹಿರಿಯ ನಟಿ ಸುಮಿತ್ರಾ ಸೇರಿದಂತೆ ಅನುಭವಿ ಕಲಾವಿದರು ಚಿತ್ರದಲ್ಲಿದ್ದಾರೆ.


Click it and Unblock the Notifications











