ಮಾಯಸಂದ್ರ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಗ್ಗೇಶ್ ಮುಂದಾದಾಗ ಅಡ್ಡಗಾಲು ಹಾಕಿದ್ದು ಯಾರು ? ಸತ್ಯ ಬಿಚ್ಚಿಟ್ಟ ನವರಸನಾಯಕ
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕೈಯಲ್ಲಿ ಕಾಸು ಇರಬೇಕು ಅಂತೇನು ಇಲ್ಲ. ಮೊಬೈಲ್‌ನಲ್ಲಿ ಅಪ್ಲಿಕೇಶನ್‌ಗಳಿದ್ದರೆ ಸಾಕು. ಚಹಾ ಅಂಗಡಿಯಿಂದ ಹಿಡಿದು ಫೈವ್ ಸ್ಟಾರ್ ಹೋಟೆಲ್‌ವರೆಗೆ, ಎಲ್ಲದಕ್ಕೂ ಸ್ಕ್ಯಾನ್ ಮಾಡಬಹುದು. ಡಿಜಿಟಲ್ ಇಂಡಿಯಾ ಅಂತ ಬೀಗಬಹುದು. ಆದರೆ.. ವಾಸ್ತವದಲ್ಲಿ ಚಂದ್ರಯಾನ, ಮಂಗಳಯಾನ, ವಿಕಾಸ್ ಎಂದು ನಾವು ಏನೇ ಮಾತನಾಡಿದರು ಕೂಡ ಹಳ್ಳಿಯಲ್ಲಿ ಇವತ್ತು ಕೂಡ ಮೂಲಭೂತ ಸೌಕರ್ಯಗಳು ಇಲ್ಲ.
ತಮ್ಮ ಪ್ರತಿನಿತ್ಯದ ಕೆಲಸ ಕಾರ್ಯಕ್ಕೆ ಹಲವಾರು ಜನ ದಿನ ನಿತ್ಯ ಹಳ್ಳಿಗಳಿಂದ ಬೇರೆ ಬೇರೆ ಊರಿಗೆ ಹೋಗುತ್ತಾರೆ. ಆದರೆ ಬಿಸಿಲಲ್ಲಿ ಧೂಳು ತಿನ್ಕೊಂಡು ರಸ್ತೆ ಬದಿ ಬಸ್ಸಿಗಾಗಿ ಕಾಯಬೇಕೆ ಹೊರತು ಬಸ್ ಸ್ಟ್ಯಾಂಡ್‌ಗಳು ಮಾತ್ರ ಕಾಣಿಸುವುದೇ ಇಲ್ಲ. ಇನ್ನು ಕೂರಲು ಆಸನದ ವ್ಯವಸ್ಥೆ.. ಶೌಚಾಲಯ.. ಕುಡಿಯುವ ನೀರೆಲ್ಲ ದೂರದ ಮಾತು. ಸೌಲಭ್ಯಗಳ ಕೊರತೆಯಿಂದ ಇವತ್ತು ಕೂಡ ಹಲವರು ನರಳುವಂತಾಗಿದೆ. ಇದಕ್ಕೆ ಕೈಗನ್ನಡಿಯೇ ವೈರಲ್ ಆದ ವಿಡಿಯೋ.
More than 1,000 passengers and students use Mayasandra every day, yet there is no proper KSRTC bus stand, no public toilet, no shelter, and no seating.https://t.co/szqL5r3dWl@DKShivakumar @Jaggesh2 @narendramodi @RahulGandhi#Mayasandra #KSRTC #Tumakuru #political #india pic.twitter.com/u3XVnFNdbT
— Mohan Moku (@PMokushetty) July 6, 2026
ಮಾಯಸಂದ್ರ ಬಸ್ ನಿಲ್ದಾಣ ಕಥೆ
ಹೌದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಪ್ರಮುಖ ಕೇಂದ್ರವಾದ ಮಾಯಸಂದ್ರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಮತ್ತು ಶೌಚಾಲಯವಿಲ್ಲದೆ ಪ್ರತಿದಿನ ಸಾವಿರಾರು ಪ್ರಯಾಣಿಕರು ಪಡುತ್ತಿರುವ ಗೋಳಿನ ವಿಡಿಯೋ ಇದು. ಮೋಹನ್ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ಧಾರೆ.
