ಮಾತು ಬಾರದ ಜಗ್ಗೇಶ್ ಸಹೋದರ ನಟಿಸಿದ್ದ ಚಿತ್ರ ಯಾವ್ದು? ನವರಸ ನಾಯಕನ ಭಾವುಕ ಪೋಸ್ಟ್
ನಟ ಜಗ್ಗೇಶ್ ಹಾಗೂ ಸಹೋದರ ಕೋಮಲ್ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಅಣ್ಣನ ಹಾದಿಯಲ್ಲೇ ಕೋಮಲ್ ಕೂಡ ಹಾಸ್ಯ ನಟನಾಗಿ ಬಳಿಕ ಹೀರೋ ಆಗಿ ಸದ್ದು ಮಾಡಿದವರು. ಜಗ್ಗೇಶ್ ಅವರಿಗೆ ಮಾತುಬಾರದ ಮತ್ತೊಬ್ಬ ಸಹೋದರ ಕೂಡ ಇದ್ದಾರೆ. ಅವರ ಹೆಸರು ರಾಮಚಂದ್ರ.
ಸಾಕಷ್ಟು ಸಂದರ್ಭಗಳಲ್ಲಿ ಜಗ್ಗೇಶ್ ತಮ್ಮ ಎರಡನೇ ಸಹೋದರನ ಬಗ್ಗೆ ಮಾತನಾಡಿದ್ದಾರೆ. ಅವರ ಬಗ್ಗೆ ಅಪಾರ ಪ್ರೀತಿ. ಸೋಶಿಯಲ್ ಮೀಡಿಯಾದಲ್ಲಿ ಸಹೋದರನ ಕುರಿತು ಕೆಲವೊಮ್ಮೆ ಬರೆದುಕೊಂಡಿರುವುದು ಇದೆ. ಎರಡು ವರ್ಷದ ಹಿಂದೆ ರಾಮಚಂದ್ರ ಅವರ ಮಗ ಮೋಹನ್ ಎಂಬುವವರು ಮದುವೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ನಿಮಗೆ ಗೊತ್ತಾ ಜಗ್ಗೇಶ್ ಅವರ ಸಹೋದರ ಮಾತು ಬಾರದ ದೇವರ ಮಗ ಒಂದು ಚಿತ್ರದಲ್ಲಿ ನಟಿಸಿದ್ದಾರೆ. ಅಣ್ಣನ ಚಿತ್ರದಲ್ಲಿ ಸಣ್ಣದಾಗಿ ಹೀಗೆ ಬಂದು ಹಾಗೆ ಹೋಗುವ ಪಾತ್ರದಲ್ಲಿ ಮಿಂಚಿದ್ದರು. ಈ ಬಗ್ಗೆ ಇದೀಗ ಜಗ್ಗೇಶ್ ನೆನಪಿಸಿಕೊಂಡು ಪೋಸ್ಟ್ ಮಾಡಿದ್ದಾರೆ. ನನ್ನಡ ಎರಡನೇ ಸಹೋದರನ ಕಥೆ. "ಕಲೆ ಮಾತು ಬರದವರನ್ನು ಮಾತಾಡಿಸುವ ಶಕ್ತಿ ಹೊಂದಿದೆ... ನನ್ನ ತಮ್ಮ ರಾಮಣ್ಣ ನಿಜ ಜೀವನದಲ್ಲಿ ಸರಿಯಾಗಿ ಮಾತು ಬರದು..ಅವನಿಗೆ ಆತ್ಮಸ್ಥೈರ್ಯ ತುಂಬಲು ನನ್ನ ಚಿತ್ರದಲ್ಲಿ ನಟಿಸಿ ಡಬ್ಬಿಂಗ್ ನಲ್ಲಿ ಧ್ವನಿ ನೀಡಿಸಿ ಆನಂದ ಪಟ್ಟೆ... ಬದುಕಲ್ಲಿ ನನಗೆ ಸಿಕ್ಕ ಸಣ್ಣ ತೃಪ್ತಿ" ಎಂದು ಬರೆದುಕೊಂಡಿದ್ದಾರೆ.
