'ಬಂಗಾರದ ಮನುಷ್ಯ' ಸಿನಿಮಾದ ನೋಡಿದ ಕಥೆ ಹೇಳಿದ ಜಗ್ಗೇಶ್
'ಬಂಗಾರದ ಮನುಷ್ಯ' ಸಿನಿಮಾ ನೋಡಿ ಅದೆಷ್ಟೋ ಯುವಕರು ನಗರ ಬಿಟ್ಟು ಹಳ್ಳಿಗೆ ಹಿಂತಿರುಗಿ ಕೃಷಿಯಲ್ಲಿ ತೊಡಗಿಕೊಂಡರು ಎಂಬ ವಿಷಯವನ್ನು ಹಿರಿಯರು ಈಗಲೂ ಉದಾಹರಣೆಯಾಗಿ ಕೊಡ್ತಾರೆ. ಸಿನಿಮಾ ಜನರ ಬದುಕನ್ನು ಬದಲಿಸಬಲ್ಲದು ಎನ್ನುವುದಕ್ಕೆ ಬಂಗಾರದ ಮನುಷ್ಯ ಸಿನಿಮಾ ಉತ್ತಮ ನಿದರ್ಶನ.
ಕನ್ನಡ ಚಿತ್ರರಂಗದಲ್ಲಿ ಬಂಗಾರದ ಮನುಷ್ಯ ಸಿನಿಮಾಗೆ ವಿಶೇಷ ಸ್ಥಾನವಿದೆ. ರೈತ, ಕೃಷಿ, ಮಣ್ಣಿನ ಮಹತ್ವ ಸಾರಿದ ಯಶಸ್ವಿ ಸಿನಿಮಾ. ಡಾ ರಾಜ್ ಕುಮಾರ್ ನಾಯಕರಾಗಿ ನಟಿಸಿದ್ದ ಅದ್ಭುತ ಚಿತ್ರ. ನಿರ್ದೇಶಕ ಸಿದ್ದಲಿಂಗಯ್ಯ ಅವರ ಸಾರಥ್ಯದಲ್ಲಿ ಮೂಡಿ ಬಂದಿದ್ದ ಈ ಚಿತ್ರ ಭಾರತೀಯ ಸಾರ್ವಕಾಲಿಕ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಅಂದರೆ ತಪ್ಪಾಗಲಾರದು.
ಈ ಸಿನಿಮಾ ಬಿಡುಗಡೆಯಾಗಿ 49 ವರ್ಷ ಮುಗಿದು ಸ್ವರ್ಣ ಮಹೋತ್ಸವ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. 1972ರ ಮಾರ್ಚ್ 31 ರಂದು ಬಂಗಾರದ ಮನುಷ್ಯ ಸಿನಿಮಾ ತೆರೆಕಂಡಿತ್ತು. ಟಿಕೆ ರಾಮರಾವ್ ಅವರ ಬಂಗಾರದ ಮನುಷ್ಯ ಕಾದಂಬರಿ ಆಧರಿಸಿ ತಯಾರಿಸಿದ್ದ ಚಿತ್ರ ಇದು.

ಈ ಚಿತ್ರದ ನೋಡಿದ ನೆನೆಪನ್ನು ಹಿರಿಯ ನಟ ಜಗ್ಗೇಶ್ ಮೆಲುಕು ಹಾಕಿದ್ದಾರೆ. ಸ್ವರ್ಣ ವರ್ಷಕ್ಕೆ ಪ್ರವೇಶ ಮಾಡಿದ ಬಂಗಾರದ ಮನುಷ್ಯ ಚಿತ್ರವನ್ನು ಮೊದಲ ಸಲ ನೋಡಿದ ಅನುಭವವನ್ನು ಜಗ್ಗೇಶ್ ಹೇಳಿಕೊಂಡಿದ್ದಾರೆ.
''ಬೆಂಗಳೂರಿನ ಕರಗ ಹಾಗು ಈ ಚಿತ್ರ ನೋಡಲು ಅಂದು ಜಟಕಗಾಡಿಯಲ್ಲಿ ಅಪ್ಪ ಅಮ್ಮ ಅಕ್ಕಂದಿರು ತಮ್ಮ ರಾಮಣ್ಣ ಚಿಕ್ಕಮ್ಮ ಕರಗನೋಡಿ, ನಂತರ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಈ ಚಿತ್ರ ನೋಡಿ ನನ್ನ ಶಾಲೆ ಹಿಮಾಂಶು ಜೋತಿ ಕಲಾ ಪೀಠದಲ್ಲಿ ಸಹ ಪಾಟಿಗಳಿಗೆ ಕಥೆ ಹೇಳಿ ಸಂಭ್ರಮಿಸಿದ್ದೆ. ಇಂದು ಅಪ್ಪ ಅಮ್ಮ ಚಿಕ್ಕಮ್ಮ ಇಲ್ಲಾ. ಆದರೆ ಅವರ ಮಮತೆ ಪ್ರೀತಿ. ಚಿತ್ರ ನೆನಪಾಯಿತು'' ಎಂದು ಟ್ವೀಟ್ ಮಾಡಿದ್ದಾರೆ.

ರಾಜ್ ಕುಮಾರ್ ಜೊತೆ ಆರತಿ, ಭಾರತಿ, ಶ್ರೀನಾಥ್, ಆದವಾನಿ ಲಕ್ಷ್ಮಿ ದೇವಿ, ಲೋಕನಾಥ್, ಬಾಲಕೃಷ್ಣ, ವಜ್ರಮುಣಿ, ದ್ವಾರಕೀಶ್, ಎಂಪಿ ಶಂಕರ್ ಸೇರಿದಂತೆ ಹಲವರು ಕಲಾವಿದರು ನಟಿಸಿದ್ದರು. ಜಿಕೆ ವೆಂಕಟೇಶ್ ಸಂಗೀತ ನೀಡಿದ್ದರು.


Click it and Unblock the Notifications











