ನವರಸ ನಾಯಕನ ಜೊತೆ ಕೈಜೋಡಿಸಿದ ದರ್ಶನ
ನವರಸ ನಾಯಕ ಜಗ್ಗೇಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕೈಜೋಡಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಸಿಡಿದೇಳಲು ಇವರಿಬ್ಬರೂ ಕೈಜೋಡಿಸಿದ್ದಾರೆ. ಆದರೆ ಗಾಂಧಿವಾದಿ ಅಣ್ಣಾ ಹಜಾರೆ ಅವರ ಜೊತೆಯಂತೂ ಅಲ್ಲ. ಇವರಿಬ್ಬರೂ ಭ್ರಷ್ಟಾಚಾರದ ವಿರುದ್ಧ ತೊಡೆತಟ್ಟುತ್ತಿರುವುದು ತೆರೆಯ ಮೇಲೆ.
ಇವರಿಬ್ಬರೂ ಒಂದೇ ಚಿತ್ರದಲ್ಲಿ ನಟಿಸುತ್ತಿರುವ ಚಿತ್ರಕ್ಕೆ ಅಗ್ರಜ ಎಂದು ಹೆಸರಿಡಲಾಗಿದೆ. ನಂದನ್ ಎಂಬ ಹೊಸಬ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಚಿತ್ರದ ಕತೆ ಕೇಳಿರುವ ದರ್ಶನ್ ಹಾಗೂ ಜಗ್ಗೇಶ್ ಸಮ್ಮತಿ ಸೂಚಿಸಿದ್ದಾರೆ ಎನ್ನುತ್ತವೆ ಮೂಲಗಳು.
ಸಂಕಲನಕಾರ ಗೋವರ್ಧನ್ ನಿರ್ಮಿಸುತ್ತಿರುವ ಚಿತ್ರ ಇದು. ಈ ಚಿತ್ರವನ್ನು ತಮಿಳು ಮತ್ತು ತೆಲುಗು ಭಾಷೆಗೆ ಡಬ್ ಮಾಡಲಾಗುತ್ತದಂತೆ. ಹಾಗಾಗಿ ಎರಡೂ ಭಾಷೆಗೆ ಒಪ್ಪುವ ನಾಯಕಿಯನ್ನು ಕರೆತರುವ ಬಗ್ಗೆ ಚಿಂತನೆ ನಡೆದಿದೆ. ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನ ಚಿತ್ರಕ್ಕಿರುತ್ತದೆ.
ಸದ್ಯಕ್ಕಂತೂ ಈ ಚಿತ್ರ ಸೆಟ್ಟೇರುವ ಲಕ್ಷಣಗಳು ಕಾಣುತ್ತಿಲ್ಲ. ಏಕೆಂದರೆ ದರ್ಶನ್ ಹಾಗೂ ಜಗ್ಗೇಶ್ ಇಬ್ಬರೂ ಬಿಜಿಯಾಗಿದ್ದಾರೆ. ದರ್ಶನ್ 'ವಿರಾಟ್' ಮುಗಿಸಬೇಕು. ಬಳಿಕ 'ಬುಲ್ ಬುಲ್'ಗೆ ಕೈಹಾಕಲಿದ್ದಾರೆ. ಇದೆಲ್ಲಾ ಆದ ಮೇಲೆ 'ಸಂಗೊಳ್ಳಿ ರಾಯಣ್ಣ' ಚಿತ್ರ ಬರಬೇಕಾಗಿದೆ. ಆ ಬಳಿಕವಷ್ಟೇ ದರ್ಶನ್ ಈ ಚಿತ್ರವನ್ನು ಕೈಗೆತ್ತಿಕೊಳ್ಳುವುದು.
ಇನ್ನು ಜಗ್ಗೇಶ್ ಕೂಡ ಅಷ್ಟೇ ಬಿಜಿ. ಅವರ 'ಕೂಲ್ ಗಣೇಶ' ಮುಗೀಬೇಕು. ಅದಾದ ಬಳಿಕ ತಮ್ಮ ಪುತ್ರನಿಗೆ ಆಕ್ಷನ್ ಕಟ್ ಹೇಳುತ್ತಿರುವ ಹೋಂ ಬ್ಯಾನರ್ ಚಿತ್ರ 'ಗುರು' ಚಿತ್ರದಲ್ಲಿ ತೊಡಗಿಕೊಳ್ಳಬೇಕು. 'ಅಗ್ರಜ' ಚಿತ್ರ ಸೆಟ್ಟೇರಬೇಕಾದರೆ ಆಗಸ್ಟ್ ತನಕ ಕಾಯಬೇಕಾಗುತ್ತದೆ. ಈ ಚಿತ್ರದಲ್ಲಿ ದರ್ಶನ್ ಖಾಕಿ ಖದರ್ ತೋರಲಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿ. (ಏಜೆನ್ಸೀಸ್)


Click it and Unblock the Notifications











