For Quick Alerts
  ALLOW NOTIFICATIONS  
  For Daily Alerts

  ತನ್ನ ಮನೆಯ 34 ವರ್ಷಗಳ ಹಳೆಯ ಗಣಪನ ಮಹತ್ವ ಬಿಚ್ಚಿಟ್ಟ ನಟ ಜಗ್ಗೇಶ್

  By ಫಿಲ್ಮಿಬೀಟ್ ಡೆಸ್ಕ್
  |

  ದೇಶದಾದ್ಯಂತ ಇಂದು(ಸೆಪ್ಟಂಬರ್ 10) ಗಣೇಶ ಚತುರ್ಥಿ ಹಬ್ಬವನ್ನು ಅದ್ದೂರಿಯಾಗಿ, ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಕೊರೊನಾ ಹಾವಳಿಯಿಂದಾಗಿ ಗಣೇಶೋತ್ಸವದ ಸಂಭ್ರಮ, ಸಡಗರಕ್ಕೆ ಕೊಂಚ ಹಿನ್ನಡೆ ಆಗಿರಬಹುದು. ಆದರೆ ಜನರ ಉತ್ಸಾಹ ಕಮ್ಮಿ ಆಗಿಲ್ಲ. ಗಣೇಶನನ್ನು ಮನೆಗೆ ಕರೆತಂದು ಪೂಜೆ ಮಾಡಿ ಸಂಭ್ರಮಿಸುತ್ತಿದ್ದಾರೆ.

  ಸೆಲೆಬ್ರಿಟಿಗಳ ಮನೆಯಲ್ಲೂ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ಸ್ಯಾಂಡಲ್ ವುಡ್ ಮಂದಿಯ ಮನೆಯಲ್ಲಿ ಗಣೇಶನ ಆರಾಧನೆ ಜೋರಾಗಿದೆ. ಸೆಲೆಬ್ರಿಟಿಗಳು ಹೇಗೆಲ್ಲ ಹಬ್ಬ ಆಚರಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿರುತ್ತೆ. ತಮ್ಮ ಮನೆಯ ಗಣೇಶನ ಉತ್ಸವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೂ ಗಣೇಶನ ದರ್ಶನ ಮಾಡಿಸುತ್ತಿದ್ದಾರೆ. ಅಂದಹಾಗೆ ಸ್ಯಾಂಡಲ್ ವುಡ್ ಹಿರಿಯ ನಟ ಜಗ್ಗೇಶ್ ಮನೆಯಲ್ಲೂ ಹಬ್ಬಗಳನ್ನು ಜೋರಾಗಿ ಆಚರಣೆ ಮಾಡುತ್ತಾರೆ. ಅದರಂತೆ ಗಣೇಶ ಹಬ್ಬದ ಸಂಭ್ರಮ ಕೂಡ ಅದ್ದೂರಿಯಾಗಿದೆ.

  ಜಗ್ಗೇಶ್ ಮನೆಯಲ್ಲಿರುವ ಗಣೇಶ ತುಂಬಾ ಹಳೆಯದು. ಪ್ರತಿವರ್ಷ ಜಗ್ಗೇಶ್ ಅದೇ ಗಣೇಶನನ್ನು ಕೂರಿಸಿ ಪೂಜೆ ಮಾಡುತ್ತಾರೆ. ಆದರೆ ಆ ಗಣೇಶನನ್ನು ವಿಸರ್ಜನೆ ಮಾಡುವುದಿಲ್ಲವಂತೆ. ಜಗ್ಗೇಶ್ ಮನೆಯಲ್ಲಿರುವ ಹಳೆಯ ಗಣೇಶನ ಮಹತ್ವನನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 34 ವರ್ಷಗಳ ಹಳೆಯ ಗಣೇಶನ ಬಗ್ಗೆ ಜಗ್ಗೇಶ್ ದೀರ್ಘವಾಗಿ ಬರೆದುಕೊಂಡಿದ್ದಾರೆ. ತಾವು ಕಷ್ಟದಲ್ಲಿದ್ದ ಸಮಯದಲ್ಲಿ ಕೊಂಡುಕೊಂಡ ಗಣೇಶನನ್ನು ಇಂದಿಗೂ ಆರಾಧನೆ ಮಾಡುವ ಬಗ್ಗೆ ಜಗ್ಗೇಶ್ ಹೇಳಿದ್ದು ಹೀಗೆ.

