'ನನ್ನ ತಂದೆ ಸತ್ತಾಗಲು ಹಾಗೆ ಆಯಿತು': ಅಣ್ಣಾವ್ರ ಸಾವಿನ ದಿನ ನೆನೆದ ಜಗ್ಗೇಶ್
ಡಾ ರಾಜ್ ಕುಮಾರ್ ಅವರು ಅಗಲಿ 15 ವರ್ಷ ಕಳೆದಿದೆ. ಏಪ್ರಿಲ್ 12 ರಂದು ಅಣ್ಣಾವ್ರ ಪುಣ್ಯ ಸ್ಮರಣೆ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿ ರಾಜ್ ಕುಟುಂಬದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಶಿವರಾಜ್ ಕುಮಾರ್, ರಾಘವೇಂದ್ರ ಕುಮಾರ್ ಕುಟುಂಬ ಸದಸ್ಯರು ರಾಜ್ ಕುಮಾರ್ ಸಮಾಧಿ ಬಳಿ ಆಗಮಿಸಿ ತಂದೆಗೆ ಪುಷ್ಪ ನಮನ ಸಲ್ಲಿಸಿದರು.
ಮತ್ತೊಂದೆಡೆ ಅಭಿಮಾನಿಗಳು 'ಮತ್ತೆ ಹುಟ್ಟಿ ಬಾ ಅಣ್ಣಾ' ಎಂದು ಪ್ರಾರ್ಥಿಸಿದ್ದಾರೆ. ಹಿರಿಯ ನಟ ಜಗ್ಗೇಶ್ ಅವರು ರಾಜ್ ಕುಮಾರ್ ಅವರ ಸಾವಿನ ದಿನವನ್ನು ಸ್ಮರಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಅಣ್ಣಾವ್ರ ಆದರ್ಶಗಳನ್ನು ಪಾಲಿಸುವ ಜಗ್ಗೇಶ್ ಅವರು ''ಡಾ ರಾಜ್ ಇನ್ನಿಲ್ಲ'' ಎಂಬ ಸುದ್ದಿಯನ್ನು ಹೇಗೆ ಸ್ವೀಕರಿಸಿದರು ಎಂದು ನೆನೆಪಿಸಿಕೊಂಡಿದ್ದಾರೆ. ಮುಂದೆ ಓದಿ...

ಪಾಂಡವರು ಚಿತ್ರೀಕರಣದಲ್ಲಿದ್ದ ಜಗ್ಗೇಶ್
''ಏಪ್ರಿಲ್ 2006 ಮಧ್ಯಾಹ್ನ 1 ಘಂಟೆಗೆ 'ಪಾಂಡವರು' ಚಿತ್ರದ ಊಟದ ವಿರಾಮ. ಶ್ರೀರಂಗಪಟ್ಟಣದ ಕುಂತಿ ಬೆಟ್ಟದ ರಸ್ತೆಯಲ್ಲಿನ ಮನೆ. ಅಂದು ಅಂಬರೀಶರವರ ಅಭಿಮಾನಿ ಮನೆಯಿಂದ ವಿಶೇಷ ಊಟದ ವ್ಯವಸ್ಥೆ ಇತ್ತು. ಅಂದು ಅಂಬರೀಶರವರೇ ಎಲ್ಲರಿಗು ಪ್ರೀತಿಯಿಂದ ಊಟ ಬಡಿಸಿ ತಾವು ತಿಂದರು. ಆಗ ಕ್ಯಾರಾವಾನ್ ವ್ಯವಸ್ಥೆ ಇರದ ಕಾರಣ ಎಲ್ಲ ನಟರು ಅವರವರ ಕಾರಿನಲ್ಲಿ ಎ/ಸಿ ಹಾಕಿ ವಿಶ್ರಾಂತಿ ಪಡಿಯುವ ಅಭ್ಯಾಸ'' ಎಂದು ಘಟನೆ ವಿವರಿಸಿದ್ದಾರೆ.

