ಚಿತ್ರಮಂದಿರಕ್ಕೆ 100% ಅನುಮತಿ: ಕಲಾಬಂಧುಗಳಲ್ಲೊಂದು ಜಗ್ಗೇಶ್ ವಿನಂತಿ
ಅಕ್ಟೋಬರ್ 1 ರಿಂದ ಕರ್ನಾಟಕದಲ್ಲಿ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲಿದೆ. ಇಷ್ಟು ದಿನ ಶೇಕಡಾ 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈಗ ಅಕ್ಟೋಬರ್ ತಿಂಗಳಿನಿಂದ 100% ಆಸನ ಭರ್ತಿಯೊಂದಿಗೆ ಚಲನಚಿತ್ರ ಪ್ರದರ್ಶನ ಮಾಡಬಹುದು. ಈ ಮೂಲಕ ಸ್ಯಾಂಡಲ್‌ವುಡ್ ಇಂಡಸ್ಟ್ರಿ ಹೊಸ ಹುಮ್ಮಸ್ಸಿನಿಂದ ಮತ್ತೆ ಕಾರ್ಯಾರಂಭ ಶುರು ಮಾಡಿದೆ.
100 ಪರ್ಸೆಂಟ್ ಅವಕಾಶ ಕೊಡಲಿ ಆಮೇಲೆ ಬಿಡುಗಡೆ ಮಾಡ್ತೇವೆ ಎಂದು ಕಾಯ್ತಿದ್ದ ಸ್ಟಾರ್ ನಟರ ಚಿತ್ರಗಳು ಈಗ ದಿನಾಂಕ ಪ್ರಕಟಿಸಿ ಚಿತ್ರಮಂದಿರಗಳನ್ನು ಕಾಯ್ದಿರಿಸಿವೆ. ಸುದೀಪ್ ನಟನೆಯ ಕೋಟಿಗೊಬ್ಬ 3, ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಸಲಗ, ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಚಿತ್ರಗಳು ರಿಲೀಸ್ ದಿನಾಂಕ ಘೋಷಿಸಿದೆ. ಇದರೊಂದಿಗೆ ಅಕ್ಟೋಬರ್ 1 ರಿಂದ ಗಾಂಧಿನಗರದ ಚಿತ್ರಮಂದಿರಗಳ ಬಳಿ ಹೌಸ್‌ಫುಲ್ ಪ್ರದರ್ಶನದ ನಾಮಫಲಕ ಮತ್ತೆ ಕಾಣಸಿಗುತ್ತದೆ.
ಹಲವು ತಿಂಗಳ ಬಳಿಕ ಚಿತ್ರಮಂದಿರಕ್ಕೆ 100% ಅನುಮತಿ ನೀಡಿದ್ದಕ್ಕಾಗಿ ಹಿರಿಯ ನಟ ಜಗ್ಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಡ ಕಲಾಭಿಮಾನಿಗಳು ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಎಂದು ಟ್ವಿಟ್ಟರ್ ಮೂಲಕ ಕೇಳಿಕೊಂಡಿದ್ದಾರೆ.

ಚಿತ್ರಮಂದಿರಕ್ಕೆ ಬನ್ನಿ ಬಂಧುಗಳೇ
''ಆತ್ಮೀಯ ಕನ್ನಡದ ಬಂಧುಗಳೆ ಕೊರೊನಾ ಸರ್ವ ದೇಶ ಜನರ ಸಂಕಷ್ಟಕ್ಕೆ ದೂಡಿತು. ಇಂಥ ಸಂಕಷ್ಟ ಸಮಯದಲ್ಲಿ ಅಲ್ಪಸ್ವಲ್ಪ ಜನರಿಗೆ ಸಂತೋಷ ನೀಡಿದ್ದು ಕಲೆ. ಅದು ಯಾವುದೇ ಭಾಷೆಯದ್ದಾಗಲಿ ಚಿತ್ರಮಂದಿರ ಬಂದ್ ಆದರು ಸಣ್ಣ ಪರದೆಯಲ್ಲಿ ನಿಮ್ಮ ರಂಜಿಸಿತು. ಅಂಥ ಕಲಾರಂಗ ಮತ್ತೆ ಚಿಗುರಿ ನಿಮ್ಮ ಮುಂದೆ ನಿಲ್ಲಬೇಕು ಎಂದರೆ ನೀವು ಹರಸಬೇಕು. ಇಂದು 100% ಚಿತ್ರಮಂದಿರ ತೆರೆದಿದೆ. ನಿಮ್ಮ ನೆಚ್ಚಿನ ನಟನಟಿ ಚಿತ್ರಗಳು ಇದೇ ಅಕ್ಟೋಬರ್ ಇಂದ ತೆರೆಗೆ ಬರುತ್ತಿದೆ. ಕುಟುಂಬ ಸಮೇತ ತಾವು ಚಿತ್ರಮಂದಿರಕ್ಕೆ ಬಂದು ನಿಮ್ಮ ನೆಚ್ಚಿನ ಚಿತ್ರಗಳನ್ನ ಚಿತ್ರಮಂದಿರದಲ್ಲೆ ನೋಡಿ ಆನಂದಿಸಿ..ಈ ಅಕ್ಟೋಬರ್ ಇಂದ ನನ್ನ ಆತ್ಮೀಯ ಕನ್ನಡದ ಕಲಾಬಂಧುಗಳ ಚಿತ್ರ ಬಿಡುಗಡೆ. ನಿಮ್ಮ ಸಂತೋಷ ಚಪ್ಪಾಳೆ ಸದ್ಧಿಗೆ ಕಾಯುತ್ತಿದೆ ಕಲಾರಂಗ ಧನ್ಯವಾದ'' ಎಂದು ನಟ ಜಗ್ಗೇಶ್ ವಿನಂತಿಸಿದ್ದಾರೆ.

