ಅಣ್ಣಾವ್ರು ಇರುವುದನ್ನು ಗಮನಿಸಿದೇ ಅಂದು ಮಿಮಿಕ್ರಿ ಮಾಡಿದ್ದ ನಟ ಜಗ್ಗೇಶ್ ; ಮುಂದೇನಾಯ್ತು ?
ಡಾ. ರಾಜಕುಮಾರ್ ಅವರು ಶ್ರಮ ಸಂಕಟಗಳಿಲ್ಲದೆ ಎತ್ತರೆತ್ತರಕ್ಕೆ ಬೆಳೆದವರಲ್ಲ. ಸಾಮಾಜಿಕ ಅವಮಾನಗಳನ್ನು ಮೌನದಲ್ಲೇ ಅನುಭವಿಸಿ, ಅರಗಿಸಿ, ಅರಳುತ್ತ ಬಂದವರು. ಅವರು ಕೆರಳಿದ್ದು ಕಡಿಮೆ, ಅರಳಿದ್ದು ಅಧಿಕ.
ಇಂಥಾ ಡಾ.ರಾಜ್‌ಕುಮಾರ್ ನಮ್ಮನ್ನಲಿ 20 ವರ್ಷಗಳಾಗಿವೆ. ಆದರೆ ಅವರ ನೆನಪು ಇವತ್ತು ಕೂಡ ಹಲವರ ಮನದಲ್ಲಿ ಹಸಿರಾಗಿವೆ.ಇದಕ್ಕೆ ಉದಾಹರಣೆಯೇ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸುವ ಡಾ.ರಾಜ್ ಕುಮಾರ್ ಅವರ ಕುರಿತ ಬರಹಗಳು ಮತ್ತು ಚರ್ಚೆಗಳು.

ಕೇವಲ ಜನಸಾಮಾನ್ಯರು ಮಾತ್ರವಲ್ಲ ಕನ್ನಡ ಚಿತ್ರರಂಗದ ಹಲವರು ಇವತ್ತು ಕೂಡ ಅಣ್ಣಾವ್ರನ್ನು ಮಿಸ್ ಮಾಡಿಕೊಳ್ತಾರೆ. ಅವರಿದ್ದಿದ್ದರೆ..? ಎಂದು ಉದ್ಘಾರ ತೆಗೆಯುತ್ತಾರೆ. ಅವರ ಜೊತೆ ಕಳೆದ ಅತ್ಯಮೂಲ್ಯ ಕ್ಷಣಗಳನ್ನು ನೆನಪು ಮಾಡಿಕೊಳ್ತಾರೆ. ಆ ಪೈಕಿ ನವರಸನಾಯಕ ಜಗ್ಗೇಶ್ ಕೂಡ ಒಬ್ಬರು.
ಹೌದು, ಜಗ್ಗೇಶ್ ಇಂದು (ಏಪ್ರಿಲ್ 12) ಅಣ್ಣಾವ್ರ ಪುಣ್ಯಸ್ಮರಣೆಯಂದು ಅವರ ಜೊತೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಡಾ.ರಾಜ್‌ಕುಮಾರ್ ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅಣ್ಣಾವ್ರ ಬಗ್ಗೆ ಜಗ್ಗೇಶ್ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.
ಜಗ್ಗೇಶ್ ಅವರ ಬರಹ
ಇಂದು ನಮ್ಮ ದೇವರು ದೇವರಾಗಿ ದೇವರ ಜೊತೆಗೆ ದೇವರ ಪೂಜೆಗೆ ಮೋಡದ ಮರೆಯಲ್ಲಿ ಮರೆಯಾದ ದಿನ. ಹಾಗೇ ದೇವರು ವಾಸವಿದ್ದ ಮನೆಯ ರಸ್ತೆಯಲ್ಲಿ ಇಂದು ಹೋಗಿ ಬಂದೆ. ಅವರು ಇದ್ದಾಗ 6.15 ಸಂಜೆ ನಡಿಗೆಗೆ ಹೊರಡುತ್ತಿದ್ದರು. ಸಾಮಾನ್ಯ ಬಿಳಿ ಶರ್ಟು ಪೈಜಾಮ, ತಲೆಗೆ ಬಟ್ಟೆ ಸುತ್ತಿ ಯಾರೂ ಇವರನ್ನು ಪತ್ತೆ ಮಾಡದಂತೆ ಇರುತ್ತಿದ್ದರು. ಅವರ ಹಿಂದೆ ಸಹಾಯಕ ಚನ್ನ ಹನುಮಂತನ ರೀತಿ ಹಿಂಬಾಲಿಸುತ್ತಿದ್ದ.
