ನವರಸ ನಾಯಕನ ಬರ್ತ್‌ಡೇಗೆ ಮೋದಿ ವಿಶ್; ಮೋದಿಗೆ ವಿಶೇಷ ಗಿಫ್ಟ್ ಕೊಟ್ಟ ಜಗ್ಗೇಶ್
ಮಾರ್ಚ್ 17 ಎಂದ ಕೂಡಲೇ ಕನ್ನಡ ಸಿನಿ ರಸಿಕರಿಗೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಎಂಬುದು ನೆನಪಾಗುತ್ತದೆ. ಈ ದಿನದಂದು ಕನ್ನಡದ ಮತ್ತೋರ್ವ ನಟ, ವಿಧಾನಪರಿಷತ್‌ನ ಸದಸ್ಯ ಜಗ್ಗೇಶ್ ಅವರ ಹುಟ್ಟುಹಬ್ಬವೂ ಸಹ ಇದೆ. ಸದ್ಯ ಜಗ್ಗೇಶ್ ಹುಟ್ಟುಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, 1963ರ ಮಾರ್ಚ್ 17ರಂದು ತುರುವೇಕೆರೆಯಲ್ಲಿ ಜನಿಸಿದ್ದ ಜಗ್ಗೇಶ್ 60 ವರ್ಷಗಳನ್ನು ಪೂರೈಸಲಿದ್ದಾರೆ.
ಇನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿಯಾಗಿರುವ ಜಗ್ಗೇಶ್ ತಮ್ಮ ಈ ವರ್ಷದ ಹುಟ್ಟುಹಬ್ಬದ ಮುನ್ನವೇ ಮೋದಿ ಅವರನ್ನು ಭೇಟಿಯಾಗಿದ್ದಾರೆ. ತಮ್ಮ ಮಗ ಹಾಗೂ ಪತ್ನಿ ಜತೆ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವ ಜಗ್ಗೇಶ್ ಹುಟ್ಟುಹಬ್ಬಕ್ಕೆ ಮುಂಚಿತವಾಗಿ ಮೋದಿ ಅವರಿಂದ ಶುಭ ಹಾರೈಕೆಗಳನ್ನೂ ಸಹ ಪಡೆದುಕೊಂಡಿದ್ದಾರೆ.

ಈ ಭೇಟಿಯ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜಗ್ಗೇಶ್ "ನನ್ನ ಹುಟ್ಟುಹಬ್ಬಕ್ಕೆ ಮುಂಚಿತವಾಗಿ ಆಶೀರ್ವಾದ ಪಡೆದುಕೊಳ್ಳುವ ಅವಕಾಶವನ್ನು ನೀಡಿದ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನನ್ನ ಬದುಕಿನ ಶ್ರೇಷ್ಠದಿನ ಇಂದು, ಮಾರ್ಚ್ 17 ನನ್ನ ಹುಟ್ಟುದಿನ, ಈ ವರ್ಷ ನನಗೆ 60ನೇ ವಸಂತ,ನನ್ನ ನೆಚ್ಚಿನ ಪ್ರಧಾನಿಗಳು ನನ್ನ ಹಾಗು ಹೆಂಡತಿ ಮಗನ ಮನತುಂಬಿ ಹರಸಿದರು.ಅವರಿಗೆ ನನ್ನ ಗುರುಗಳು ರಾಯರ ವಿಗ್ರಹ ಸಮರ್ಪಿಸಿದೆ" ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ಜಗ್ಗೇಶ್ ತಮ್ಮ ಹುಟ್ಟುಹಬ್ಬಕ್ಕೆ ಇನ್ನೂ ಮೂರು ದಿನಗಳು ಬಾಕಿ ಇರುವಾಗ ತಮ್ಮ ನೆಚ್ಚಿನ ವ್ಯಕ್ತಿಯನ್ನು ಭೇಟಿಯಾಗಿ ಅವರಿಂದ ಹುಟ್ಟುಹಬ್ಬದ ಅಂಗವಾಗಿ ಆಶೀರ್ವಾದ ಪಡೆದು, ರಾಯರ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ ಖುಷಿಯಲ್ಲಿ ತೇಲುತ್ತಿದ್ದಾರೆ. ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ್ಮದಿನದ ಆಚರಣೆ ಸಮೀಪದಲ್ಲಿ ಮೋದಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ನೀವೇ ಧನ್ಯ ಎಂದು ಹಲವಾರು ಬೆಂಬಲಿಗರು ಕಾಮೆಂಟ್ ಮಾಡಿದ್ದಾರೆ.