ಇನ್ನು ಎಲ್ಲರಿಗೆ ಗೊತ್ತಿರುವಂತೆ ಕನ್ನಡ ಚಿತ್ರರಂಗದ ನವರಸನಾಯಕ ಜಗ್ಗೇಶ್, ಇದೇ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿಯ ಆನಡುಗು ಗ್ರಾಮದ ಸಣ್ಣ ಕುಟುಂಬದಿಂದ ಬಂದ ಹಳ್ಳಿ ಹುಡುಗ.
ಸಾಧನೆಯ ಶಿಖರಕ್ಕೇರಿದ್ದರೂ, ನಾಯಕನಾಗಿ-ರಾಜಕಾರಣಿಯಾಗಿ ಮನೆ ಮಾತಾದರೂ, ಬೆಂಗಳೂರು-ದೆಹಲಿ ಎಂದು ಓಡಾಡಿಕೊಂಡಿದ್ದರೂ ಕೂಡ ಜಗ್ಗೇಶ್ ತಮ್ಮ ಬೇರನ್ನು ಇವತ್ತು ಮರೆತಿಲ್ಲ. ಆಡಿ ನಲಿದು ಬೆಳೆದ ಮಾಯಸಂದ್ರವನ್ನು ಕೂಡ ಮರೆತಿಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಹಿಂದೆ ಸಮಯ ಸಿಕ್ಕಾಗೆಲ್ಲಾ ಹಲವಾರು ಬಾರಿ ಮಾಯಸಂದ್ರದ ನೆನಪುಗಳನ್ನು ಹಂಚಿಕೊಂಡು ಜಗ್ಗೇಶ್ ಭಾವುಕರಾಗಿದ್ದಾರೆ.
ಇಂಥಾ ಜಗ್ಗೇಶ್ ಅವರ ಕಣ್ಣಿಗೆ ಮೋಹನ್ ಅವರು ಹಂಚಿಕೊಂಡಿರುವ ವಿಡಿಯೋ ಸಹಜವಾಗಿಯೇ ಬಿದ್ದಿದೆ. ಈ ಹಿನ್ನೆಲೆ ಕೂಡಲೇ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್, ಮಾಯಸಂದ್ರಕ್ಕೆ ಬಸ್ ನಿಲ್ದಾಣ ಬಾರದಿರಲು ಅಲ್ಲಿನ ಸ್ಥಳೀಯ ರಾಜಕೀಯ ಮತ್ತು ಗ್ರಾಮ ಪಂಚಾಯಿತಿಯ ಸ್ವಾರ್ಥವೇ ಕಾರಣ ಎಂಬ ಕಹಿ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.

ಮೋಹನ್ ಅವರ ಪ್ರಶ್ನೆಗೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಉತ್ತರ ನೀಡಿರುವ ಜಗ್ಗೇಶ್, ತುರುವೇಕೆರೆ ಮತ್ತು ಸಿ.ಎಸ್.ಪುರ ಬಸ್ ನಿಲ್ದಾಣಗಳನ್ನು 2010ರಲ್ಲಿ ಅಭಿವೃದ್ಧಿಪಡಿಸಿದ ಸಮಯದಲ್ಲಿಯೇ, ಮಾಯಸಂದ್ರ ಬಸ್ ನಿಲ್ದಾಣವನ್ನೂ ಸಹ ಅತ್ಯಂತ ಉತ್ತಮ ದರ್ಜೆಯಲ್ಲಿ ನಿರ್ಮಿಸುವ ಕಾರ್ಯ ಆರಂಭದ ಹಂತ ತಲುಪಿತ್ತು ಎಂದು ಹೇಳಿದ್ದಾರೆ. ಆದರೆ ಅದಾಗಲಿಲ್ಲ. ಅದಕ್ಕೆ ಜಗ್ಗೇಶ್ ನೀಡಿರುವ ಕಾರಣ ಇಲ್ಲಿದೆ.
