ಅಪ್ಪನ ವಯಸ್ಸಿನ ಕಾರು ಕಂಡು ಅಪ್ಪನ ಕಂಡಷ್ಟೆ ಸಂತೋಷವಾಯಿತು: ಜಗ್ಗೇಶ್
ಸ್ಯಾಂಡಲ್ ವುಡ್ ಹಿರಿಯ ನಟ ಜಗ್ಗೇಶ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ಸಿನಿಮಾ ಕೆಲಸಗಳ ನಡುವೆ ಎಷ್ಟೇ ಬ್ಯುಸಿ ಇದ್ದರೂ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಆಗಾಗ ಏನಾದರೊಂದು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಯಾವುದೇ ವಿಚಾರದ ಬಗ್ಗೆಯೂ ಜಗ್ಗೇಶ್ ಮೊದಲು ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಇದೀಗ ಜಗ್ಗೇಶ್ ವಿಶೇಷ ಕಾರಿನ ಬಗ್ಗೆ ಬರೆದುಕೊಂಡಿದ್ದಾರೆ.
ಅಪರೂಪದ ಕಾರಿನ ಜೊತೆ ಪೋಸ್ ನೀಡಿರುವ ಫೋಟೋ ಶೇರ್ ಮಾಡಿರುವ ಜಗ್ಗೇಶ್ ಆ ಕಾರನ್ನು ನೋಡಿದ ಕೂಡಲೇ ಅವರಿಗೆ ತಮ್ಮ ತಂದೆಯ ನೆನಪಾಗಿದೆ ಎಂದಿದ್ದಾರೆ. ಈ ಬಗ್ಗೆ ಟ್ವಿಟರ್ ಮೂಲಕ ಅಭಿಮಾನಿಗಳಿಗೂ ತಿಳಿಸಿದ್ದಾರೆ. ಜಗ್ಗೇಶ್ ಪೋಸ್ ನೀಡಿರುವ ಅಪರೂಪದ ಕಾರು 'ಆಸ್ಟಿನ್ ಆಫ್ ಇಂಗ್ಲೆಂಡ್' ಕಾರು. ಹಳೇ ಕಾಲದ ಕಾರುಗಳು ಯಾವಾಗಲು ಗಮನಸೆಳೆಯುತ್ತಿರುತ್ತದೆ. ಅವುಗಳ ವಿನ್ಯಾಸವಂತೂ ಎಲ್ಲರಿಗೂ ಇಷ್ಟವಾಗುತ್ತದೆ. ರೆಟ್ರೋ ಕಾಲದ ಕಾರುಗಳು ನೋಡಲು ಸಿಗುವುದು ಕೂಡ ಅಪರೂಪ. ಪಿತೃಪಕ್ಷ ಪೂಜೆಗೆಂದು ಹೋಗುವಾಗ ಜಗ್ಗೇಶ್ ಕಣ್ಣಿಗೆ ಆಸ್ಟಿನ್ ಆಫ್ ಇಂಗ್ಲೆಂಡ್ ಕಾರು ಕಾಣಿಸಿದೆ. ಅದಕ್ಕೆ ಅವರು ಫುಲ್ ಖುಷಿ ಆಗಿದ್ದಾರೆ.
ಅಪ್ಪನ ವಯಸ್ಸಿನ ಕಾರನ್ನು ನೋಡಿ ಅಪ್ಪನನ್ನು ಕಂಡಷ್ಟೆ ಸಂತಸವಾಯಿತು ಎಂದು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "1930 Austin England Car..ಇದು ಅಪ್ಪ ಹುಟ್ಟಿದ ವರ್ಷದ ಕಾರು. ಇಂದು ನಮ್ಮ ಅಪ್ಪನಿಗೆ ಪಿತೃಪಕ್ಷ ಪೂಜೆ ಮಾಡಲು ಮಾಯಸಂದ್ರಕ್ಕೆ ತೆರಳುವಾಗ ಸಿಕ್ಕಿತು. ಅಪ್ಪನ ವಯಸ್ಸಿನ ಕಾರು ಕಂಡು ಅಪ್ಪನ ಕಂಡಷ್ಟೆ ಸಂತೋಷವಾಯಿತು. Appa I love you" ಎಂದು ಬರೆದುಕೊಂಡಿದ್ದಾರೆ.