ಇನ್ನು ರಾಜಕೀಯ ಪ್ರವೇಶ ಮಾಡಿದಾಗಿನಿಂದ ಹೆಚ್ಚು ಸಿನಿಮಾಗಳಲ್ಲಿ ನಟಿಸದ ಜಗ್ಗೇಶ್ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿದ್ದು, ಆಗೊಂದು ಈಗೊಂದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ತೋತಾಪುರಿ ಎಂಬ ಚಿತ್ರದಲ್ಲಿ ನಟಿಸಿದ್ದ ಜಗ್ಗೇಶ್ ಅಭಿನಯದ ಇನ್ನೂ ಎರಡು ಚಿತ್ರಗಳು ಬಿಡುಗಡೆಯಾಗಬೇಕಿದೆ.
ರಂಗನಾಯಕ ಎಂಬ ಚಿತ್ರ ಚಿತ್ರೀಕರಣ ಇನ್ನೂ ಮುಗಿಯಬೇಕಿದ್ದು, ರಾಘವೇಂದ್ರ ಸ್ಟೋರ್ಸ್ ಬಿಡುಗಡೆಗೆ ತಯಾರಾಗಿದೆ. ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೆ ಸಂತೋಷ್ ಆನಂದ್‌ರಾಮ್ ಆಕ್ಷನ್ ಕಟ್ ಹೇಳಿದ್ದು, ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬಂಡವಾಳವನ್ನು ಹೂಡಿದೆ. ಈ ಚಿತ್ರ ಇದೇ ಏಪ್ರಿಲ್ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಹಿರಿಯ ನಟನೋರ್ವನ ಚಿತ್ರಕ್ಕೆ ಬಂಡವಾಳ ಹೂಡಿರುವ ಏಕೈಕ ಚಿತ್ರ ಎಂಬ ವಿಶೇಷತೆಯನ್ನೂ ಸಹ ಈ ರಾಘವೇಂದ್ರ ಸ್ಟೋರ್ಸ್ ಚಿತ್ರ ಹೊಂದಿದೆ.
ಇನ್ನು ತಮ್ಮ ಈ ರಾಘವೇಂದ್ರ ಸ್ಟೋರ್ಸ್ ಚಿತ್ರವನ್ನು ಸ್ವತಃ ತಾವೇ ವೀಕ್ಷಿಸಿದ್ದ ಜಗ್ಗೇಶ್ ಇತ್ತೀಚೆಗಷ್ಟೆ ಈ ಚಿತ್ರ ಹೇಗಿದೆ ಎಂದು ಪ್ರೇಕ್ಷಕನ ರೀತಿ ಟ್ವೀಟ್ ಮಾಡಿದ್ದರು. "ರಾಘವೇಂದ್ರ ಸ್ಟೋರ್ಸ್ ಸಿನಿಮಾ ನೋಡಿದೆ. ಅದ್ಭುತ ನಿರ್ದೇಶನ, ಅದ್ಭುತ ಸಂಗೀತ, ಅದ್ಭುತ ಸಂಕಲನ, ಅದ್ಭುತ ಛಾಯಾಗ್ರಹಣ, ಒಟ್ಟಾರೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಅದ್ಭುತ ಚಿತ್ರ. ಧನ್ಯವಾದ ಇಂಥ ಅದ್ಭುತ ಚಿತ್ರ ಕಟ್ಟಿಕೊಟ್ಟ ಸಂತೋಷ್ ಆನಂದ್‌ರಾಮ್ ಅವರಿಗೆ. ನನ್ನ ಪ್ರಕಾರ ಈ ಚಿತ್ರ ಕನ್ನಡಿಗರ ಮನಗೆಲ್ಲುತ್ತದೆ, ಬಹಳ ವರ್ಷ ನೆನಪಿನಲ್ಲಿ ಉಳಿಯುತ್ತದೆ. ಅತಿ ಶೀಘ್ರದಲ್ಲೇ ಚಿತ್ರಮಂದಿರದಲ್ಲಿ.." ಎಂದು ಜಗ್ಗೇಶ್ ಬರೆದುಕೊಂಡಿದ್ದರು.


Click it and Unblock the Notifications