  "ಈ ಗಣಪನಿಗೆ 34 ವರ್ಷ. 1987 ರಲ್ಲಿ ಬಿಡಿಗಾಸಿಲ್ಲದ ದಿನಗಳು. ರವಿಚಂದ್ರನ್ ರವರ ರಣಧೀರ ಚಿತ್ರೀಕರಣ ಸಮಯ. ಅವರ ಸಂಸ್ಥೆಯಲ್ಲಿ 500ರೂ. ಸಂಬಳ ಪಡೆದು ನಾನು ಪರಿಮಳ ಮಲ್ಲೇಶ್ವರ 10ನೆ ಕ್ರಾಸ್ ಜೀರಿಗೆ ವ್ಯಾಯಾಮ ಶಾಲೆ ಬಳಿ 20ರೂ ಈ ಗಣಪನ ಕೊಂಡು ಮನೆಯಲ್ಲಿ ಇಟ್ಟು ಚಿತ್ರಿಕರಣಕ್ಕೆ 8ನೇ ಮೈಲಿ ಸ್ಟೋನ್ ಮೆಡೋ ಮನೆಗೆ ಓಡಿದೆ" ಎಂದು ಹೇಳಿದ್ದಾರೆ.

  "ನನ್ನ ಗ್ರಹಚಾರಕ್ಕೆ ಅಂದು ಚಿತ್ರಿಕರಣ ರಾತ್ರಿ 2ಘಂಟೆಗೆ ಮುಗಿಯಿತು. ಪಾಪ ಪರಿಮಳ ನನಗಾಗಿ ನಿದ್ರೆ ಮಾಡದೆ ಕಾಯುತ್ತಿದ್ದಳು. ಆಗ ಮನೆಗೆ ಬಂದು ಸ್ನಾನ ಮಾಡಿ ಗಣಪತಿ ವ್ರತ ಶುರುಮಾಡಿ ಬೆಳಗಿನ ಜಾವ 5ಕ್ಕೆ ಮುಗಿಸಿ ಗಣಪನಿಗೆ ಪ್ರಾರ್ಥಿಸಿದೆ. ಗಣಪ ಎಲ್ಲರೂ ಪೂಜೆ ನಂತರ ನಿನ್ನ ವಿಸರ್ಜನೆ ಮಾಡಿ ಬಿಡುತ್ತಾರೆ ನಾನು ಮಾತ್ರ ನಿನ್ನ ನನ್ನ ಕೊನೆ ಉಸಿರಿನವರೆಗೂ ಇಟ್ಟುಕೊಳ್ಳುವೆ ಎಂದು ಸಂಕಲ್ಪ ಮಾಡಿದೆ" ಎಂದು ಅಂದು ಮಾಡಿದ ಸಂಕಲ್ಪದ ಬಗ್ಗೆ ಬಹಿರಂಗ ಪಡಿಸಿದ್ದಾರೆ.

  "ಅದರಂತೆ ಇಂದಿಗೂ ಈ ಗಣಪನೆ ನನ್ನ ಆತ್ಮೀಯ ಬಂಧು. ಇಂದು ಇವನಿಗೆ ಪೂಜೆ ಮಾಡುವಾಗ ನನ್ನ ಬೆಳವಣಿಗೆ ನೆನೆದು ಆಶ್ಚರ್ಯ ಅನುಭವ ಆಯಿತು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಮಾತು ಶ್ರದ್ಧಾವಾನ್ ಲಭತೆ ಜ್ಞಾನಂ. ಶ್ರದ್ಧೆ ಇದ್ದ ಜಾಗದಲ್ಲಿ ಸರ್ವ ಜ್ಞಾನ ನೀಡುವೆ ಎಂದು ಧನ್ಯೋಸ್ಮಿ. ಈ ಗಣಪನಿಗೆ ನನ್ನ ಹಿರಿಮಗ ಗುರುರಾಜನಿಗೆ ಒಂದೆ ವಯಸ್ಸು 34ವರ್ಷಗಳು. ನಂಬಿಕೆಗೆ ಕೆಡುಕಿಲ್ಲಾ ಗೆದ್ದೆ ಗೆಲ್ಲುವ ಅದಕ್ಕೆ 4ಬಾರಿ ತೀರ್ಪು ಎಂದರು ತಮಿಳು ಕವಿ ಭಾರತೀಯಾರ್. ಸರ್ವರಿಗು ಗಣಪನ ಹಬ್ಬದ ಶುಭಾಶಯ" ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

  ಜಗ್ಗೇಶ್ ಅವರಿಗೆ ಅನೇಕರು ಕಾಮೆಂಟ್ ಮಾಡಿ 34 ವರ್ಷಗಳಾದರು ಏನು ಆಗಿಲ್ಲವಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮಣ್ಣಿನ ಗಣಪತಿ ಇಷ್ಟು ವರ್ಷಗಳಾದರೂ ಏನು ಆಗಿಲ್ಲವಾ ಎಂದು ಪ್ರಶ್ನೆ ಮಾಡಿದ ನೆಟ್ಟಿಗಕರಿಗೆ ಜಗ್ಗೇಶ್, "ತುಂಬಾ ಎಚ್ಚರದಿಂದ ಕಾಪಾಡಿರುವೆ" ಎಂದು ಹೇಳಿದ್ದಾರೆ.

  English summary
  Sandalwood Actor Jaggesh shares interesting information about his house 34 years old ganesha Idol.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X