ನಟ ಜಗ್ಗೇಶ್ ಮೂಲತಃ ತುಮಕೂರಿನ ತುರುವೆಕೆರೆ ತಾಲೂಕಿನ ಜಡೆ ಮಾಯಸಂದ್ರದವರು. ಇವತ್ತಿಗೂ ಅವರ ಸಹೋದರ ರಾಮಚಂದ್ರ ಹುಟ್ಟೂರಿನಲ್ಲೇ ಇದ್ದಾರೆ. ಕೋವಿಡ್ ಸಮಯದಲ್ಲಿ ಸಹೋದರನನ್ನು 4 ತಿಂಗಳ ಕಾಲ ಭೇಟಿಯಾಗಲು ಸಾಧ್ಯವಾಗಿರಲಿಲ್ಲ ಎಂದು ಜಗ್ಗೇಶ್ ಟ್ವೀಟ್ ಮಾಡಿ ನೋವು ತೋಡಿಕೊಂಡಿದ್ದರು.
ಅಂದಹಾಗೆ ಜಗ್ಗೇಶ್ ಸಹೋದರ ರಾಮಚಂದ್ರ ಅವರು ಹೀಗೆ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಂಡಿರುವುದು 'ಲಿಫ್ಟ್ ಕೊಡ್ಲಾ' ಚಿತ್ರದಲ್ಲಿ. 2010ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ಅಶೋಕ್ ಕಶ್ಯಪ್ ನಿರ್ದೇಶನದ ಈ ಚಿತ್ರದಲ್ಲಿ ಜಗ್ಗೇಶ್ ಹಾಗೂ ಕೋಮಲ್ ಇಬ್ಬರೂ ನಟಿಸಿದ್ದರು. ಅದೇ ಚಿತ್ರದಲ್ಲಿ ಹಾಲು ಮಾರುವ ರಾಮಣ್ಣನ ಪಾತ್ರದಲ್ಲಿ ಜಗ್ಗೇಶ್ ಕಿರಿಯ ಸಹೋದರ ರಾಮಚಂದ್ರ ಕೂಡ ಮಿಂಚಿದ್ದರು.
ಜಗ್ಗೇಶ್ ಪೋಸ್ಟ್ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. "ಇದು ಯಾವ ಸಿನಿಮಾ?" ಎಂದು ಒಬ್ಬರು ಕಾಮೆಂಟ್ ಮಾಡಿದ್ದು "ಲಿಫ್ಟ್ ಕೊಡ್ಲಾ" ಎಂದು ರಿಪ್ಲೇ ಮಾಡಿದ್ದಾರೆ. "ನಿಮ್ಮ ಸಹೋದರನನ್ನು ಹೀಗೆ ನೋಡಿಕೊಳ್ಳಿ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 'ರಂಗನಾಯಕ' ಬಳಿಕ ಜಗ್ಗೇಶ್ ಯಾವುದೇ ಚಿತ್ರದಲ್ಲಿ ನಟಿಸಲಿಲ್ಲ.
ರಾಜ್ಯಸಭಾ ಸದಸ್ಯರಾಗಿಯೂ ಜಗ್ಗೇಶ್ ಸೇವೆ ಸಲ್ಲಿಸುತ್ತಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಜೀವನದಲ್ಲಿ ಸಕ್ರಿಯರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಆಕ್ಟೀವ್ ಆಗಿ ಇರುತ್ತಾರೆ. 'ರಂಗನಾಯಕ' ಸಿನಿಮಾ ಸೋತಿದ್ದು ಮಾತ್ರವಲ್ಲ ಬಹಳ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಕ್ಷಮೆ ಕೇಳಿದ್ದ ನವರಸ ನಾಯಕ ಇನ್ನು ಮುಂದೆ ಇಂತಹ ತಪ್ಪು ಆಗುವುದಿಲ್ಲ ಎಂದಿದ್ದರು.


Click it and Unblock the Notifications











