ಕಲಾವಿದರನ್ನ ತೆಗಳುವ ಅಭಿಮಾನಿಗಳಿಗೆ ಜಗ್ಗೇಶ್ ಕಿವಿಮಾತು
Recommended Video
ಸಿನಿಮಾ ಇಂಡಸ್ಟ್ರಿಯಲ್ಲಿ ಹೊಗಳುವುದು ತೆಗಳುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಪರಸ್ಪರ ತೆಗಳುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾ ಬಂದ್ಮೇಲಂತೂ ನೇರಾನೇರವಾಗಿ ನಿಂದಿಸುವ ಘಟನೆಗಳು ನಡೆಯುತ್ತಿದೆ.
ಪ್ರತಿನಿತ್ಯ ಸ್ಟಾರ್ ಅಭಿಮಾನಿಗಳ ವಾರ್ ಆಗುತ್ತಲೇ ಇರುತ್ತೆ. ನಿಮ್ಮ ಸ್ಟಾರ್ ಸಿನಿಮಾ ಫ್ಲಾಫ್, ಕಲೆಕ್ಷನ್ ಮಾಡಿಲ್ಲ, ದಾಖಲೆ ಇಲ್ಲ, ನಮ್ಮದು ಅತಿ ಹೆಚ್ಚು ವೀವ್ಸ್, ದಾಖಲೆಗಳು ನಮ್ಮ ನಟನ ಹೆಸರಿನಲ್ಲಿ, ನಿಮ್ದು ರೀಮೇಕ್, ಪೋಸ್ಟರ್ ಕದಿಯಲಾಗಿದೆ, ಬಾಡಿ ನಕಲಿ ಹೀಗೆ ಏನಾದರೂ ವಿಷ್ಯಗಳನ್ನಿಟ್ಟು ಕಿತ್ತಾಡುತ್ತಿರುತ್ತಾರೆ.
ಎಷ್ಟೆ ಹಾರ್ಡ್ ವರ್ಕ್ ಮಾಡಿದ್ರು, ಒಳ್ಳೆಯ ಸಿನಿಮಾ ಕೊಟ್ಟರೂ, ಹೊಗಳುವ ಅಭಿಮಾನಿಗಳಿಗಿಂತ ತೆಗಳುವ ಫ್ಯಾನ್ಸ್ ಸುದ್ದಿಯಾಗುತ್ತಿದ್ದಾರೆ. ಇಂತವರಿಗೆಲ್ಲಾ ನಟ ಜಗ್ಗೇಶ್ ಕಿವಿಮಾತು ಹೇಳಿದ್ದಾರೆ. ಏನಂದ್ರು? ಮುಂದೆ ಓದಿ....

ಪರಸ್ಪರ ತೆಗಳುವಿಕೆ ಬೇಡ
''ಕನ್ನಡ ಚಿತ್ರರಂಗದ ಕಲಾವಿದರ ಅಭಿಮಾನಿಗಳಿಗೆ ಕಿವಿಮಾತು. ನಿಮ್ಮ ಪ್ರೀತಿ ಇಷ್ಟಪಟ್ಟವರ ಮೇಲೆ ಪ್ರಶಂಸನೀಯ! ಯಾವುದೇ ಕಾರಣಕ್ಕು ಪರಸ್ಪರ ತೆಗಳುವಿಕೆ ಬೇಡ ಕಾರಣ ಎಲ್ಲಾನಟರು ಕನ್ನಡಮ್ಮನ ತೇರ ಅವರ ಶಕ್ಯಾನುಸಾರ ಎಳೆಯುತ್ತಿದ್ದಾರೆ! ಕನ್ನಡಿಗನ ನಿಜಧರ್ಮ ಕನ್ನಡದ ಸೇವಕರಿಗೆ ಭುಜತಟ್ಟುವುದು! ಕನ್ನಡಿಗ ಕನ್ನಡಿಗನ ತೆಗಳಿದರೆ ನಮ್ಮನಾವೆ ಅವಮಾನಿಸಿದಂತೆ'' ಎಂದು ಟ್ವೀಟ್ ಮಾಡಿದ್ದಾರೆ.

ಅಭಿಮಾನಿಗಳ ಬೆಂಬಲ
ಜಗ್ಗೇಶ್ ಅವರ ಈ ಮಾತಿಗೆ ಅಭಿಮಾನಿಗಳು ಕೂಡ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ''ಈಗಿನ ಅಭಿಮಾನಿಗಳು ಯಾರನ್ನೋ ಒಬ್ಬನ ಅಭಿಮಾನಿ ಅಂತ ಪಟ್ಟಿ ಕಟ್ಟಿಕೊಳ್ಳದೆ ಎಲ್ಲಾ ಕನ್ನಡ ನಟರು ಅಭಿಮಾನಿ ಅಂತ ಆದರೆ ಎಷ್ಟು ಚೆಂದ. ಕನ್ನಡಕ್ಕೆ ಕನ್ನಡವೇ ಸಾಟಿ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಗ್ಗೇಶ್ ಮಾತಿಗೆ ಪ್ರಶ್ನೆಯೂ ಇದೆ
ಮತ್ತೆ ಕೆಲವರು ಕಲಾವಿದರ ನಡೆಯನ್ನ ಕೂಡ ಪ್ರಶ್ನಿಸಿದ್ದಾರೆ. ''ನೀವು ಹೇಳೋದು ನಿಜ ಆದರೆ ನಮ್ಮ ನಾಯಕರಿಗೆ ದುಡ್ಡು ಮತ್ತು ಹೆಸರು ಬಂದಮೇಲೆ ಅಹಂಕಾರ ಏಕೆ?? ಅಹಂಕಾರ ಇಲ್ಲದೆ ದೊಡ್ಡ ನಟನಾಗುವದಕ್ಕೆ ಸಾಧ್ಯವಿಲ್ಲವೇ?? ಇವರೆಲ್ಲ ತಾವು ಬೆಳೆದ ಬಂದ ದಾರಿ ಹಿಂದಿರುಗಿ ನೋಡುವುದಿಲ್ಲ ಏಕೆ???'' ಎಂದು ಕೇಳಿದ್ದಾರೆ.

ಕೆಜಿಎಫ್, ಕುರುಕ್ಷೇತ್ರ, ಪೈಲ್ವಾನ್ ಗೆ ಜೈಕಾರ
ಜಗ್ಗೇಶ್ ಅವರ ಮಾತಿನಲ್ಲಿ ನಿಜವಾಗಲೂ ಅರ್ಥವಿದೆ ಎಂಬುದನ್ನ ಒಪ್ಪಿಕೊಳ್ಳಬೇಕಿದೆ. ಕೆಜಿಎಫ್, ಕುರುಕ್ಷೇತ್ರ, ಪೈಲ್ವಾನ್, ಅವನೇ ಶ್ರೀಮನ್ನಾರಾಣ ಅಂತಹ ಸಿನಿಮಾಗಳು ಪರಭಾಷಿಗರಿಗೆ ಕನ್ನಡ ಚಿತ್ರರಂಗ ನಿಜವಾದ ತಾಕತ್ತು ಏನು ಎಂಬುದನ್ನ ತೋರಿಸಿಕೊಡುತ್ತಿದೆ. ಅದಕ್ಕೆ ಮೆಚ್ಚುಗೆ ಇರಬೇಕೆ ಹೊರತು, ನಮ್ಮ ಇಂಡಸ್ಟ್ರಿಯಲ್ಲೇ ತೆಗಳುವ ಸಂಸ್ಕೃತಿ ಬೇಕಾಗಿಲ್ಲ.


Click it and Unblock the Notifications