ಕೇದಾರಪೀಠದಲ್ಲಿ ನಟ ಜಗ್ಗೇಶ್
ನಟ ಜಗ್ಗೇಶ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಇಬ್ಬರು ಕೇದಾರಪೀಠಕ್ಕೆ ಭೇಟಿ ನೀಡಿ ಶ್ರೀಶ್ರೀ ಭೀಮಾಶಂಕರ ಸ್ವಾಮೀಜಿ ಹಾಗು ಕಣ್ವಕುಪ್ಪೆ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸ್ವತಃ ಜಗ್ಗೇಶ್ ಅವರೇ ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿದ್ದಾರೆ.

ಪುನೀತ್ ಭೇಟಿ ಮಾಡಿದ ಜಗ್ಗೇಶ್
ಕೇದಾರಪೀಠಕ್ಕೆ ಭೇಟಿ ನೀಡುವುದಕ್ಕೂ ಮುಂಚೆ ಸೋಮವಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರನ್ನು ಜಗ್ಗೇಶ್ ಭೇಟಿ ಮಾಡಿದ್ದರು. ಈ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿ, ''ಆತ್ಮೀಯ ಯುವಮಿತ್ರರು ಆಕಸ್ಮಿಕ ಸಿಕ್ಕು ಮನಬಿಚ್ಚಿ ಮಾತಾಡಿ ನಕ್ಕು ಸಹಭೋಜನ ಮಾಡಿ ಪರಸ್ಪರ ಶುಭಹಾರೈಸಿದ ಕ್ಷಣ.. ಮೂರುದಿನದ ಬದುಕಿಗೆ ಒಂದು ದಿನವಾದರು ನಗಬೇಕು ಶ್ರೇಷ್ಠ ಬದುಕಿಗೆ'' ಎಂದು ಪೋಸ್ಟ್ ಹಾಕಿದ್ದರು.

ರಾಘವೇಂದ್ರ ಸ್ಟೋರ್ಸ್
ಅಂದ್ಹಾಗೆ, ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಲಿರುವ 'ರಾಘವೇಂದ್ರ ಸ್ಟೋರ್ಸ್' ಚಿತ್ರದಲ್ಲಿ ಜಗ್ಗೇಶ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಹೊಂಬಾಳೆ ಫಿಲಂಸ್ ಬಂಡವಾಳ ಹಾಕಲಿದ್ದು, ಅಧಿಕೃತವಾಗಿ ಘೋಷಣೆಯಾಗಿದೆ. ಶೀಘ್ರದಲ್ಲಿ ಚಿತ್ರೀಕರಣ ಸಹ ಆರಂಭವಾಗಲಿದೆ. ಈ ಚಿತ್ರ ಹೊರತುಪಡಿಸಿ ಮಠ ಗುರುಪ್ರಸಾದ್ ಜೊತೆ 'ರಂಗನಾಯಕ' ಚಿತ್ರ ಮಾಡ್ತಿದ್ದಾರೆ. ನೀರ್‌ದೋಸೆ ಖ್ಯಾತಿಯ ವಿಜಯ ಪ್ರಸಾದ್ ಜೊತೆ 'ತೋತಾಪುರಿ' ಸಿನಿಮಾ ಮುಗಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.


Click it and Unblock the Notifications











