For Quick Alerts
  ALLOW NOTIFICATIONS  
  For Daily Alerts

  ಮೋಡ ಕವಿದ ವಾತಾವರಣದಲ್ಲೇ ನವರಸ ನಾಯಕನ 'ತೋತಾಪುರಿ' ಪುರಾಣ ಆರಂಭ

  |

  'ದೇವ್ರಾಣೆಗೂ ನಮ್ದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ನಮ್ದು ಬರೀ ಸಿನಿಮಾ' ಅಂತ 'ತೋತಾಪುರಿ' ಚಿತ್ರತಂಡ ಒಂದು ಪೋಸ್ಟರ್ ಬಿಟ್ಟಿತ್ತು. ನವರಸ ನಾಯಕನ 'ತೋತಾಪುರಿ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಹೌದಾ? ಅಲ್ಲಾ? ಅನ್ನುವ ಗೊಂದಲದಲ್ಲೇ ಸಿನಿಮಾ ಬಿಡುಗಡೆಗೆ ಭರ್ಜರಿಯಾಗಿ ಸಿದ್ಧತೆ ಆರಂಭ ಆಗಿದೆ. ವಿಶಿಷ್ಟವಾಗಿ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಇಡೀ ಚಿತ್ರತಂಡ ಸಖತ್ತಾಗಿರುವ ಮಾಸ್ಟರ್ ಪ್ಲ್ಯಾನ್ ಮಾಡಿದೆ.

  'ನೀರ್‌ದೋಸೆ' ಚಿತ್ರದ ಮೂಲಕ ನಿರ್ದೇಶಕ ವಿಜಯ್​ ಪ್ರಸಾದ್ ಹಾಗೂ ನವರಸ ನಾಯಕ ಸಿನಿಪ್ರಿಯರಿಗೆ ಕಾಮಿಡಿ ಕಚಗುಳಿ ಇಟ್ಟಿದ್ದರು. ಈಗ ಮತ್ತದೇ ಜೋಡಿ ತೋತಾಪುರಿ ಹಿಡಿದು ಬರುತ್ತಿದೆ. ಚೇಷ್ಟೆ ಮಾಡಿಕೊಂಡು ಪೋಲಿ ಡೈಲಾಗ್ ಬಿಡುತ್ತಾ ಮನರಂಜನೆ ನೀಡುವ ಈ ಕಾಂಬಿನೇಷನ್‌ಗೆ ಸಿನಿರಸಿಕರು ಬಹುಪರಾಕ್ ಹೇಳಿದ್ದಾರೆ. ಇನ್ನು 'ತೋತಾಪುರಿ' ಹಿಡಿದ ಜಗ್ಗೇಶ್ ಹಾಗೂ ಚಿತ್ರದ ಒಂದೊಂದು ಪಾತ್ರಗಳನ್ನು ಪರಿಚಯ ಮಾಡಲು ಮುಂದಾಗಿದ್ದಾರೆ ನಿರ್ದೇಶಕ ವಿಜಯ್ ಪ್ರಸಾದ್.

