ಅದೊಂದು ಕಾರಣಕ್ಕೆ ಸಹೋದರ ಕೋಮಲ್ ಬಗ್ಗೆ ಜಗ್ಗೇಶ್ ಅವರಿಗೆ ಬೇಸರ ಯಾಕೆ?
'ರಂಗನಾಯಕ' ಬಳಿಕ ನಟ ಜಗ್ಗೇಶ್ ಸಿನಿಮಾಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಸಹೋದರ ಕೋಮಲ್ ಕೂಡ ಒಂದಷ್ಟು ವರ್ಷಗಳ ಬ್ರೇಕ್ ಬಳಿಕ ನಿಧಾನವಾಗಿ ಒಂದೊಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೋಮಲ್ ನಟನೆಯ 'ತೆನಾಲಿ ಡಿ ಎ LLB' ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಸಹೋದರ ಜಗ್ಗೇಶ್ ಮುಹೂರ್ತ ಸಮಾರಂಭಕ್ಕೆ ಹಾಜರಾಗಿ ಶುಭ ಕೋರಿದ್ದಾರೆ.
ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೀತು. ಮೊದಲ ದೃಶ್ಯಕ್ಕೆ ಜಗ್ಗೇಶ್ ಕ್ಲಾಪ್ ಮಾಡಿ ಚಿತ್ರಕ್ಕೆ ಚಾಲನೆ ಕೊಟ್ಟರು. ಆದಿಚುಂಚನಗಿರಿ ಸ್ವಾಮಿಗಳಾದ ನಿರ್ಮಲಾನಂದ ಮಹಾಸ್ವಾಮೀಜಿ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿ ಆರ್ಶೀವದಿಸಿದರು. 'ತೆನಾಲಿ ಡಿ ಎ LLB' ಚಿತ್ರದಲ್ಲಿ ವಕೀಲನ ಪಾತ್ರದಲ್ಲಿ ಕೋಮಲ್ ನಟಿಸುತ್ತಿದ್ದಾರೆ. ನಿಜ ಜೀವನದಲ್ಲಿ ಎಲ್‌ಎಲ್‌ಬಿ ಮುಗಿಸಿದ್ದ ಅವರು ಬಣ್ಣ ಹಚ್ಚಿ ಚಿತ್ರರಂಗಕ್ಕೆ ಬಂದುಬಿಟ್ಟರು.

ಅಣ್ಣ ಜಗ್ಗೇಶ್ ಜೊತೆಗೆ ಹಾಸ್ಯ ಕಲಾವಿದನಾಗಿ ಕೋಮಲ್ ಗುರ್ತಿಸಿಕೊಂಡರು. ಬಳಿಕ ಹೀರೊ ಆಗಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಕೋವಿಡ್ ಸೋಂಕು ತಗುಲಿ ನಟ ಕೋಮಲ್ ಕೆಲ ದಿನ ಸಂಕಷ್ಟಕ್ಕೆ ಸಿಲುಕಿದ್ದರು. ವೈದ್ಯರ ಚಿಕಿತ್ಸೆ ಹಾಗೂ ರಾಯರ ಆರ್ಶೀವಾದದಿಂದ ಆತನನ್ನು ಉಳಿಸಿಕೊಂಡೆ ಎಂದು ಜಗ್ಗೇಶ್ ಸುದೀರ್ಘವಾಗಿ ಪೋಸ್ಟ್ ಮಾಡಿದ್ದರು. ಸದ್ಯ 'ತೆನಾಲಿ ಡಿ ಎ LLB' ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಹೋದರನ ಬಗ್ಗೆ ಮತ್ತೊಂದು ವಿಚಾರ ತೆರೆದಿಟ್ಟಿದ್ದಾರೆ.
ಎಲ್‌ಎಲ್‌ಬಿ ಓದಿದ್ದ ಕೋಮಲ್ ಚಿತ್ರರಂಗಕ್ಕೆ ಬರದೇ ಹೋಗಿದ್ದರೆ ಇವತ್ತು ಜಡ್ಜ್ ಆಗಿ ಸೇವೆ ಸಲ್ಲಿಸಬೇಕಿತ್ತು ಎಂದು ಜಗ್ಗೇಶ್ ತಿಳಿಸಿದ್ದಾರೆ. "ಕೋಮಲ್ ಈ ಚಿತ್ರದಲ್ಲಿ ವಕೀಲನ ಪಾತ್ರ ಮಾಡ್ತಿದ್ದಾರೆ. ಆದ್ರೆ ನಿಜ ಜೀವನದಲ್ಲೂ ವಕೀಲ ಆಗಬೇಕಿತ್ತು. ಅವತ್ತು ಕೊಂಚ ತಾಳ್ಮೆ ವಹಿಸಿದ್ದರೆ ಸಿನಿಮಾ ಕಡೆ ಬರೆದೇ ಹೋಗಿದ್ರೆ, ಇವತ್ತು ಅವನು ಬಹಳ ಜಡ್ಜ್ ಸ್ಥಾನದಲ್ಲಿ ಇರ್ತಿದ್ದ. ಇವತ್ತು ಆತನ ಅನೇಕ ಸ್ನೇಹಿತರು ಜಡ್ಜ್ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ" ಎಂದಿದ್ದಾರೆ.
