ರೀ ಸ್ವಾಮಿ ಜಗ್ಗೇಶು.. ಸಾವಿನ ಮನೆಯಲ್ಲಿಯೂ ನಿಮ್ಮದು ಇದೆಂಥಾ ವಿಕೃತಿ...?
ಜಗ್ಗೇಶ್ ಕನ್ನಡ ಚಿತ್ರರಂಗದ ಅತ್ಯದ್ಭುತ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಡೈಲಾಗ್ ಡೆಲಿವರಿ ಮತ್ತು ಕಾಮಿಡಿ ಟೈಮಿಂಗ್‌ನ ಯಾರಿಂದಲೂ ಸುಲಭಕ್ಕೆ ಅನುಕರಿಸಲು ಸಾಧ್ಯ ಇಲ್ಲ.
ಇನ್ನೂ ಜಗ್ಗೇಶ್ ಹೇಗೆ ಅಪರೂಪದ ಕಲಾವಿದರೋ ಹಾಗೇ ವೇದಿಕೆ ಮೇಲೆ ನಿಂತು ಗಂಟೆಗಟ್ಟಲೆ ಪರ್ಸನಾಲಿಟಿ ಡೆವಲಪ್ ಮೆಂಟ್ ಸ್ಪೀಚು ಕೊಡುತ್ತಾ, ತಮ್ಮ ಹಳೇ ಕಷ್ಟದ ದಿನಗಳಿಗೆ ಇನ್ನೊಂದಿಷ್ಟು ಉಪ್ಪು ಹುಳಿ ಖಾರ ಸೇರಿಸಿ ರಸವತ್ತಾಗಿ ಭಾಷಣ ಬಿಗಿಯುವುದರಲ್ಲಿ ಕೂಡ ಫೇಮಸ್ಸು. ಎಂಥವರೂ ಮರುಳಾಗುವಂತೆ ಮಾತಾಡುವ ಜಗ್ಗೇಶ್ ಗೆ ಅದೇ ಮಾತೆಂಬುದು ಹಲವು ಸಲ ಹಳ್ಳ ತೋಡಿದ್ದಿದೆ. ಜಗ್ಗೇಶ್ ಪಾಲಿಗೆ ಮಾತೆಂಬುದು ಶಕ್ತಿಯೂ ಹೌದು, ಮಹಾ ವೀಕ್ ನೆಸ್ಸೂ ಹೌದು. ಇದಕ್ಕೆ ಗುರು ಪ್ರಸಾದ್ ಸಾವಿನ ಸುತ್ತ ಮುತ್ತ ಜಗ್ಗೇಶ್ ಆಡಿದ ಮಾತುಗಳೇ ಸಾಕ್ಷಿ.

ಹೌದು, ಮಾತೆತ್ತಿದ್ದರೆ ಚಿತ್ರರಂಗದಲ್ಲಿ ತೀರಾ ಕೊಳಕು ಸಂಪ್ರದಾಯ ಬೆಳೆಯುತ್ತಿದೆ. ಇಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಅನ್ನುವ ಜಗ್ಗೇಶ್ ಅಲ್ಲಿ ಗುರು ಪ್ರಸಾದ್ ಸತ್ತು ಮಲಗಿದ್ದಾಗ ಸ್ವತಃ ತಾವೇ ರಾಜಕಾರಣ ಮಾಡಿದ್ದಾರೆ. ಗುರುಪ್ರಸಾದ್ ಬಿಜೆಪಿ ವಿರೋಧಿ, ಎಡಪಂಥೀಯ ಚಿಂತಕ ಎಂದಿದ್ದಾರೆ. ಗುರುಪ್ರಸಾದ್ ಸಾವಿಗೂ, ಅವರು ಎಡಪಂಥೀಯ ಚಿಂತಕರಾಗಿದ್ದರು ಅನ್ನುವುದಕ್ಕೂ ಎಲ್ಲಿಂದ ಎಲ್ಲಿಗೆ ಸಂಬಂಧ..? ಎನ್ನುವುದಕ್ಕೆ ಖುದ್ದು ಜಗ್ಗೇಶ್ ಅವರೇ ಉತ್ತರಿಸಬೇಕು.