ಒಂದು ಸಂಜೆ ಡಾ| ರಮಣರಾವ್ ಮನೆಯ ರಸ್ತೆಯಲ್ಲಿ ಸಿಗರೇಟು ಸೇದುತ್ತಾ ನಿಂತಿದ್ದೆ. ಆಗ ಚನ್ನ ಕಂಡ. ಅಣ್ಣನ ಧ್ವನಿಯಲ್ಲಿ 'ಏನು ಚನ್ನಪ್ಪನವರೆ ಒಬ್ಬರೆ.. ಎಲ್ಲಿ ನಮ್ಮ ದೇವರು..?' ಎಂದೆ. ಆಗ ಆತ ಕಣ್ಣು ಮಿಟುಕಿಸಿ 'ಸುಮ್ಮನಿರು' ಎಂದ. ಆಗ ನಾನು 'ಯಾಕೆ..? ಯಾಕೆ..? ಏನಾಯ್ತು..?' ಎಂದಾಗ, ನಿಜವಾದ ಅಣ್ಣನ ಧ್ವನಿ 'ಇಲ್ಲೆ ಇಲ್ಲೆ.. ನಾನಿಲ್ಲೆ' ಎಂದರು. ನನ್ನ ಸಿಗರೇಟು ಎಲ್ಲೋಯಿತೋ ತಿಳಿಯದು!! ನಾನು ಸ್ತಭ್ಧವಾಗಿ 'ಅಣ್ಣ' ಎಂದು ತಲೆ ಕೆರೆಯುತ್ತಾ ನಿಂತೆ. 'ಮಿಮಿಕ್ರಿ ಚೆನ್ನಾಗಿತ್ತು' ಎಂದು ನಗುತ್ತಾ ಮುಂದೆ ಸಾಗಿದರು.

ನನಗೆ ಇಷ್ಟವಾದಾಗಲೆಲ್ಲಾ ಅದೇ ಮನೆಗೆ ಹೋಗಿ ಮಾತಾಡಿಸಿ ಸಮಯ ಕಳೆದು ಬರುತ್ತಿದ್ದೆ. ಇಂದು ಅದೇ ರಸ್ತೆ, ಅದೇ ಜಾಗ, ಮನೆಬದಲಾಗಿದೆ, ಅವರು ಮಾತ್ರ ಇಲ್ಲ!! ನನಗನ್ನಿಸಿದ್ದು ಎಂಥ ವಿಚಿತ್ರ ಈ ಜಗತ್ತು. ಯಾರೇ ಆಗಲಿ, ಒಂದು ದಿನ ಇದ್ದವರು ಮತ್ತೊಂದು ದಿನ ನೆನಪು ಮಾತ್ರ. ಹಾಗಾಗಿನಾವು ಬಿಟ್ಟು ಹೋಗುವ ನೆನಪು ಸುಮಧುರ ಸುಂದರ ಅನುಕರಣೀಯವಾಗಿ ಇರಬೇಕು
"ಬೊಂಬಾಟ್ ಹುಡುಗ" ಚಿತ್ರದ 'ಬೊಂಬಾಟು ಹುಡುಗ ನಾನು' ಹಾಡಿನ ಊಟದ ವಿರಾಮ ಸಮಯದಲ್ಲಿ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಅವರ ಕಾರ್ಯಕ್ರಮ ಇತ್ತು. ಆಗ ಅವರಿಗೆ ಹಾರ ಹಾಕಿದ ಕ್ಷಣದ ಚಿತ್ರ ಇದು. ನೆನಪು ಮಧುರ..!
ಹೀಗೆ ಜಗ್ಗೇಶ್ ತಮ್ಮ ನೆನಪುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಢಿದ್ದು, ಎಲ್ಲಾ ಇದ್ದೂ ಏನೂ ಇಲ್ಲದ ಹಾಗೆ ಭದುಕಿದ ಸಾಮಾನ್ಯ ನಿಷ್ಕಲ್ಮಶ ಮನಸಿನ ದೇವರು ನಮ್ ಅಣ್ಣ,ನೆನೆಯಬೇಕು ನಯವಾಗಿ ಸಂಸ್ಕಾರ ವುಳ್ಳವರ ಮಾತುಗಳ, ಜಗ್ಗೇಶ್ ಅವ್ರಲ್ಲಿ ನಾ ಕಂಡಂತೆ ಎಲ್ಲಕ್ಕಿಂತ ಅತ್ಯಮೂಲ್ಯವಾದ ಒಂದು ದೊಡ್ಡ ಗುಣ ಇದೆ ಅದೇನೆಂದರೆ ತನ್ನ ಜೀವಮಾನವಿಡೀ ಕಷ್ಟ ಸುಖದಲ್ಲಿ ಆದವರನ್ನು ಆತ್ಮಪೂರ್ವಕವಾಗಿ ನೆನೆಸಿಕೊಳ್ಳೋ ದೊಡ್ಡತನ, ನಾನು ಚಿಕ್ಕ ವಯಸ್ಸಿದ್ದಾಗ ಚಾಮರಾಜನಗರದಲ್ಲಿ ಎರಡು ಬಾರಿ ಅವರನ್ನ ಕಂಡಿದ್ದೆ, ಹೀಗೆ ಹಲವರು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











