'ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ' ಎಂದ ನಟ ಜಗ್ಗೇಶ್!
ಜಗ್ಗೇಶ್ ಹುಟ್ಟುಹಬ್ಬದ ಪ್ರಯುಕ್ತ ಜಗ್ಗೇಶ್ ನಟಿಸಲಿರುವ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಹೊಸ ಪೋಸ್ಟರ್ ಸಖತ್ ಮಜವಾಗಿರುವ ಜೊತೆಗೆ ಕುತೂಹಲವನ್ನೂ ಕೆರಳಿಸುತ್ತಿದೆ.
Recommended Video
'ರಂಗನಾಯಕ' ಸಿನಿಮಾದ ಪೋಸ್ಟರ್ ಇಂದು ಬಿಡುಗಡೆ ಆಗಿದ್ದು, ಪೋಸ್ಟರ್‌ನಲ್ಲಿ ರಾಜಸಿಂಹಾಸನದ ಮೇಲೆ ಬೆಪ್ಪಾಗಿ ಕೂತಿರುವ ಜಗ್ಗೇಶ್ ಅವರ ಚಿತ್ರವಿದೆ. ಪೋಸ್ಟರ್‌ನಲ್ಲಿ 'ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ' ಎಂದು ಬರೆಯಲಾಗಿದೆ. ಜಗ್ಗೇಶ್‌ಗೆ ಸಂಬಂಧಿಸಿದಂತೆ ಇತ್ತೀಚಿಗೆ ನಡೆದ ಕೆಲವು ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸಾಲನ್ನು ಓದಿಕೊಳ್ಳಬೇಕಾ, ಬೇಡವಾ ಎಂಬುದು ಪ್ರೇಕ್ಷಕರಿಗೆ ಬಿಟ್ಟಿದ್ದು.
'ರಂಗನಾಯಕ' ಸಿನಿಮಾವನ್ನು ನಿರ್ದೇಶಕ ಗುರುಪ್ರಸಾದ್ ನಿರ್ದೇಶನ ಮಾಡಲಿದ್ದಾರೆ. ಜಗ್ಗೇಶ್-ಗುರುಪ್ರಸಾದ್ ಜೋಡಿಯ ಮೂರನೇ ಸಿನಿಮಾ ಇದಾಗಲಿದೆ. ಈ ಮೊದಲು ಈ ಇಬ್ಬರೂ ಜೊತೆಗೂಡಿ 'ಮಠ' ಹಾಗೂ 'ಎದ್ದೇಳು ಮಂಜುನಾಥ' ಮಾಡಿದ್ದರು ಎರಡೂ ಸಿನಿಮಾ ಸೂಪರ್ ಹಿಟ್ ಆಗಿತ್ತು.

ನಡುವೊಮ್ಮೆ ಗುರುಪ್ರಸಾದ್ ಹಾಗೂ ಜಗ್ಗೇಶ್ ನಡುವೆ ಸಣ್ಣ ವೈಮನಸ್ಯ ಏರ್ಪಟ್ಟಿತ್ತು. ಆದರೆ ಎಲ್ಲವನ್ನೂ ಬದಿಗಿಟ್ಟು ಪ್ರೇಕ್ಷಕರನ್ನು ರಂಜಿಸಲು ಈ ಜೋಡಿ ಮತ್ತೆ ಒಂದಾಗುತ್ತಿದೆ.
ಈ ನಡುವೆ ಜಗ್ಗೇಶ್ ನಟನೆಯ 'ತೋತಾಪುರಿ' ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಮುಗಿದಿದೆ. ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಬಾಕಿ ಇದೆ.
ಜಗ್ಗೇಶ್ ಅವರಿಗೆ ಇಂದು ನಟ ದರ್ಶನ್, ಪುನೀತ್ ರಾಜ್‌ಕುಮಾರ್, ನಿರ್ಮಾಪಕ ವಿಜಯ್ ಕಿರಗಂದೂರು, ನಟ ರವಿಚಂದ್ರನ್ ಸೇರಿ ಹಲವಾರು ಮಂದಿ ಸಿನಿಪ್ರಮುಖರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಜಗ್ಗೇಶ್ ಸಹ ಎಲ್ಲರಿಗೂ ಪ್ರೀತಿಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದೇ ದಿನ ನಟ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬವೂ ಹೌದು. ಜಗ್ಗೇಶ್ ಅವರು ಪುನೀತ್ ರಾಜ್‌ಕುಮಾರ್ ಅವರಿಗೂ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.


Click it and Unblock the Notifications











