ಜಗ್ಗೇಶ್ ಅನ್ನು ಭಾವುಕಗೊಳಿಸಿದ ಅಪ್ಪುವಿನ ಮುಗ್ಧ ನಗು
ನಟ ಪುನೀತ್ ರಾಜ್‌ಕುಮಾರ್ ನೆನಪು ಅಭಿಮಾನಿಗಳನ್ನು ಮಾತ್ರವಲ್ಲ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳನ್ನು ಕಾಡುತ್ತಲೇ ಇದೆ. ಅಪ್ಪುವಿನ ಆ ನಿಷ್ಕಲ್ಮಶ ನಗು ಅವರ ಗೆಳೆಯರ ಮನದಲ್ಲಿ ಹಚ್ಚಹಸಿರಾಗಿಬಿಟ್ಟಿದೆ.
ಅಪ್ಪುಗೆ ಚಂದನವನದಲ್ಲಿ ಹಲವು ಗೆಳೆಯರಿದ್ದರು. ಹೊಸಬರನ್ನೂ ಕರೆದು ಸ್ನೇಹ ಹಸ್ತ ಚಾಚುತ್ತಿದ್ದ ಸ್ನೇಹ ಜೀವಿಯಾಗಿದ್ದರು ಅಪ್ಪು. ಹಲವು ಹಿರಿಯ-ಕಿರಿಯ ನಟರೊಂದಿಗೆ ಅತ್ಯಾಪ್ತ ಬಂಧ ಹೊಂದಿದ್ದರು ಅಪ್ಪು. ಅಪ್ಪು ಬಹಳ ಆತ್ಮೀಯರಾಗಿದ್ದ ಹಿರಿಯ ನಟರಲ್ಲಿ ಒಬ್ಬರು ಜಗ್ಗೇಶ್.
Recommended Video
ಜಗ್ಗೇಶ್ ಹಾಗೂ ಪುನೀತ್ ನಡುವಿನ ಬಾಂಧವ್ಯ ಬಹಳ ಹಳೆಯದು. ಡಾ.ರಾಜ್‌ಕುಮಾರ್ ಅವರ ಅಭಿಮಾನಿಯಾಗಿದ್ದ ಜಗ್ಗೇಶ್, ಅಪ್ಪುವನ್ನು ಸಣ್ಣ ಬಾಲಕನಾಗಿದ್ದಾಗಿನಿಂದಲೂ ನೋಡಿದ್ದಾರೆ. ಅಪ್ಪು ಸಹ ಹಲವು ಬಾರಿ ಜಗ್ಗೇಶ್ ತಮ್ಮ ಮೆಚ್ಚಿನ ನಟನೆಂದು, ಜಗ್ಗೇಶ್ ನಟನೆಯ 'ತರ್ಲೆ ನನ್ ಮಗ' ಸಿನಿಮಾವನ್ನು ನೂರಾರು ಬಾರಿ ನೋಡಿದ್ದಾಗಿಯೂ ಹೇಳಿಕೊಂಡಿದ್ದಾರೆ. ಅಪ್ಪು ಅಗಲಿದ ಅತೀವ ದುಃಖತಪ್ತರಾದವರಲ್ಲಿ ನಟ ಜಗ್ಗೇಶ್ ಸಹ ಒಬ್ಬರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಜಗ್ಗೇಶ್ ಆಗಾಗ್ಗೆ ಅಪ್ಪುವನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಇಂದು ಅಪ್ಪು ಜೊತೆಗಿನ ತಮ್ಮ ವಿಡಿಯೋ ಒಂದನ್ನು ಹಂಚಿಕೊಂಡಿರುವ ಜಗ್ಗೇಶ್ ಭಾವುಕರಾಗಿದ್ದಾರೆ.

ಕೆಲ ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ 'ಸಾಗುವ ದಾರಿಯಲ್ಲಿ' ಎಂಬ ಹೊಸಬರ ಸಿನಿಮಾದ ಆಡಿಯೋ ಕಾರ್ಯಕ್ರಮಕ್ಕೆ ಪುನೀತ್ ರಾಜ್‌ಕುಮಾರ್, ಜಗ್ಗೇಶ್ ಹಾಗೂ ದೇವರಾಜ್ ಅತಿಥಿಯಾಗಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಜಗ್ಗೇಶ್ ಹಾಗೂ ದೇವರಾಜ್ ಅವರೊಟ್ಟಿಗೆ ಅಪ್ಪು ಸೆಲ್ಫಿ ತೆಗೆದುಕೊಂಡಿದ್ದರು. ಅದೇ ಕಾರ್ಯಕ್ರಮದಲ್ಲಿ ಜಗ್ಗೇಶ್ ಅವರ ಮಾತುಗಳಿಗೆ ಪುನೀತ್ ಬಿದ್ದು ಬಿದ್ದು ನಕ್ಕಿದ್ದರು. ಈ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು ಅದನ್ನು ಜಗ್ಗೇಶ್ ಇಂದು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ಹಂಚಿಕೊಳ್ಳುವ ಜೊತೆಗೆ ಭಾವುಕರಾಗಿ ಕೆಲವು ಸಾಲುಗಳನ್ನು ಸಹ ಜಗ್ಗೇಶ್ ಬರೆದಿದ್ದಾರೆ. ''ಪುನೀತ್, ಈ ವೀಡಿಯೋ ನೋಡಿ ಈ ಸಾವು ನ್ಯಾಯವೆ ಅನ್ನಿಸಿತು. ನಿನ್ನನಗಿಸಿದ ಒಂದೊಂದು ದಿನ ಹಾಗೆ ಉಳಿಯಬಾರದೆ ಅನ್ನಿಸಿತು. ನಿನ್ನನಗುವು ಹೂವಂತೆ. ನಿನ್ನನುಡಿಯು ಹಾಡಂತೆ. ಮತ್ತೆ ಒಮ್ಮೆ ಸಿಗಬಾರದೆ ನಿನ್ನ ಸಾಂಗತ್ಯ. ಓ ಪುನೀತ ಎಷ್ಟುದೂರದಲ್ಲಿ ನೀನಿರುವೆ. ಸಣ್ಣಸುಳಿವು ನೀಡು ದೊರೆ, ಮತ್ತೊಮ್ಮೆ ನಗಿಸುವೆ ರಾಜನ ಮಗುವೆ'' ಎಂದಿದ್ದಾರೆ ಜಗ್ಗೇಶ್.