ಇನ್ನೂ ನೂರಕ್ಕೂ ಅಧಿಕ ಚಿತ್ರ ಮಾಡಿರುವ ಜಗ್ಗೇಶ್ ಇಲ್ಲಿಯವರೆಗೆ ತಮ್ಮ ಒಂದೇ ಒಂದು ಚಿತ್ರ ಸೋತಿಲ್ಲ. ತಮ್ಮ ಜೀವಮಾನದಲ್ಲಿಯೇ ಡಬಲ್ ಮೀನಿಂಗ್ ಚಿತ್ರದಲ್ಲಿ ತಾವು ಆಕ್ಟ್ ಮಾಡಿಲ್ಲವೆನ್ನುವಂತೆ ಮಾತನಾಡಿದ್ದಾರೆ. ರಂಗನಾಯಕ ಚಿತ್ರ ಮಾಡಿದ್ದು ತಾವು ತೆಗೆದುಕೊಂಡ ಬಹುದೊಡ್ಡ ತಪ್ಪು ನಿರ್ಧಾರ ಎಂದಿದ್ದಾರೆ. ಆ ಪ್ರಕಾರ ನೋಡುವುದಾದರೆ ಜಗ್ಗೇಶ್ ಅಭಿನಯದ ತೋತಾಪುರಿ ಚಿತ್ರಕ್ಕೆ ಆಸ್ಕರ್ ಸಿಗಬೇಕಿತ್ತು. ಇವರ ನೇತೃತ್ವದಲ್ಲಿ ನಡೆಯುವ ಕಾಮಿಡಿ ಕಾರ್ಯಕ್ರಮ ವಿಶ್ವದ ಜಗದ್ವಿಖ್ಯಾತ ಕಾರ್ಯಕ್ರಮ ಎಂದು ಹೊರ ಹೊಮ್ಮಬೇಕಿತ್ತು.
ತಮ್ಮ ವೃತ್ತಿ ಬದುಕು ಮುಗಿಯುವ ಹಂತದಲ್ಲಿದ್ದಾಗ ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರದ ಮೂಲಕ ಕೈ ಹಿಡಿದು ಮೇಲಕ್ಕೆತ್ತಿ ಇವರ ಮಾರ್ಕೆಟ್‌ನ ಮತ್ತೆ ಕುದುರಿಸಿದ್ದು ಇದೇ ಗುರುಪ್ರಸಾದ್ ಎನ್ನುವುದನ್ನು ಮರೆತಿರುವ ಜಗ್ಗೇಶ್, ರಂಗನಾಯಕ ಚಿತ್ರದ ಸೋಲಿಗೆ ಇಹಲೋಕ ತ್ಯಜಿಸಿದ ಗುರು ಪ್ರಸಾದ್ ಅವರನ್ನೇ ಕಾರಣವನ್ನಾಗಿಸಿ ಓತಪ್ರೋತವಾಗಿ ಮಾತನಾಡಿದ್ದಾರೆ. ಈ ಮೂಲಕ ತಮ್ಮ ವ್ಯಕ್ತಿತ್ವಕ್ಕೆ ತಾವೇ ಮಸಿ ಬಳೆದುಕೊಂಡಿದ್ದಾರೆ.
ಕೇವಲ ಇದಿಷ್ಟೇ ಅಲ್ಲದೇ ಗುರುಪ್ರಸಾದ್‌ಗೆ ಕಾಯಿಲೆ ಇತ್ತು ಎಂದಿರುವ ಜಗ್ಗೇಶ್ ಮೈಯೆಲ್ಲ ಕಡಿತ ಬರುವ ಕಾಯಿಲೆ ಇದೆಯಲ್ಲ ಆ ಕಾಯಿಲೆ ಅವನಿಗೆ ಇತ್ತು ಎಂದಿದ್ದಾರೆ. ಕೆರೆದುಕೊಂಡಾಗ ಮುಖದಲ್ಲಿ ಕೀವು ರಕ್ತ ಬರುತ್ತಿತ್ತು ಎಂದು ಹೇಳಿರುವ ಜಗ್ಗೇಶ್ ನಾವು ತಿನ್ನು ತಟ್ಟೆಗೆ ಕೈ ಹಾಕುತ್ತಿದ್ದ ಆಗ ನಮಗೆ ಭಯ ಕಾಡುತ್ತಿತ್ತು ಈ ಕಾರಣಕ್ಕೆ ಅವನಿಗೆ ಕಾಣದ ರೀತಿಯಲ್ಲಿ ದೂರು ಕುಳಿತುಕೊಂಡು ಊಟ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಚೀಪ್ ಮೆಂಟಾಲಿಟಿಯನ್ನೂ ಸಾರ್ವಜನಿಕವಾಗಿ ಜಗ್ಗೇಶ್ ಪ್ರದರ್ಶನಕ್ಕಿಟ್ಟಿದ್ದಾರೆ.
