ರಾತ್ರೋರಾತ್ರಿ ಆಟೋ ಚಲಾಯಿಸಿ ಹಳೆಯ ದಿನಗಳನ್ನು ನೆನಪಿಸಿಕೊಂಡ ಜಗ್ಗೇಶ್
Recommended Video
ನವರಸ ನಾಯಕ ಜಗ್ಗೇಶ್ ಸದ್ಯ 'ಪ್ರೀಮಿಯರ್ ಪದ್ಮಿನಿ' ಚಿತ್ರದ ಮೂಲಕ ಸದ್ದು ಮಾಡುತ್ತಿದ್ದಾರೆ. ಚಿತ್ರದ ಸಕ್ಸಸ್ ನ ಖುಷಿಯಲ್ಲಿ ತೇಲುತ್ತಿದ್ದಾರೆ ಜಗ್ಗಣ್ಣ. ಇದೇ ಖುಷಿಯಲ್ಲಿ ಜಗ್ಗೇಶ್ ರಾತ್ರೋರಾತ್ರಿ ಆಟೋ ಹಿಡಿದು ರೋಡಿಗೆ ಇಳಿದಿದ್ದಾರೆ.
ಹೌದು, ಜಗ್ಗೇಶ್ ರಾತ್ರಿ ಹೊತ್ತು ಬೆಂಗಳೂರಿನ ರಸ್ತೆಯಲ್ಲಿ ಆಟೋ ಚಲಾಯಿಸಿ ಅಚ್ಚರಿ ಮೂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ನವರಸನಾಯಕ ಆಟೋ ಓಡಿಸುತ್ತಿರುವ ವೀಡಿಯೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ವೀಡಿಯೋ ಜೊತೆಗೆ ಅಂದು ಜಗ್ಗೇಶ್ ಆಟೋ ಓಡಿಸಿದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಪ್ಪ ಬೈದ್ರು ಕಾರಣ ಮನೆ ಬಿಟ್ಟು ಹೋಗಿ ಮೈಸೂರಿನಲ್ಲಿ ಆಟೋ ಓಡಿಸಿದ ದಿನಗಳು ತುಂಬಾ ಕಾಡುತ್ತಿವೆ. ಎಂದು ಹೇಳಿಕೊಂಡಿದ್ದಾರೆ. ತಂದೆಯ ಮಾತುಗಳನ್ನು ನೆನೆದು ಭಾವುಕರಾಗಿದ್ದಾರೆ. ಮುಂದೆ ಓದಿ..

ಆಟೋ ಡ್ರೈವರ್ ಆಗಿದ್ದ ಜಗ್ಗೇಶ್
"ಇಂದು ರಾತ್ರಿ ನಾನು ಆಟೋರಾಜ ಆದಾಗ. 1979/80 ಅಪ್ಪ ನನಗೆ ನಿನ್ನ ಅನ್ನ ನೀನೆ ದುಡಿದು ತಿನ್ನು ಆಗ ಬದುಕಿನ ಅರ್ಥ ನಿನಗಾಗುವುದು ಎಂದಾಗ ಅಂದು ನನಗೆ 'ಮಯೂರ' ಚಿತ್ರದ interval ದೃಶ್ಯದ ರಾಜಣ್ಣ ನಂತೆ ಶಪಥಮಾಡಿ ಮನೆಬಿಟ್ಟು ಹೋಗಿ ಮೈಸೂರಿನಲ್ಲಿ ಆಟೋ ಡ್ರೈವರ್ ಆಗಿದ್ದೆ. ಆಗ ನನಗೆ ಇದ್ದ ಆಸೆ ಒಂದೆ. ಜೀವನದಲ್ಲಿ ಒಂದು ಆಟೋ ಸ್ವಂತ ಪಡೆದು ದಿನ 100ರೂ ದುಡಿಯುವ ಮನುಷ್ಯನಾಗಿ, ಅಪಮಾನಿಸಿದ ಅಪ್ಪನ ಮುಂದೆ ಮೀಸೆ ತಿರುವಿ ಬದುಕಬೇಕು ಎಂದು"

