ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ರಶ್ಮಿಕಾಗೆ ಜಗ್ಗೇಶ್ ಎಚ್ಚರಿಕೆ
Recommended Video
ಕರ್ನಾಟಕದ ಕ್ರಶ್, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಪರಭಾಷೆಯಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ನಟಿಸುತ್ತಿದ್ದಾರೆ. ರಶ್ಮಿಕಾ ಯಶಸ್ಸಿನ ನೋಡಿದ ಕನ್ನಡಿಗರು, 'ನಮ್ಮ ನಾಡಿನ ಹುಡುಗಿ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಆದರೆ, ರಶ್ಮಿಕಾ ಮಾಡಿಕೊಳ್ಳುವ ಯಡವಟ್ಟಿನಿಂದ ಕನ್ನಡಿಗರು ಇಟ್ಟುಕೊಂಡಿರುವ ಆ ಪ್ರೀತಿ, ಸಂತಸ ಎಲ್ಲವೂ ದೂರವಾಗುತ್ತಿದೆ.
ನಮ್ಮ ನಾಡಿನ ಹುಡುಗಿ ಎಂದು ಹೆಮ್ಮೆಪಡುತ್ತಿದ್ದ ಅದೇ ಜನರು ಇಂದು ರಶ್ಮಿಕಾ ಅವರ ಚಿತ್ರಗಳನ್ನ ಬಹಿಷ್ಕರಿಸಿ ಎಂದು ಪ್ರತಿಭಟನೆ ಮಾಡುವ ಸ್ಥಿತಿಗೆ ಬಂದಿದ್ದಾರೆ. ಅದಕ್ಕೆ ಕಾರಣ ತಮಿಳು ವೆಬ್ ಸೈಟ್ ವೊಂದರಲ್ಲಿ ನಟಿ ರಶ್ಮಿಕಾ ನೀಡಿದ ಹೇಳಿಕೆ.
'ಡಿಯರ್ ಕಾಮ್ರೇಡ್' ಚಿತ್ರಕ್ಕೆ ಸಂಬಂಧಪಟ್ಟಂತೆ ಮಾತನಾಡುತ್ತಿದ್ದ ಸಂದರ್ಶನದಲ್ಲಿ, ''ನನಗೆ ಕನ್ನಡ ಬರಲ್ಲ, ಮಾತನಾಡಲು ಕಷ್ಟ'' ಎಂದಿದ್ದರು. ಕರ್ನಾಟಕದಲ್ಲಿ ಹುಟ್ಟಿ, ಕಾವೇರಿ ನೀರು ಕುಡಿದು ಬೆಳೆದ ರಶ್ಮಿಕಾಗೆ ಕನ್ನಡ ಬರಲ್ವಾ ಎಂದು ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಈ ಘಟನೆಯ ಬಗ್ಗೆ ನಟ ಜಗ್ಗೇಶ್ ಮಾತನಾಡಿದ್ದು, ರಶ್ಮಿಕಾಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕಿರಿಕ್ ಹುಡುಗಿಯ ಬಗ್ಗೆ ಜಗ್ಗಣ್ಣ ಏನಂದ್ರು? ಮುಂದೆ ಓದಿ....

ಕನ್ನಡವನ್ನ ಅಪಾರ ಗೌರವಿಸುವ ಕಲಾವಿದರಿದ್ದಾರೆ
''ಕನ್ನಡ ಚಿತ್ರರಂಗದ ಆಶೀರ್ವಾದ ಪಡೆದು ಬೆಳೆದು ಪರಭಾಷೆಗೆ ಹೋಗಿ ಅಲ್ಲಿಯು ಬೆಳೆದ ಅನೇಕ ಸ್ನೇಹಿತರಿದ್ದಾರೆ! ಅವರೆಲ್ಲ ಇಂದು ಕನ್ನಡದಲ್ಲೆ ಮಾತಾಡಿ ಕನ್ನಡವನ್ನ ಅಪಾರ ಗೌರವಿಸುತ್ತಾರೆ ಅದು ಅವರ ಕನ್ನಡದ ಸಂಸ್ಕೃತಿ'' ಎಂದು ಅಂತವರ ಬಗ್ಗೆ ಜಗ್ಗೇಶ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಹಾಗ್ನೋಡಿದ್ರೆ, ರಜನಿಕಾಂತ್, ಅರ್ಜುನ್ ಸರ್ಜಾ, ಪ್ರಕಾಶ್ ರೈ ಅಂತವರು ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾರೆ ಎಂದರೇ ತಪ್ಪಾಗಲಾರದು.

