ಮೇಕಪ್ ಕಲಾವಿದನ ಸಾವಿಗೆ ಜಗ್ಗೇಶ್ ಸಂತಾಪ: ಎಷ್ಟು ಜನರ ಜೀವ ಕಸಿದು ಹೋಗುತ್ತದೆ?
ಕನ್ನಡ ಸಿನಿಮಾರಂಗದಲ್ಲಿ ಮೇಕಪ್ ಸೀನಣ್ಣ ಎಂದೇ ಖ್ಯಾತಿ ಗಳಿಸಿಕೊಂಡಿದ್ದ ಶ್ರೀನಿವಾಸ್ ಅವರು ಬುಧವಾರ ಕೊನೆಯುಸಿರೆಳೆದರು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀನಿವಾಸ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಮೇಕಪ್ ಸೀನಣ್ಣನ ಸಾವಿಗೆ ಹಿರಿಯ ನಟ ಜಗ್ಗೇಶ್ ಸಂತಾಪ ಸೂಚಿಸಿದ್ದಾರೆ. ''ನನ್ನ ಅಚ್ಚುಮೆಚ್ಚಿನ ಶಿಷ್ಯ ಸೀನ. ಸಣ್ಣ ಹುಡುಗನಿಂದ ನನ್ನ ಚಿತ್ರಗಳಲ್ಲಿ ಕಾರ್ಯಮಾಡಿ ಬೆಳೆದವ. ನನ್ನ ಮ್ಯಾನೇಜರ್ ಮಾದೆಗೌಡರ ಶಿಷ್ಯ. ಫೆಬ್ರವರಿ ತೋತಾಪುರಿ ಚಿತ್ರದಲ್ಲಿ ನನ್ನೊಟ್ಟಿಗೆ ಕಾರ್ಯ ಮಾಡಿದ ಸಂಭಾವಿತ ಹುಡುಗ'' ಎಂದು ಮರುಗಿದ್ದಾರೆ.
ಕೋವಿಡ್ ಸಂಕಷ್ಟದಲ್ಲಿ ಚಿತ್ರರಂಗದಿಂದ ಹಲವರು ಪ್ರಾಣ ಕಳೆದುಕೊಂಡರು. ಇದೇ ಸಮಯದಲ್ಲಿ ಮೇಕಪ್ ಸೀನಣ್ಣನ ಜೀವನ ಅಂತ್ಯವಾಗಿದೆ. ನಿರಂತರವಾಗಿ ಸಾವಿನ ಸುದ್ದಿ ಕೇಳುತ್ತಿರುವ ಜಗ್ಗೇಶ್ ''ಎಲ್ಲಿಗೆ ಹೋಗಿ ನಿಲ್ಲುತ್ತದೆ. ಎಷ್ಟುಜನರ ಜೀವ ಕಸಿದುಹೋಗುತ್ತದೆ. ಎಂದು ಇದರಿಂದ ಮುಕ್ತಿ?'' ಎಂದು ಬೇಸರ ಹೊರಹಾಕಿದ್ದಾರೆ.

ಮೇಕಪ್ ಶ್ರೀನಿವಾಸ್ ಅವರ ನಿಧನಕ್ಕೆ ಯುವ ನಿರ್ದೇಶಕ ಎಪಿ ಅರ್ಜುನ್, ಚೇತನ್ ಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಎಪಿ ಅರ್ಜುನ್ ಟ್ವೀಟ್ ಮಾಡಿ ''ನನ್ನ ಎಲ್ಲ ಸಿನಿಮಾಗಳಿಗೂ makeup ಕಲಾವಿದರಾಗಿ ಕೆಲಸ ನಿರ್ವಹಿಸುತ್ತಿದ್ದ ಸೀನಣ್ಣ ಇಂದು ಬೆಳಿಗ್ಗೆ ದೈವಾಧೀನರಾಗಿದ್ದಾರೆ...!! ಒಂದು ವಾರದ ಹಿಂದೆ ನಗುನಗುತ್ತಾ ಬಂದು ಭೇಟಿಯಾಗಿದ್ದ ವ್ಯಕ್ತಿ ಇಂದು ಇಲ್ಲ ಎಂದರೆ ನಿಜವಾಗಿಯೂ ನಂಬಲಾಗುತ್ತಿಲ್ಲ'' ಎಂದು ನೋವು ತೋಡಿಕೊಂಡಿದ್ದಾರೆ.
ಚೇತನ್ ಕುಮಾರ್ ಟ್ವೀಟ್ ಮಾಡಿ ''ನಮ್ಮ ಬಹದ್ದೂರ್, ಭರ್ಜರಿ ,ಭರಾಟೆ ಹಾಗೂ ಜೇಮ್ಸ್" ಚಿತ್ರಗಳಿಗೆ ಹಾಗೂ ಕನ್ನಡದ ಬಹಳಷ್ಟು ಚಿತ್ರಗಳಿಗೆ ಕಂಪೆನಿ ಮೇಕಪ್ ಮ್ಯಾನ್ ಆಗಿ (ವರ್ಣಾಲಂಕಾರ) ಕಾರ್ಯನಿರ್ವಹಿಸಿದ "ಮೇಕಪ್ ಸೀನಣ್ಣ" (ಶ್ರೀನಿವಾಸ್) ರವರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ ಅಣ್ಣ'' ಎಂದಿದ್ದಾರೆ.


Click it and Unblock the Notifications