ಬರಸಿಡಿಲಿನಂತೆ ಬಂದ ಸುದ್ದಿ
''ನಾನು ಊಟ ಆದಮೇಲೆ 1/2 ಘಂಟೆ ಮಲಗುವೆ. ನನಗೆ ತೊಂದರೆ ಕೊಡದಂತೆ ಸಹಾಯಕರು ಕಾವಲು ಇರುತ್ತಾರೆ. ನಾನು ಏಳುವವರೆಗು ಯಾರು ಹತ್ತಿರ ಬರೋಲ್ಲಾ. ಆ ನಂಬಿಕೆಯಲ್ಲೇ ನಿದ್ರೆಗೆ ಜಾರಿದೆ. ಇದ್ದಕ್ಕಿದ್ದಂತೆ ವಾಂತಿ ಬಾಬು ಕಿಟಕಿ ಜೋರಾಗಿ ತಟ್ಟಿದ ಸಿಟ್ಟು ನೆತ್ತಿಗೇರಿತು. ಕಾರಣ ಕೇಳಲು ಬಾಗಿಲು ತೆರೆದೆ. ವಾಂತಿಬಾಬು ರಾಜಣ್ಣ ಹೋಗಿಬಿಟ್ಟರು ಎಂದ'' - ಜಗ್ಗೇಶ್

ನನ್ನ ತಂದೆ ಸತ್ತಾಗಲು ಹಾಗೆ ಆಯಿತು
''ಕೆಲ ನಿಮಿಷ ಏನು ಕಾಣಲಿಲ್ಲಾ ಕೇಳಲಿಲ್ಲಾ. ನನ್ನ ತಂದೆ ಸತ್ತಾಗಲು ಹಾಗೆ ಆಯಿತು. ಯಾರಿಗು ಹೇಳದೆ ಹೊರಟವನೆ ಅಣ್ಣನ ಚಿತಾವಾಹನ ತಲುಪಿದೆ. ಕೊನೆವರೆಗು ಜೊತೆಯಿದ್ದು ಬಾಲ್ಯದಿಂದ ಕಂಡ ರಾಜಣ್ಣನ ಪಾತ್ರ ಹಾಗು ಅವರ ಸಾಂಗತ್ಯ ಮಾತ್ರ ನೆನಪಾಗುತ್ತಿತ್ತು. ಇತಿಹಾಸ ನೆನಪಿನ ಅಂಗಳಕ್ಕೆ ಜಾರಿತು. ರಾಜಣ್ಣ ನನ್ನ ಹೃದಯದಲ್ಲೆ ಲೀನವಾದರು. ಮತ್ತೆ ಬನ್ನಿ ಅಣ್ಣ.'' ಎಂದು ಅಣ್ಣಾವ್ರ ಸಾವಿನ ದಿನ ಮೆಲುಕು ಹಾಕಿದ್ದಾರೆ.
Recommended Video

ಜೀವನದುದ್ದಕ್ಕು ಅಣ್ಣಾವ್ರ ಆದರ್ಶ ಪಾಲನೆ
ನಟ ಜಗ್ಗೇಶ್ ತಮ್ಮ ಮಕ್ಕಳಿಗೆ ಯತಿರಾಜ್ ಮತ್ತು ಗುರುರಾಜ್ ಎಂದು ಹೆಸರಿಟ್ಟಿರುವುದು ಡಾ.ರಾಜ್ ಮೇಲಿನ ಅಪಾರ ಪ್ರೀತಿಯಿಂದ. ಯತಿ ಮತ್ತು ಗುರು ಎಂಬ ಹೆಸರಿನ ಜೊತೆಗೆ ರಾಜ್ ಎಂದು ಹೆಸರು ಸೇರಿಸಿರುವುದು ಅದೇ ಕಾರಣಕ್ಕೆ. ವಿಶೇಷ ಅಂದ್ರೆ ಅಣ್ಣಾವ್ರ ಹುಟ್ಟುಹಬ್ಬದಂದೇ ಗುರುರಾಜ್ ವಿವಾಹವೂ ನಡೆದಿದೆ.


Click it and Unblock the Notifications











