ಸಾವಿನ ಅಂಚಿನಲ್ಲಿರುವ ಕನ್ನಡ ಚಿತ್ರರಂಗಕ್ಕೆ ಬೋಲ್ಟೇ ಇಲ್ಲ, ಇನ್ನು ಟೈಟ್ ಮಾಡಿ ಏನು ಪ್ರಯೋಜನ - ಜಗ್ಗೇಶ್...!
ಹತ್ತಿರ ಹತ್ತಿರ ಶತಮಾನದ ಇತಿಹಾಸವನ್ನು ಹೊಂದಿರುವ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ ಎನ್ನುವ ಮಾತು ಇಂದು ನಿನ್ನೆಯದ್ದಲ್ಲ. ಅನೇಕ ವರ್ಷಗಳಿಂದ ಅನೇಕರು ಈ ಕಹಿ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ನೋಡಲು ಮಾತ್ರ ಮನೆ ಸುಂದರವಾಗಿ ಕಾಣುತ್ತೆ. ಒಳ ಬಂದರೆ ಹಲವು ಸಮಸ್ಯೆಗಳು ಕಣ್ಣಿಗೆ ಕಾಣುತ್ತವೆ ಎಂದು ಹೇಳಿದ್ದಾರೆ.
ಆದರೂ ಕೂಡ ನಾಯಕತ್ವ ವಹಿಸಿಕೊಳ್ಳಲು ಯಾರು ತಯಾರಿಲ್ಲ. ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಮುನ್ನಡೆಯುವ ಪ್ರಯತ್ನವನ್ನು ಕೂಡ ಯಾರು ಮಾಡುತ್ತಿಲ್ಲ. ಬದಲಿಗೆ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಎನ್ನುತ್ತಾರೆ.

ಹೀಗಿರುವಾಗ ನಿನ್ನೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕನ್ನಡ ಚಿತ್ರರಂಗಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಗೆ ಕನ್ನಡ ಚಿತ್ರರಂಗದ ಹಲವರು ಹಾಜರಾಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಯಾರಿಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎನ್ನುವುದು ಗೊತ್ತಿದೆ ಎಂದು ಖಾರವಾಗಿ ಹೇಳಿದ್ದಾರೆ. ಡಿಸಿಎಂ ಡಿಕೆ ಅವರ ಈ ಮಾತುಗಳಿಗೆ ಈಗ ಕನ್ನಡ ಚಿತ್ರರಂಗದ ನವರಸನಾಯಕ ಜಗ್ಗೇಶ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಾಯಕರಾಗಿ ಬೇಸರ ಹೊರ ಹಾಕುತ್ತಾ ತಿರುಗೇಟನ್ನೂ ಕೂಡ ಈ ಮೂಲಕ ನೀಡಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಜಗ್ಗೇಶ್ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಕಾರ್ಯಕ್ರಮ ಇದ್ದಿದ್ದು 7 ಗಂಟೆಗೆ ನನಗೆ ಆಹ್ವಾನ ಪತ್ರಿಕೆ ತಲುಪಿದ್ದು 6 ಗಂಟೆಗೆ, ಜೊತೆಗೆ ಒಗಟ್ಟಿಲ್ಲಾ ಸಂವಾದವಿಲ್ಲಾ ಒಟ್ಟಾರೆ ಕಲಾವಿದರ ಸಂಘವೆ ಕಣ್ಮರೆ ಕನ್ನಡ ಚಿತ್ರರಂಗ ಅವಸಾನ ಕರ್ನಾಟಕದಲ್ಲಿ..ಯಾವ ಕಲಾವಿದರು ಏನಾಗಿದ್ದಾರೆ ಕಲಾವಿದರಾದ ನಮಗೆ ಮಾಹಿತಿಯಿಲ್ಲಾ!ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೆ ಇಲ್ಲಾ ಇನ್ನು ಟೈಟ್ ಮಾಡಿ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದ್ಧಾರೆ.
ಮುಂದುವರೆದು ಒಂದು ಕಮಿಟಿಮಾಡಿ ಅದರಲ್ಲಿ ಹಿರಿಯ ನಟರು ನಿರ್ಮಾಪಕರು ನಿರ್ದೇಶಕರು ಪತ್ರಕರ್ತರು ಇರುವಂತೆ ರಚಿಸಿ ಈಗಿನ ಚಿತ್ರರಂಗದ ವಾಸ್ತವ ಅರಿತು ಕನ್ನಡ ಚಿತ್ರರಂಗ ಉಳಿಯುವಂತೆ ಬೆಳೆಯುವಂತೆ ಒಗ್ಗಟ್ಟಿನಿಂದ ಒಟ್ಟುಗೂಡುವಂತೆ ಚಿಂತನೆಯ ಚಾವಡಿ ರಚನೆಯಾಗಲಿ!ನಿಮಗೆ ದಿನ ಸಿಗುವ ಕೆಲವರು ಮಾತ್ರ ಚಿತ್ರರಂಗವಲ್ಲಾ ಅನೇಕರಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟನ್ನು ನೀಡಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಜಗ್ಗೇಶ್ ಮತ್ತೊಂದು ಟ್ವಿಟ್ ಮಾಡಿದ್ದಾರೆ. ಕಲಾವಿದರು ಒಟ್ಟುಗೂಡಲೆಂದೆ ಡಾ. ರಾಜಕುಮಾರ್‌ರವರು ಕಲಾವಿದರ ಸಂಘ ಮಾಡಿದ್ದರು ದೌರ್ಭಾಗ್ಯ ಅದು ಇಂದು ನಿಷ್ಕ್ರಿಯಗೊಂಡಿದೆ ಕೂಡಲೆ ನಿಮ್ಮ ಅಧಿಕಾರಿಗಳಿಗೆ ಸೂಚಿಸಿ ಎಲೆಕ್ಷನ್ ಮಾಡಿಸಿ ಕಲಾವಿದರು ಒಂದೆಡೆ ಕೂರುವಂತೆ ಮಾಡಿ..ಒಗ್ಗಟ್ಟು ಇರುವ ಮನೆ ಹಾಳಾದ ನಿದರ್ಶನವಿಲ್ಲ. ಚಿತ್ರರಂಗದ ಸಮಸ್ಯೆ ಅನೇಕ, ನಿಮ್ಮ ಗಮನಕ್ಕಾಗಿ ತಂದಿರುವೆ ಎಂದು ನವರಸನಾಯಕ ಜಗ್ಗೇಶ್ ಹೇಳಿದ್ದಾರೆ.
ಸದ್ಯ ಜಗ್ಗೇಶ್ ಅವರ ಈ ಸರಣಿ ಟ್ವಿಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟು ಹಾಕಿವೆ. ಎಂದಿನಂತೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಇನ್ನು ಜಗ್ಗೇಶ್ ಕೇವಲ ನಟ ಮಾತ್ರ ಅಲ್ಲ ರಾಜಕಾರಣಿ ಕೂಡ ಹೌದು. ಈ ಕಾರಣಕ್ಕೆ ಹಲವರು ಜಗ್ಗೇಶ್ ಅವರ ಈ ಬರಹವನ್ನು ರಾಜಕೀಯದ ದೃಷ್ಟಿಯಿಂದ ಕೂಡ ನೋಡುತ್ತಿದ್ದಾರೆ. ರಾಜಕೀಯದ ಬಣ್ಣ ಕೊಡುತ್ತಿದ್ದಾರೆ.


Click it and Unblock the Notifications











