ಸದಾಶಿವ ಬ್ರಹ್ಮಾವರ್ ನಿಧನಕ್ಕೆ ಕಂಬನಿ ಮಿಡಿದ ನಟ ಜಗ್ಗೇಶ್
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ನಿನ್ನೆ ವಿಧಿವಶರಾದರು. ಸದಾಶಿವ ಬ್ರಹ್ಮಾವರ್ ಅವರ ಸಾವಿನ ಸುದ್ದಿ ಕೇಳಿ ನವರಸ ನಾಯಕ ಜಗ್ಗೇಶ್ ಕಂಬನಿ ಮಿಡಿದಿದ್ದಾರೆ.
ಮನೆ ಹಾಗೂ ಮಕ್ಕಳಿಂದ ದೂರಾಗಿ ಸದಾಶಿವ ಬ್ರಹ್ಮಾವರ್ ಸಂಕಷ್ಟದಲ್ಲಿದ್ದಾರೆ ಎಂದು ಕಳೆದ ವರ್ಷ ಸುದ್ದಿಯಾಗಿತ್ತು. ಆಗ ಸದಾಶಿವ ಬ್ರಹ್ಮಾವರ್ ಅವರಿಗೆ ಸಹಾಯ ಹಸ್ತ ಚಾಚಲು ನವರಸ ನಾಯಕ ಜಗ್ಗೇಶ್ ಮುಂದೆ ಬಂದಿದ್ದರು.
ಈಗ ಏಕಾಏಕಿ ಸದಾಶಿವ ಬ್ರಹ್ಮಾವರ್ ಅವರ ಸಾವಿನ ಸುದ್ದಿ ಕೇಳಿ ಜಗ್ಗೇಶ್ ದಿಗ್ಭ್ರಾಂತರಾಗಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ನಟ ಜಗ್ಗೇಶ್ ತಮ್ಮ ದುಃಖವನ್ನ ಹಂಚಿಕೊಂಡಿದ್ದಾರೆ.

''ನಾನು ಕಂಡ ಅತಿ ಸೌಮ್ಯ ಸ್ವಭಾವದ ವ್ಯಕ್ತಿ ಇವರು. 1988 ರಿಂದ ಇವರ ಜೊತೆಗೆ ನಟಿಸಿರುವೆ. 'ಲಿಫ್ಟ್ ಕೊಡ್ಲಾ' ನನ್ನ ಜೊತೆ ಇವರ ಕಡೆಯ ಚಿತ್ರ.! ಅವರ ಒಳ್ಳೆಯ ಗುಣಕ್ಕೆ ವಯಸ್ಸು ಮಾಗಿದಾಗ ಭುಜ ಕೊಡದ ಮಹನೀಯರಿದ್ದರು ದೌರ್ಭಾಗ್ಯ. ಪರದೆ ಮೇಲಿರುವವರೆಗೂ ಮಾತ್ರ ಕಲಾವಿದರ ಬದುಕು. ಮಿಕ್ಕಂತೆ ನೆನಪು ಮಾತ್ರ ''ಬಣ್ಣ ಮಾಸುವ ಮುನ್ನ ಬದುಕು ಬಲವಾಗಿಟ್ಟುಕೊಳ್ಳಿ ಕಲಾಬಂಧುಗಳೇ. ನಶ್ವರ ಜಗ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ನಿನ್ನೆ ನಿಧನರಾದ ಸದಾಶಿವ ಬ್ರಹ್ಮಾವರ್ ಅವರ ಅಂತ್ಯಕ್ರಿಯೆ ಇಂದು ಬನಶಂಕರಿಯ ಚಿತಾಗಾರದಲ್ಲಿ ನೆರವೇರಿದೆ.
ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರವಿಚಂದ್ರನ್ ಸೇರಿದಂತೆ ಕನ್ನಡ ಚಿತ್ರರಂಗದ ಜನಪ್ರಿಯ ನಾಯಕರ ಚಿತ್ರಗಳಲ್ಲಿ ಸದಾಶಿವ ಬ್ರಹ್ಮಾವರ್ ನಟಿಸಿದ್ದಾರೆ. 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಲವಾರು ಪಾತ್ರಗಳಿಗೆ ಜೀವ ತುಂಬಿದ್ದ ಸದಾಶಿವ ಬ್ರಹ್ಮಾವರ್ ಇಂದು ನೆನಪು ಮಾತ್ರ.


Click it and Unblock the Notifications