ನಾನು ಬಹಳಷ್ಟು ಸಲ ನಮ್ಮ ತಾಯಿ ಅವರನ್ನು ಈ ವಿಚಾರದಲ್ಲಿ ಬೈಯ್ದುಕೊಳ್ತೀನಿ. ಎಂತಹ ಕೆಲಸ ಮಾಡಿಬಿಟ್ಲು ನಮ್ಮಮ್ಮ. ನಾನು ಹೊಟ್ಟೆಪಾಡಿಗೆ ಚಿತ್ರರಂಗಕ್ಕೆ ಬಂದೆ. ಅವನನ್ನು ಬಣ್ಣ ಹಚ್ಚಿಸಿಬಿಟ್ಲಲ್ಲ ಅಂತ ಸಿಟ್ಟಿತ್ತು. ಇವತ್ತು ಚಿತ್ರದಲ್ಲಿ ಆತ ಲಾಯರ್ ಪಾತ್ರ ಮಾಡ್ತಿದ್ದಾನೆ. ತಂಡಕ್ಕೆ ಶುಭ ಹಾರೈಸುತ್ತೀನಿ ಎಂದು ಹೇಳಿದ್ದಾರೆ.
ಕಾಜಲ್ ಕುಂದರ್ ಹಾಗೂ ನಟಿ ಅಕ್ಷಿತಾ ಬೋಪಯ್ಯ ಚಿತ್ರದಲ್ಲಿ ಕೋಮಲ್ ಜೊತೆ ನಾಯಕಿಯರಾಗಿ ನಟಿಸುತ್ತಿದ್ದಾರೆ. 'ತೆನಾಲಿ ಡಿ ಎ LLB' ಚಿತ್ರಕ್ಕೆ ಸಿದ್ದ್ರುವ್ ಸಿದ್ದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಂತೋಷ್ ಮಾಯಪ್ಪ, ಪ್ರದೀಪ್ ಕುಮಾರ್ ಮಹಾಲಿಂಗಯ್ಯ, ರೇಣುಕಾ ಪ್ರಸಾದ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಿತ್ವಿಕ್ ಮುರಳಿಧರನ್ ಸಂಗೀತ ಹಾಗೂ ಉದಯ್ ಲೀಲಾ ಛಾಯಾಗ್ರಹಣ ಚಿತ್ರಕ್ಕಿದೆ. 'ಕೋಣ' ಚಿತ್ರದಲ್ಲಿ ಕೊನೆಯದಾಗಿ ಕೋಮಲ್ ಬಣ್ಣ ಹಚ್ಚಿದ್ದರು.
ಜಗ್ಗೇಶ್ ನಟನೆಯ 'ಸೂಪರ್ ನನ್ಮಗ' ಚಿತ್ರದಲ್ಲಿ ಮೊದಲಬಾರಿಗೆ ಕೋಮಲ್ ಬಣ್ಣ ಹಚ್ಚಿದ್ದರು. ಬಳಿಕ 'ಶಿವಣ್ಣ', 'ಸೋಮ', 'ದ್ರೋಣ', 'ಜಿಪುಣ ನನ್ನ ಗಂಡ' ಹೀಗೆ ಅಣ್ಣನ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಬಂದರು. 'ಕುರಿಗಳು ಸಾರ್ ಕುರಿಗಳು' ಹಾಗೂ ಕತ್ತೆಗಳು ಸಾರ್ ಕತ್ತೆಗಳು' ಚಿತ್ರಗಳಲ್ಲಿ ತಮ್ಮ ಕಾಮಿಡಿ ಟೈಮಿಂಗ್ ಮೂಲಕ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದರು. 'ಮಿ. ಗರಗಸ' ಚಿತ್ರದಲ್ಲಿ ಹೀರೊ ಆಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. 'ಕೆಂಪೇಗೌಡ- 2' ಚಿತ್ರದಲ್ಲಿ ಮಾಸ್ ಹೀರೊ ಆಗಿ ಅಬ್ಬರಿಸುವ ಪ್ರಯತ್ನ ಕೂಡ ಮಾಡಿದ್ದರು.


Click it and Unblock the Notifications