ಜಗ್ಗೇಶ್ ಟ್ವೀಟ್
ಮಹನೀಯರೆ ತುರುವೇಕೆರೆ, ಸಿ.ಎಸ್.ಪುರ ಬಸ್ ನಿಲ್ದಾಣ 2010ರಲ್ಲಿ ಮಾಡಿದ ಸಮಯದಲ್ಲಿ ಮಾಯಸಂದ್ರ ಬಸ್ ನಿಲ್ದಾಣಕ್ಕು ಉತ್ತಮ ದರ್ಜೆಯಲ್ಲಿ ಮಾಡುವ ಕಾರ್ಯ ಆರಂಭದ ಹಂತ ತಲುಪಿತ್ತು ಆದರೆ ಬಸ್ ನಿಲ್ದಾಣ ಮಾಯಸಂದ್ರ ಪಂಚಾಯ್ತಿಗೆ ಸೇರಿದ ಜಾಗ ಹಾಗು ಅಲ್ಲಿನ ಅಂಗಡಿಗಳ ಬಾಡಿಗೆ ಪಂಜಾಯ್ತಿಗೆ ಸೇರುತ್ತದೆ.
ಬಸ್ ನಿಲ್ದಾಣ ಮಾಡಿದರೆ ಪಂಚಾಯ್ತಿಗೆ ವರಮಾನ ಕಡಿತ ಆಗುತ್ತದೆ ಎಂದು ಬಸ್ ನಿಲ್ದಾಣ ಮಾಡುವ ಕಾರ್ಯಕ್ಕೆ ವಿಘ್ನ ಉಂಟು ಮಾಡಿದರು...ಬಹಳ ನೊಂದು ಆ ಕಾರ್ಯ ಕೈಬಿಟ್ಟೆ.ಸಾರ್ವಜನಿಕವಾಗಿ ನೀವು ಕೇಳಿದ್ದಕ್ಕೆ ಸತ್ಯ ಅರಿವಾಗಲಿ ಎಂದು ಉತ್ತರಿಸಿದೆ.ಈಗಲೂ ಪಂಚಾಯ್ತಿಯ ಎಲ್ಲರನ್ನು ಒಪ್ಪಿಸಿ ಬನ್ನಿ ಹೊಸ ಬಸ್ ನಿಲ್ದಾಣ ಮಾಡಿಸುವೆ. ನಿಮ್ಮಂತೆ ನಮಗು ಆ ಕಾರ್ಯ ಆಗಲಿ ಎಂಬ ಆಸೆಯಿದೆ. ಧನ್ಯವಾದ ಎಂದು ಜಗ್ಗೇಶ್ ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಬಾಲ್‌ನ್ನು ಪಂಚಾಯ್ತಿಯ ಕೋರ್ಟ್‌ಗೆ ಹಾಕಿದ್ದಾರೆ. ಇನ್ನಾದರೂ ಸ್ಥಳೀಯ ಮಾಯಸಂದ್ರದ ಜನರಿಗೆ ಹೊಸ ಬಸ್ ಸ್ಟ್ಯಾಂಡ್ ಸಿಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಮಹನೀಯರೆ ತುರುವೇಕೆರೆ,cspura
— ನವರಸನಾಯಕ ಜಗ್ಗೇಶ್ (@Jaggesh2) July 6, 2026
ಬಸ್ ನಿಲ್ದಾಣ 2010ರಲ್ಲಿ ಮಾಡಿದ ಸಮಯದಲ್ಲಿ ಮಾಯಸಂದ್ರ ಬಸ್ ನಿಲ್ದಾಣಕ್ಕು ಉತ್ತಮ ದರ್ಜೆಯಲ್ಲಿ ಮಾಡುವ ಕಾರ್ಯ ಆರಂಭದ ಹಂತ ತಲುಪಿತ್ತು ಆದರೆ ಬಸ್ ನಿಲ್ದಾಣ ಮಾಯಸಂದ್ರ ಪಂಚಾಯ್ತಿಗೆ ಸೇರಿದ ಜಾಗ ಹಾಗು ಅಲ್ಲಿನ ಅಂಗಡಿಗಳ ಬಾಡಿಗೆ ಪಂಜಾಯ್ತಿಗೆ ಸೇರುತ್ತದೆ...ಬಸ್ ನಿಲ್ದಾಣ ಮಾಡಿದರೆ ಪಂಚಾಯ್ತಿಗೆ ವರಮಾನ ಕಡಿತ… https://t.co/cSoqN970Qw


Click it and Unblock the Notifications