'ಕುರುಕ್ಷೇತ್ರ' ನೋಡಿದ ರಾಕ್ ಲೈನ್ ಏನಂದ್ರು, ಜಗ್ಗೇಶ್ ನುಡಿದ ಭವಿಷ್ಯವೇನು.?
'ದಿ ವಿಲನ್' ಮುಗಿತು. 'ಕೆಜಿಎಫ್' ಸದ್ದು ಮಾಡ್ತಿದೆ. ಮುಂದೇನಿದ್ರು 'ಕುರುಕ್ಷೇತ್ರ'. ಇದು ಕನ್ನಡ ಚಿತ್ರರಂಗದಲ್ಲಿ ತಯಾರಾಗಿರುವ ಮುಂದಿನ ಸಿಡಿಬಾಂಬ್ ಎಂದು ಹೇಳಲಾಗ್ತಿದೆ. ಕನ್ನಡ ಚಿತ್ರರಂಗವನ್ನ ಇನ್ನೊಂದು ಹಂತಕ್ಕೆ ಕರೆದುಕೊಂಡು ಹೂಗುವಂತಹ ಚಿತ್ರಗಳಲ್ಲಿ 'ಕುರುಕ್ಷೇತ್ರ'ವೂ ಒಂದು ಎಂಬುದು ಚಿತ್ರವಲಯದ ಹಿರಿಯರ ಮಾತು.
ಸಂಪೂರ್ಣ ಶೂಟಿಂಗ್ ಮುಗಿಸಿರುವ 'ಕುರುಕ್ಷೇತ್ರ' ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದೆ. ಈಗಾಗಲೇ 2ಡಿ ವರ್ಷನ್ ಕೆಲಸ ಮುಗಿದಿದ್ದು, 3ಡಿ ವರ್ಷನ್ ಕೆಲಸ ನಡೆಯುತ್ತಿದೆ ಎಂಬ ಮಾಹಿತಿ ಇದೆ.

ಈ ಮಧ್ಯೆ ಸಿನಿಮಾ ನೋಡಿರುವ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಈ ವಿಷ್ಯವನ್ನ ನವರಸ ನಾಯಕ ಜಗ್ಗೇಶ್ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಜಗ್ಗೇಶ್ ''ಕುರುಕ್ಷೇತ್ರಕ್ಕೆ ಕಾಯುತ್ತಿರುವೆ..ರಾಕ್ ಲೈನ್ ಹೇಳಿದ ಚಿತ್ರ ತುಂಬ ಚೆನ್ನಾಗಿ ಮೂಡಿಬಂದಿದೆ ಎಂದು..ಪರಭಾಷೆಗೆ ಸಡ್ಡು ಹೊಡಿತಾರೆ ನಮ್ ಹುಡುಗರು. ಕನ್ನಡಿಚಿತ್ರರಂಗಕ್ಕೆ ಶುಕ್ರದಶೆ ಆರಂಭ. ರಾಜಣ್ಣ ಇದ್ದಿದ್ರೆ ಎಷ್ಟು ಖುಷಿಪಡ್ತಿದ್ರೊ. ಅವರು ಯಾವಾಗಲು ಹೇಳ್ತಿದ್ರು ಒಂದೆ ಮನಸ್ಸಿಂದ ಪ್ರೀತಿ ತುಂಬಿ ಎಳಿಬೇಕ್ರಿ ನಮ್ ಕನ್ನಡದತೇರು ಅಂತ.ನೆನಪಾಯಿತು'' ಎಂದು ಸಂತಸ ಹಂಚಿಕೊಂಡಿದ್ದಾರೆ.
ಈ ಹಿಂದೆ ಸ್ವತಃ ನಿರ್ಮಾಪಕರೇ ಹೇಳಿದ್ದರು. 'ನವೆಂಬರ್ 10 ರಂದು ನಾನು ಕುರುಕ್ಷೇತ್ರ ಚಿತ್ರವನ್ನ ನೋಡಲಿದ್ದೇನೆ. ನೋಡಿದ ನಂತರ ಹೇಗೆ ಬಂದಿದೆ ಎಂದು ನಿರ್ಧರಿಸಿ ರಿಲೀಸ್ ಡೇಟ್ ಘೋಷಣೆ ಮಾಡುತ್ತೇನೆ' ಎಂದಿದ್ದರು. ಈಗ ರಾಕ್ ಲೈನ್ ವೆಂಕಟೇಶ್ ಸಿನಿಮಾ ನೋಡಿರುವುದಾಗಿ ಜಗ್ಗೇಶ್ ಹೇಳಿರುವುದನ್ನ ಗಮನಿಸಿದ್ರೆ, ಆಲ್ ಮೋಸ್ಟ್ ಫಸ್ಟ್ ಕಾಪಿ ಸಿದ್ಧವಾಗಿದ್ದು, ಮುನಿರತ್ನ, ರಾಕ್ ಲೈನ್ ಹಾಗೂ ಇನ್ನಿತರರು ಸಿನಿಮಾ ನೋಡಿರಬಹುದು ಎನಿಸುತ್ತಿದೆ.
ಅಂದ್ಹಾಗೆ, ಕುರುಕ್ಷೇತ್ರದ ನಂತರ ನಟ ದರ್ಶನ್ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಗಂಡುಗಲು ಮದಕರಿ ನಾಯಕ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.


Click it and Unblock the Notifications