  ಇನ್ಮುಂದೆ ದಿನಕ್ಕೊಬ್ಬರ 'ತೋತಾಪುರಿ' ಪುರಾಣ

  ಇನ್ಮುಂದೆ ದಿನಕ್ಕೊಬ್ಬರ 'ತೋತಾಪುರಿ' ಪುರಾಣ

  ನಿರ್ದೇಶಕ ವಿಜಯ್ ಪ್ರಸಾದ್ 'ತೋತಾಪುರಿ' ಚಿತ್ರದ ಪ್ರಚಾರ ಆರಂಭಿಸಿದ್ದಾರೆ. ಈ ಸಿನಿಮಾ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಮಾಡಲು ಶತಪ್ರಯತ್ನ ನಡೆಸಿತ್ತು. ಆದರೆ, ಅಂದುಕೊಂಡಂತೆ ಸಿನಿಮಾ ರಿಲೀಸ್ ಸಾಧ್ಯವಾಗಿರಲಿಲ್ಲ. ಹೀಗಾಗಿ ಒಂದೊಂದೇ ಪಾತ್ರಗಳನ್ನು ತನ್ನದೇ ಸ್ಟೈಲ್‌ನಲ್ಲಿ ಸಿನಿಪ್ರಿಯರಿಗೆ ಪರಿಚಯಿಸಲು ನಿರ್ದೇಶಕ ವಿಜಯ್ ಪ್ರಸಾದ್ ಮುಂದಾಗಿದ್ದಾರೆ. ಒಂದು ವಾರ ಪ್ರತಿ ದಿನ ಒಬ್ಬರಂತೆ 'ತೋತಾಪುರಿ' ಸಿನಿಮಾದ ಪ್ರಮುಖ ಪಾತ್ರಗಳನ್ನು ಪರಿಚಯ ಮಾಡಲಿದ್ದಾರೆ. ಈಗಾಗಲೇ ಈರೇಗೌಡನಾಗಿ ಜಗ್ಗೇಶ್, ಶಕೀಲಾ ಬಾಬು ಪಾತ್ರದಲ್ಲಿ ಅದಿತಿ ಪ್ರಭುದೇವ ಹಾಗೂ ನಾರಾಯಣ ಪಿಳ್ಳೈ ಅವತಾರದಲ್ಲಿ ಡಾಲಿ ಧನಂಜಯ್ ಪಾತ್ರಗಳು ರಿವೀಲ್ ಆಗಿವೆ.

  ಜಗ್ಗೇಶ್, ಅದಿತಿ, ಧನಂಜಯ್ ಒಬ್ಬೊಬ್ಬರಿಗೂ ಒಂದೊಂದು ಡೈಲಾಗ್

  ಜಗ್ಗೇಶ್, ಅದಿತಿ, ಧನಂಜಯ್ ಒಬ್ಬೊಬ್ಬರಿಗೂ ಒಂದೊಂದು ಡೈಲಾಗ್

  'ತೋತಾಪುರಿ' ಪಾತ್ರಗಳನ್ನು ಪರಿಚಯಿಸುತ್ತಿರುವ ಪೋಸ್ಟರ್‌ಗಳು ಕಿಕ್ ಕೊಡುತ್ತಿವೆ. ವಿಶೇಷ ಅಂದರೆ, ಈ ಪೋಸ್ಟರ್‌ಗಳಲ್ಲಿ ಒಂದೊಂದು ಡೈಲಾಗ್ ಕೂಡ ಬಿಡಲಾಗಿದೆ. ಇದು ಸಿನಿಪ್ರೇಮಿಗಳನ್ನು ಸೆಳೆಯುತ್ತಿವೆ. "ಮಣ್ಣಿನ ಮಮತೆ ಮನುಕುಲಕ್ಕೆ ದಕ್ಕಿದಾಗಲೇ ಮಂದಿರ, ಮಸೀದಿ, ಚರ್ಚ್, ಜೀವಂತ. ಅಷ್ಟೇ ಯಾಕೆ ಸ್ಮಶಾನವೂ ಹೌದು..!" ಇದು ನವರಸ ನಾಯಕ ಪೋಸ್ಟರ್ ಡೈಲಾಗ್. " ಮನುಷ್ಯ 'ಹರಕೆ' ತೀರ್ಸ್ದೇ ಹೋದ್ರೂ ಪರವಾಗಿಲ್ಲ. ಆದ್ರೆ, 'ಹಗೆ' ತೀರ್ಸ್ಬಾರ್ದು" ಇದು ಅದಿತಿ ಡೈಲಾಗ್. ಇನ್ನು ಡಾಲಿ ಧನಂಜಯ್ ಪೋಸ್ಟರ್ ಡೈಲಾಗ್ ಹೀಗಿದೆ, " ಮೋಡ ಕವಿದ ವಾತಾವರಣದಲ್ಲೇ 'ಮೊಡವೆ' ಬರಬೇಕೆ..? ಥತ್ತೇರಿಕೆ..!". ಸುಮನ್ ರಂಗನಾಥ್, ದತ್ತಣ್ಣ ಸೇರಿದಂತೆ ಇನ್ನೂ ಇಬ್ಬರ ಪೋಸ್ಟರ್ ಅನ್ನು ಒಂದೊಂದು ದಿನ ರಿಲೀಸ್ ಆಗಲಿದೆ.