ಜಗ್ಗೇಶ್ ಹಾಗೂ ಅಪ್ಪು ನಡುವೆ ಬಹಳ ಆತ್ಮೀಯವಾದ ಬಂಧವಿತ್ತು. ವಯಸ್ಸಿನಲ್ಲಿ ಅಪ್ಪುವಿಗಿಂತ 12 ವರ್ಷ ದೊಡ್ಡವರು ಜಗ್ಗೇಶ್ ಆದರೂ ಇಬ್ಬರೂ ಗೆಳೆಯರಂತೆ ಇದ್ದರು. ಅಪ್ಪುವನ್ನು ನಿಧನ ಹೊಂದಿದ ಕೆಲ ದಿನಗಳ ಬಳಿಕ ಅಪ್ಪುವನ್ನು ಕೊನೆಯ ಭಾರಿ ಭೇಟಿ ಮಾಡಿದ್ದ ಘಟನೆ ನೆನಪಿಸಿಕೊಂಡಿದ್ದ ಜಗ್ಗೇಶ್, ''ಕೊನೆಯ ಭಾರಿ ಮಲ್ಲೇಶ್ವರಂನಲ್ಲಿ ಭೇಟಿ ಮಾಡಿದ್ದೆವು, ಅಂದು ನಾನು ಹೊರಟಾಗ ಸುಧಾರಾಣಿ ಅವರ ಮನೆಯ ಗೇಟ್ ಬಳಿ ನಿಂತು ಅಪ್ಪು ಬಹಳ ಹೊತ್ತು ನನ್ನತ್ತ ಕೈಬೀಸಿ ವಿದಾಯ ಹೇಳಿದರು. ಅಂದೇ ನನಗೆ ತುಸು ವಿಚಿತ್ರ ಎನಿಸಿತು, ಆದರೆ ಅದುವೇ ಕೊನೆಯ ವಿದಾಯ ಆಗಿರುತ್ತದೆ ಎಂಬುದು ಗೊತ್ತಾಗಲಿಲ್ಲ'' ಎಂದು ಕಣ್ಣೀರು ಸುರಿಸಿದ್ದರು ಜಗ್ಗೇಶ್.
ನಟ ಜಗ್ಗೇಶ್ 'ರಾಘವೇಂದ್ರ ಸ್ಟೋರ್ಸ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು ಈ ಸಿನಿಮಾವನ್ನು ಅಪ್ಪುಗೆ ಆತ್ಮೀಯವಾಗಿದ್ದ ಸಂತೋಶ್ ಆನಂದ್ ರಾಮ್ ನಿರ್ದೇಶನದ ಮಾಡುತ್ತಿದ್ದಾರೆ. 'ರಾಘವೇಂದ್ರ ಸ್ಟೋರ್ಸ್' ಸಿನಿಮಾದ ಕತೆಯನ್ನು ಕೇಳಿ ಮೆಚ್ಚಿದ್ದರಂತೆ ಅಪ್ಪು. ಜಗ್ಗೇಶ್‌ಗೂ ಆ ಸಿನಿಮಾವನ್ನು ಒಪ್ಪಿಕೊಳ್ಳುವಂತೆ ಸಲಹೆ ನೀಡಿದ್ದರು. 'ರಾಘವೇಂದ್ರ ಸ್ಟೋರ್ಸ್' ಹೊರತಾಗಿ ಜಗ್ಗೇಶ್ ನಟಿಸಿರುವ 'ತೋತಾಪುರಿ' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. 'ರಂಗನಾಯಕ' ಸಿನಿಮಾದಲ್ಲಿಯೂ ಜಗ್ಗೇಶ್ ನಟಿಸುತ್ತಿದ್ದು, ಆ ಸಿನಿಮಾವನ್ನು ನಿರ್ದೇಶಕ ಗುರು ಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ. ಗುರು ಪ್ರಸಾದ್ ಅವರೇ ಈ ಹಿಂದೆ, ಜಗ್ಗೇಶ್ ನಟನೆಯ ಹಿಟ್ ಸಿನಿಮಾ 'ಮಠ' ಹಾಗೂ 'ಎದ್ದೇಳು ಮಂಜುನಾಥ' ನಿರ್ದೇಶನ ಮಾಡಿದ್ದರು.


Click it and Unblock the Notifications