ಇನ್ನೂ ಸದಾ ಮನುಷ್ಯನಿಗೆ ಮಾತಿನ ಮೇಲೆ ನಿಗಾ ಇರಬೇಕು, ಕೆಲಸದಲ್ಲಿ ಬದ್ಧತೆ ಇರಬೇಕು ಎನ್ನುವ ಜಗ್ಗೇಶ್ ಗುರು ಪ್ರಸಾದ್ ಅವರ ಸಾಂಸಾರಿಕ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಎಳೆದು ತಂದಿದ್ದಾರೆ. ಅಂಹಕಾರವೇ ಆತನ ಸಾವಿಗೆ ಕಾರಣ ಎಂದಿದ್ದಾರೆ. ಮೊದಲೆಲ್ಲಾ ಅವನ ಕೈಯಲ್ಲಿ ಪುಸ್ತಕ ಇರುತ್ತಿತ್ತು ಆ ನಂತರ ಕೈಯಲ್ಲಿ ಬಾಟ್ಲಿಗಳು ಕಾಣಿಸುತ್ತಿದ್ದವು ಎಂದಿದ್ದಾರೆ. ಎಲುಬಿಲ್ಲದ ನಾಲಿಗೆ ಅಂತ ಸಾವಿನ ಮನೆಯಲ್ಲಿ ಬಾಯಿಗೆ ಬಂದಿದ್ದೆಲ್ಲ ಮಾತನಾಡಿದ್ದಾರೆ.
ಸಾವಿನ ಮನೆಯಲ್ಲಿ ಒಲೆಯನ್ನ ಹಚ್ಚಬಾರದು ಎನ್ನುವ ಮಾತು ಇದೆ. ಜಗ್ಗೇಶ್ ಗುರುಪ್ರಸಾದ್ ಮನೆಯಲ್ಲಿ ಸಾಕೆನಿಸುವಷ್ಟು ಕಿಚ್ಚು ಹಚ್ಚಿದ್ದಾರೆ. ಯಾವಾಗ ನೋಡಿದರೂ ನಾನು ಈ ಚಿತ್ರರಂಗದ ಹಿರಿಯ ಎಂದು ಪದೇ ಪದೇ ಹೇಳುವ ಜಗ್ಗೇಶ್, ಹಿರಿತನ ಎನ್ನುವುದು ಕಿರಿಯ ಕಲಾವಿದರ ಕುರಿತಂತೆ ನಿರ್ದೇಶಕರ ಕುರಿತಂತೆ ಬಾಯಿಗೆ ಬಂದಂತೆ ಆಡುವುದಕ್ಕೆ ಇರುವ ಪರವಾನಿಗೆ ಎಂದು ತಿಳಿದುಕೊಂಡಿರುವುದು ವಿಪರ್ಯಾಸ.
ತಮ್ಮ ಗಂಡನನ್ನು ಕಳೆದುಕೊಂಡು ಇಬ್ಬರು ಹೆಂಡ್ತಿಯರು ಕಣ್ಣೀರು ಇಡುವ ಸಂದರ್ಭದಲ್ಲಿ, ಗುರುಪ್ರಸಾದ್ ಅವರಂತಹ ಪ್ರತಿಭಾವಂತ ನಿರ್ದೇಶಕನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ದುಃಖದಲ್ಲಿ ಇರುವ ಸಂದರ್ಭದಲ್ಲಿ ಜಗ್ಗೇಶ್ ಆಡಿದ ಈ ಮಾತುಗಳು ಅನೇಕರನ್ನು ಈಗ ಕೆರಳಿಸಿವೆ. ಹೀಗಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಜಗ್ಗೇಶ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಸತ್ತಿದ್ದು ಕೇವಲ ಗುರುಪ್ರಸಾದ್ ಮಾತ್ರವಲ್ಲ ಜಗ್ಗೇಶ್ ಅವರ ವ್ಯಕ್ತಿತ್ವವೂ ಕೂಡ ಅನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಒಬ್ಬ ವ್ಯಕ್ತಿ ಸತ್ತಾಗ ಆತನ ಬಗ್ಗೆ ಹೀಗೆ ಮಾತನಾಡಲು ಮನಸ್ಸಾದರೂ ಹೆಂಗ್ ಬರ್ತದೆ ಎನ್ನುವ ಪ್ರಶ್ನೆ ಅನೇಕರನ್ನು ಈಗ ಕಾಡುತ್ತಿದೆ. ಗುರುಪ್ರಸಾದ್ ಬಗ್ಗೆ ಶ್ರೀಯುತ ಜಗ್ಗೇಶ್ ಆಡಿರುವ ಈ ಮಾತುಗಳನ್ನು ಮಂತ್ರಾಲಯ ರಾಘವೇಂಧ್ರ ಸ್ವಾಮಿಗಳು ಕ್ಷಮಿಸುತ್ತಾರಾ..?


Click it and Unblock the Notifications