ಇಂದಿನ ಪೀಳಿಗೆಯ ನಡಾವಳಿ ದುರಾದೃಷ್ಟಕರ
''ಆ ಗುಣವಿರದ ಇಂದಿನ ಪೀಳಿಗೆಯ ನಡಾವಳಿ ದುರಾದೃಷ್ಟಕರ ನಡೆ! ಕನ್ನಡ ಪ್ರೇಕ್ಷಕನ ಚಪ್ಪಾಳೆ ಬಿದ್ದೆ ನಿಮ್ಮ ಬೆಳವಣಿಗೆ ಆದದ್ದುನೆನಪಿರಲಿ!'' ಎಂದು ನಟಿ ರಶ್ಮಿಕಾ ಮಂದಣ್ಣ ಅವರ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

ರಶ್ಮಿಕಾ ಚಿತ್ರಗಳನ್ನ ಬಹಿಷ್ಕರಿಸಿ.!
ಮುಂದಿನ ದಿನದಲ್ಲಿ ರಶ್ಮಿಕಾ ಮಂದಣ್ಣ ಅವರ ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗಲು ಬಿಡುವುದಿಲ್ಲ. ಅವರು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ವಾಣಿಜ್ಯ ಮಂಡಳಿಯಲ್ಲಿ ಕೆಲವು ಕನ್ನಡ ಪರ ಹೋರಾಟಗಾರರು ದೂರು ನೀಡಿದ್ದಾರೆ. ಬಹುಶಃ ಡಿಯರ್ ಕಾಮ್ರೇಡ್ ಚಿತ್ರಕ್ಕೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಬಹುದು.

ಯಶಸ್ಸಿನ ಜೊತೆಯಲ್ಲಿ ವಿವಾದ ಸಾಗುತ್ತಿದೆ
ಅದ್ಯಾಕೋ ರಶ್ಮಿಕಾ ಮಂದಣ್ಣಗೆ ಯಶಸ್ಸಿನ ಜೊತೆ ವಿವಾದಗಳು ಅಂಟಿಕೊಂಡು ಬರುತ್ತಲೇ ಇದೆ. ಕಡಿಮೆ ಅವಧಿಯಲ್ಲಿ ಸೌತ್ ಸೂಪರ್ ಸ್ಟಾರ್ ಗಳ ಜೊತೆ ತೆರೆಹಂಚಿಕೊಂಡು, ಅತಿ ಹೆಚ್ಚು ಸಂಭಾವನೆ ಕೂಡ ಪಡೆಯುತ್ತಿದ್ದಾರೆ. ದರ್ಶನ್, ಪುನೀತ್, ಗಣೇಶ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ಮಹೇಶ್ ಬಾಬು ಅಂತವರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮಧ್ಯೆ ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್, ಯಶ್ ಬಗ್ಗೆ ಹೇಳಿಕೆಯೊಂದು, ಕನ್ನಡ ಬರಲ್ಲ ಎಂಬ ಹೇಳಿಕೆ, ಹೀಗೆ ಒಂದೊಂದು ವಿವಾದಗಳಿಂದಲೂ ಸುದ್ದಿಯಲ್ಲಿದ್ದಾರೆ.


Click it and Unblock the Notifications