  'ತೋತಾಪುರಿ' ಬಿಡುಗಡೆ ಯಾವಾಗ?

  'ತೋತಾಪುರಿ' ಬಿಡುಗಡೆ ಯಾವಾಗ?

  ಒಂದು ತಿಂಗಳು 'ತೋತಾಪುರಿ' ಸಿನಿಮಾ ಪ್ರಚಾರ ಮಾಡಲು ನಿರ್ಮಾಪಕ ಸುರೇಶ್ ಪ್ಲ್ಯಾನ್ ಮಾಡಿದ್ದಾರೆ. "ಹಂತವಾಗಿ ಸಿನಿಮಾದ ಬಗ್ಗೆ ಪರಿಚಯ ಮಾಡಿಸ್ಬೇಕು ಅನ್ನುವ ಆಲೋಚನೆ ಇದೆ. ಇದಕ್ಕೆ ನಿರ್ದೇಶಕ ವಿಜಯ್ ಪ್ರಸಾದ್ ಕೂಡ ಕೈ ಜೋಡಿಸಿದ್ದು, ಕ್ರಿಯಾತ್ಮಕವಾಗಿ ಸಿನಿಮಾ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಎಲ್ಲಾ ಅಂದುಕೊಂಡಂತೆ ಆದರೆ, ಡಿಸೆಂಬರ್ ಕೊನೆವಾರದಲ್ಲಿ ಸಿನಿಮಾ ಬಿಡುಗಡೆ ಮಾಡಬೇಕೆಂದು ಕೊಂಡಿದ್ದೇವೆ. ಆದರೆ ಚಿತ್ರಮಂದಿರಗಳು, ಬೇರೆ ಸಿನಿಮಾಗಳ ಪೈಪೋಟಿ ಎಲ್ಲವನ್ನೂ ನೋಡಿ ನಿರ್ಧಾರ ಮಾಡುತ್ತೇವೆ." ಎಂದು ನಿರ್ಮಾಪಕ ಸುರೇಶ್ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

  'ತೋತಾಪುರಿ' ಎರಡು ಭಾಗಗಳಲ್ಲಿ ರಿಲೀಸ್

  'ತೋತಾಪುರಿ' ಎರಡು ಭಾಗಗಳಲ್ಲಿ ರಿಲೀಸ್

  "ತೋತಾಪುರಿ ಸಿನಿಮಾ ಭಾಗ-1 ಮತ್ತು ಭಾಗ-2 ಮಾದರಿಯಲ್ಲಿ ತೆರೆಕಾಣಲಿದೆ. ಈ ಚಿತ್ರದಲ್ಲಿ ಸುಮಾರು 80ಕ್ಕೂ ಅಧಿಕ ಕಲಾವಿದರಿದ್ದಾರೆ. ಅದಿತಿ ಪ್ರಭುದೇವ, ಡಾಲಿ ಧನಂಜಯ್, ದತ್ತಣ್ಣ, ಸುಮನ್ ರಂಗನಾಥ್, ವೀಣಾ ಸುಂದರ್ ಸೇರಿದಂತೆ ಸಾಕಷ್ಟು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆ ಹೇಳುವುದಕ್ಕೆ ಮೂರು ಗಂಟೆ ಸಾಲುವುದಿಲ್ಲ. ಹೀಗಾಗಿ ಎರಡು ಪಾರ್ಟ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತೆ." ಅಂತಾರೆ ನಿರ್ಮಾಪಕ ಸುರೇಶ್. ಒಟ್ನಲ್ಲಿ 'ತೋತಾಪುರಿ' ಹಣ್ಣಾಗುವ ಕಾಲ ಸನಿಹವಾಗಿದ್ದು, ರುಚಿ ಸವಿಯಲು ಸಮಯ ನಿಗದಿಯಾಗಬೇಕಿದೆ.

  English summary
  Kannada actor Jaggesh, Dhanajay and Adhiti Prabhudeva starrer Thothapuri movie team planned unique promotion. Team will reveal 7 character every single day at 6 o clock.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X