'ಫಿಲ್ಮಿಬೀಟ್ ಕನ್ನಡ' ಲೇಖನಕ್ಕೆ ಜಗ್ಗೇಶ್ ದಂಪತಿ ಕೊಟ್ಟ ಪ್ರತಿಕ್ರಿಯೆ
ನಟ ಜಗ್ಗೇಶ್ ಪತ್ನಿ ಪರಿಮಳ ಜಗ್ಗೇಶ್ ಇದೀಗ ಕಿರುತೆರೆಯಲ್ಲಿ ತಮ್ಮ ಜರ್ನಿ ಶುರು ಮಾಡುತ್ತಿದ್ದಾರೆ. ಆ ಸುದ್ದಿಯನ್ನು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಇಂದು ಬೆಳ್ಳಗೆ ಪ್ರಕಟ ಮಾಡಿತ್ತು. ಈಗ ಅದಕ್ಕೆ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳ ಇಬ್ಬರು ಪ್ರತಿಕ್ರಿಯೆ ನೀಡಿದ್ದರೆ.
ಈ ಲೇಖನವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರೀಟ್ವೀಟ್ ಮಾಡಿರುವ ಜಗ್ಗೇಶ್ ತಮ್ಮ ಪತ್ನಿ ಬಗ್ಗೆ ಕೆಲ ಸಾಲುಗಳನ್ನು ಬರೆದಿದ್ದಾರೆ. ''ಓದುವ ವಯಸ್ಸಿನ 14 ವರ್ಷದ ಕಂದಮ್ಮನ ಮದುವೆಯಾದ ಮೂರ್ಖ ನಾನು. ಅವಳಿಗೆ ನೆಪಕ್ಕೆ ಗಂಡ, ಮಿಕ್ಕಂತೆ ತಂದೆಯ ಕಾರ್ಯ ಮಾಡಿ 10ನೇ ತರಗತಿಯಿಂದ 3 ಡಿಗ್ರಿ ಓದಿಸಿ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡೆ. ಸಾಧಿಸುವ ಗುಣವನ್ನು ಕೂಡಿ ಹಾಕದೆ ಹೆಣ್ಣನ್ನು ಉತ್ತೇಜಿಸಿದಾಗ ಮಾತ್ರ ಗಂಡು ಜನ್ಮಕ್ಕೆ ಶೋಭೆ. ಅವಳ ಸಾಮಾಜಿಕ ಕಳಕಳಿಯ ಸಣ್ಣ ಆಸೆಗೆ ಗಂಡನಾಗಿ ನನ್ನ ಉತ್ತೇಜನವಿದು. ಹರಸಿ.'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಅದೇ ರೀತಿ ತಮ್ಮ ಬಗ್ಗೆ ಬಂದ ಲೇಖನ ನೋಡಿ ಪರಿಮಳ ಜಗ್ಗೇಶ್ ಕೂಡ ಖುಷಿ ಆಗಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪರಿಮಳ ಅವರು ''ದೇವರ ಆಶೀರ್ವಾದ.. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆ.. ಜಗ್ಗೇಶ್, ನನ್ನ ತಂದೆ, ತಾಯಿ, ಮಕ್ಕಳು, ಸೊಸೆ, ಮೊಮ್ಮಗ ಇವರ ಪ್ರೋತ್ಸಾಹ ದಿಂದ 50ನೇ ವರ್ಷಕ್ಕೆ ಹೊಸ ಇನ್ನಿಂಗ್ಸ್ ಶುರು ಮಾಡಿದ್ದೇನೆ. ಜೀವನದಲ್ಲಿ ಉತ್ಸಾಹ ಇರುವವರಿಗೆ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ.'' ಎಂದು ಪರಿಮಳ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಅಂದಹಾಗೆ, ಜೀ ಕನ್ನಡ ವಾಹಿನಿಯ 'ಒಗ್ಗರಣೆ ಡಬ್ಬಿ' ಮಹಿಳೆಯರ ಮನ ಗೆದ್ದ ಕಾರ್ಯಕ್ರಮಗಳಲ್ಲಿ ಒಂದು. ಇಂತಹ ಕಾರ್ಯಕ್ರಮದಲ್ಲಿ ಈಗ ಪರಿಮಳ ಜಗ್ಗೇಶ್ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಒಂದು ಭಾಗದಲ್ಲಿ ಪ್ರತಿ ನಿತ್ಯ ಅವರು ಬರಲಿದ್ದಾರೆ. ಮುಖ್ಯವಾಗಿ ಅಡುಗೆಯ ಜೊತೆಗೆ ಮಹಿಳೆಯರಿಗೆ ಬೇಕಾಗುವ ಅನೇಕ ಟಿಪ್ಸ್ ಗಳನ್ನು ಅವರು ನೀಡಲಿದ್ದಾರೆ. ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು 2' ಕಾರ್ಯಕ್ರಮಕ್ಕೆ ನಟ ಜಗ್ಗೇಶ್ ತೀರ್ಪುಗಾರರಾಗಿದ್ದಾರೆ. ಅದರ ಜೊತೆಗೆ ಅವರ ಪತ್ನಿ ಕೂಡ ಅದೇ ವಾಹಿನಿ ಮೂಲಕ ಹೊಸ ಪಯಣ ಶುರು ಮಾಡುತ್ತಿದ್ದಾರೆ.


Click it and Unblock the Notifications











