ಯಾವ ಚಿಕಿತ್ಸೆ ನೀಡುತ್ತಾರೆ ತಿಳಿಯುತ್ತಿಲ್ಲ, ಪಾರದರ್ಶಕ ವ್ಯವಸ್ಥೆ ಆಗಲಿ; ನಟ ಜಗ್ಗೇಶ್
ಭಾರತ ಕೋವಿಡ್-19ನಿಂದ ತತ್ತರಿಸಿ ಹೋಗಿದೆ. ಸೋಂಕಿತರು ಆಸ್ಪತ್ರೆ, ಬೆಡ್, ಆಕ್ಸಿಜನ್ ಸಿಗದೆ ಒದ್ದಾಡುತ್ತಿದ್ದಾರೆ. ಸಾವಿರಾರು ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಆಸ್ಪತ್ರೆ ಸಿಕ್ಕಿದರೂ ಕೇವಲ 2 ಅಥವಾ 3 ದಿನಗಳಲ್ಲೇ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ವೈದ್ಯರು ಯಾವ ಚಿಕಿತ್ಸೆ ನೀಡುತ್ತಿದ್ದಾರೆ, ಹೇಗೆ ನೋಡಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಹೊರಗಿರುವ ಸಂಬಂಧಿಕರಿಗೆ ತಿಳಿಯುತ್ತಿಲ್ಲ. ಒಂದು ವೇಳೆ ಸಾವನ್ನಪ್ಪಿದರೆ ಮುಖ ಕೂಡ ನೋಡಲು ಸಂಬಂಧಿಕರಿಗೆ ಬಿಡುತ್ತಿಲ್ಲ. ಇಂಥ ಕೆಟ್ಟ ಪರಿಸ್ಥಿತಿಯಲ್ಲಿದೆ ದೇಶ. ಈ ಬಗ್ಗೆ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿ ಪಾರದರ್ಶಕ ವ್ಯವಸ್ಥೆ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಜಗ್ಗೇಶ್ ದೀರ್ಘವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 'ಮಾನ್ಯ ಮುಖ್ಯ ಮಂತ್ರಿಗಳ ಗಮನಕ್ಕೆ: ಸಾರ್, ಕೊರೊನಾ ರೋಗಿ ಅಡ್ಮಿಟ್ ಆದ 2/3ದಿನಕ್ಕೆ ಸಾವು ಸಂಭವಿಸುತ್ತಿದೆ (ಸ್ವಂತ ಅನುಭವ). ಯಾವ ಚಿಕಿತ್ಸೆ ನೀಡುತ್ತಾರೆ ಬಂಧುಗಳಿಗೆ ಹೊರಗೆ ತಿಳಿಯದು. ಸಾವಾಗಿದೆ ಎಂದು ತಿಳಿಸುತ್ತಾರೆ ಮುಖಸಹಿತ ನೋಡಲಾಗದು. ಬೆರಳೆಣಿಸುವ ಕೆಲ ಸಿಬ್ಬಂದಿ ಹೊರತುಪಡಿಸಿ ತಜ್ಞರು ವೈಯುಕ್ತಿಕವಾಗಿ ಸಿಗರು ವಿಷಯ ತಿಳಿಯಲು'

'ಪ್ರತಿ ರೋಗಿಯ ಮನೆಯವರಿಗೆ ದೂರದಿಂದ ನೋಡಲು ಅವಕಾಶ (safety measures)ನಲ್ಲಿ ಅವಕಾಶ ನೀಡಬೇಕು.ಇಲ್ಲದಿದ್ದರೆ ಒಳಗೆ ನಡೆಯುವ ವಿಷಯ ಹೊರಗೆ ಅರಿವಾಗುತ್ತಿಲ್ಲಾ. ಯಾವುದು ಇಲ್ಲದೆ ಅಡ್ಮಿಟ್ ಮಾಡಿಕೊಂಡು ನಂತರ ಯಾವ ವಿಷಯ ಹೊರಗೆ ತಿಳಿಸದೆ ರೋಗಿಯ ಸಾವಿನ ಜೊತೆ ಮನೆಯವರು ಸಾಯುವಂತೆ tension. ದಯಮಾಡಿ ರೋಗಿ monitor ಡಾಕ್ಟರ್ ಹಾಗು ಬಂಧುಗಳಿಗೆ ತಿಳಿಯುವಂತೆ ಪಾರದರ್ಶಕ ವ್ಯೆವಸ್ಥೆ ಆಗಲಿ' ಎಂದು ಟ್ವೀಟ್ ಮಾಡಿ ಸಿಎಂ ಯಡಿಯೂರಪ್ಪ ಅವರಿಗೆ ಟ್ಯಾಗ್ ಮಾಡಿದ್ದಾರೆ.


Click it and Unblock the Notifications