ಇನ್ನು ಜಗ್ಗೇಶ್ ಪುತ್ರನ ಸಿನಿಮಾ ತೆರೆಗೆ ಬಂದ ಖುಷಿಯಲ್ಲಿದ್ದಾರೆ. ಜಗ್ಗೇಶ್ ಪುತ್ರ ಗುರುರಾಜ್ ನಟಿಸಿರುವ 'ಕಾಗೆ ಮೊಟ್ಟೆ' ಸಿನಿಮಾ ಈ ವಾರ ಬಿಡುಗಡೆ ಆಗಿದೆ. ಅಕ್ಟೋಬರ್ 1ರಂದು ತೆರೆಕಂಡಿರುವ ಈ ಚಿತ್ರಕ್ಕೆ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿಗೆ ಜಗ್ಗೇಶ್ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಮಗನ ಸಿನಿಮಾಗೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆಯುತ್ತಿರುವುದು ಕಂಡ ಜಗ್ಗೇಶ್ ಫುಲ್ ಖುಷ್ ಆಗಿದ್ದಾರೆ.
''ಈ ಚಪ್ಪಾಳೆಯ ಹರ್ಷೋಧ್ಘಾರ ನನ್ನ ಕುಟುಂಬದ ಮೇಲೆ ಕನ್ನಡಿಗರ ಪ್ರೀತಿ ನೋಡಿ ಗುರುರಾಜನ ಅಪ್ಪನಾಗಿ ಕಣ್ಣು ಒದ್ದೆಯಾಯಿತು. 'ಭಂಡ ನನ್ನ ಗಂಡ' ದಿನಗಳಲ್ಲಿ ಕಂಡ ಆನಂದ ನೆನಪಾಯಿತು. ಕೋಟಿ ವಂದನೆಗಳು ಆತ್ಮೀಯ ಹೃದಯಗಳಿಗೆ'' ಎಂದು ಜಗ್ಗೇಶ್ ಕೃತಜ್ಞತೆ ವ್ಯಕ್ತಪಡಿಸಿದರು.
ಇನ್ನು ಮುಂದಿನ ದಿನಗಳಲ್ಲಿ ತೆರೆಕಾಣಲಿರುವ ಚಿತ್ರಗಳಿಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದರು. ''ಕೊರೊನಾ ಸಂಕಷ್ಟದಿಂದ ಸಿನಿಮಾರಂಗ ಹೊರಬಂದು ಮತ್ತೆ ಎದ್ದುನಿಲ್ಲಲಿ. #ಕೋಟಿಗೊಬ್ಬ #ಸಲಗ #ಶಿವಣ್ಣ ಮುಂದಿನ ಚಿತ್ರಕ್ಕೆ best of luck'' ಎಂದು ಟ್ವಿಟ್ಟರ್ ಮೂಲಕ ಶುಭಕೋರಿದರು.
ಜಗ್ಗೇಶ್ ಸಿನಿಮಾಗಳು
2019ರಲ್ಲಿ ತೆರೆಕಂಡ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರದ ನಂತರ ಜಗ್ಗೇಶ್ ನಟನೆಯ ಯಾವ ಚಿತ್ರವೂ ಇನ್ನು ಬಿಡುಗಡೆಯಾಗಿಲ್ಲ. ನೀರ್ ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಜೊತೆ 'ತೋತಾಪುರಿ' ಸಿನಿಮಾ ಮಾಡಿದರು. ಈ ಚಿತ್ರ ಸಂಪೂರ್ಣವಾಗಿ ಮುಗಿದಿದ್ದು, ತೆರೆಗೆ ಬರಲು ಸಜ್ಜಾಗಿದೆ. ವರದಿಗಳ ಪ್ರಕಾರ ಈ 'ತೋತಾಪುರಿ 2' ಸಿನಿಮಾವೂ ತಯಾರಾಗ್ತಿದೆ. 'ಮಠ' ಗುರುಪ್ರಸಾದ್ ನಿರ್ದೇಶನದ 'ರಂಗನಾಯಕ' ಚಿತ್ರದಲ್ಲಿಯೂ ಜಗ್ಗೇಶ್ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ. ವಿಖ್ಯಾತ್ ಈ ಚಿತ್ರ ನಿರ್ಮಿಸುತ್ತಿದ್ದು, ಚಿತ್ರೀಕರಣ ಹಂತದಲ್ಲಿದೆ.


Click it and Unblock the Notifications