ಬುದ್ಧಿ ಹೇಳುವ ಅಪ್ಪ ಅಂದು ಶತ್ರುವಂತೆ ಕಂಡ
"ಬದುಕಿಗೆ ಬುದ್ಧಿ ಹೇಳುವ ಅಪ್ಪ ಅಂದು ಶತ್ರುವಂತೆ ಕಂಡ. ಇಂದು ಆಕಸ್ಮಿಕ ಒಬ್ಬ ಆಟೋರಿಕ್ಷಾ ಸಹೋದರ ಸಿಕ್ಕಾಗ ಅವನ ಅನುಮತಿ ಪಡೆದು ಆಟೋ ಓಡಿಸಿದೆ. ಅಪ್ಪ ಹಾಗು ನನ್ನ ಮನಸ್ತಾಪದ ದಿನಗಳು ನೆನಪಾಗಿ ಅಪ್ಪ ಎಂಥ ಶ್ರೇಷ್ಟ. ಮಗ ನಾನು ಎಂಥ ಅಧಮ. ವ್ಯತ್ಯಾಸ ನನ್ನ ತಲೆ ತಗ್ಗಿಸುವಂತೆ ನಾಚಿಕೆಯಾಯಿತು. ಮಗ ಬದುಕು ಕಲಿಯಲಿ ಎಂದು ಅಪ್ಪ ಆಡಿದ ಮಾತೆಲ್ಲಾ ಅಣಕ ಅಪಮಾನದಂತೆ ಕೇಳುತ್ತಿತ್ತು ರಕ್ತ ಬಿಸಿಯಿದ್ದಾಗ"

ಕ್ಷಮೆಕೇಳಲು ನಾನು ನೀನಿರುವ ಜಾಗಕ್ಕೆ ಬರಬೇಕು
"ಈಗ ನೀವು ಬೈದು ಬುದ್ಧಿ ಹೇಳುತ್ತಿದ್ದ ಮಗ ತಾತನಾಗಿ ಬದುಕಿನ ಪುಟಗಳ ಮೆಲುಕುಹಾಕಿದಾಗ, ಅಪ್ಪ ಎಂಥ ಶ್ರೇಷ್ಠ ಮನುಜ ನೀನು ಅನ್ನಿಸಿತು. ತಪ್ಪಾಯಿತು ಕ್ಷಮಿಸಿ ಅಂದರು ಕೇಳದಷ್ಟು ದೂರದ ಊರಿಗೆ ಹೋಗಿಬಿಟ್ಟೆ. ಕ್ಷಮೆಕೇಳಲು ನಾನು ನೀನಿರುವ ಜಾಗಕ್ಕೆ ಬರಬೇಕು. ಇನ್ನು ಅನೇಕ ಕಾರ್ಯವಿದೆ ಮುಗಿಸಿ ಮಾಗಿದಾಗ ದೇಹ ನಿನ್ನಲ್ಲಿಗೆ ಬರುವೆ. ಆಗಲಾದರು ಕ್ಷಮಿಸು"
ತಂದೆ-ತಾಯಿ ನಡೆದಾಡುವ ದೇವರು
"ಎಷ್ಟೇ ಆದರು ನಾನು ನಿನ್ನ ಮಗನಲ್ಲವೆ. ಒಂದಂತು ನಿನಗೆ ಸಮಾಧಾನ ಆಗುತ್ತದೆ. ಅಪ್ಪ ನಾನು ಶ್ರಮಿಸಿ ನಿನ್ನ ವಂಶದ ಹೆಸರು ಉಳಿಸಿರುವೆ. ನೀನು ಅಮ್ಮ ಗರ್ವಪಡುತ್ತೀರಿ ನನ್ನ ಸಾಧನೆಕಂಡು.love you pa..ever loving son. ತಂದೆ-ತಾಯಿ ನಡೆದಾಡುವ ದೇವರು ಬದುಕಿದ್ದಾಗಲೆ ಗೌರವಿಸಿ. ಕಳೆದುಕೊಂಡ ಮೇಲೆ ಪರಿತಪಿಸಿದರು ಮತ್ತೆ ಸಿಗರು"


Click it and Unblock the Notifications











