ಸಂತೋಷ್ - ಹೊಂಬಾಳೆ ಫಿಲ್ಮ್ಸ್‌ನ 'ರಾಘವೇಂದ್ರ ಸ್ಟೋರ್ಸ್' ನೋಡಿದ ಮೊದಲ ಪ್ರೇಕ್ಷಕ ಹೇಳಿದ್ದಿಷ್ಟು; ಹೇಗಿದೆ ಚಿತ್ರ?
ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಸಿನಿಮಾ ಮೂಲಕ ಸಿನಿಮಾ ಜೀವನ ಆರಂಭಿಸಿದ ಸಂತೋಷ್ ಆನಂದ್‌ರಾಮ್ ಮುಟ್ಟಿದ್ದೆಲ್ಲಾ ಚಿನ್ನ. ಮೊದಲ ಚಿತ್ರದಲ್ಲಿಯೇ ಇಂಡಸ್ಟ್ರಿ ಹಿಟ್ ಬಾರಿಸಿದ ಸಂತೋಷ್ ಆನಂದ್‌ರಾಮ್ ಎರಡನೇ ಚಿತ್ರ ರಾಜಕುಮಾರ ಮೂಲಕವೂ ಭರ್ಜರಿ ಇಂಡಸ್ಟ್ರಿ ಹಿಟ್ ಬಾರಿಸಿದರು. ಹೀಗೆ ತನ್ನ ಮೊದಲೆರಡು ಚಿತ್ರಗಳಲ್ಲಿಯೂ ಇಂಡಸ್ಟ್ರಿ ಹಿಟ್ ಕೊಟ್ಟ ಸಂತೋಷ್ ಆನಂದ್‌ರಾಮ್ ಸಿನಿಮಾಗಳೆಂದರೆ ಪಕ್ಕಾ ಹಿಟ್ ಎಂಬ ನಂಬಿಕೆ ಹುಟ್ಟಿಕೊಂಡಿತು.
ಈ ಎರಡು ಚಿತ್ರಗಳ ಯಶಸ್ಸಿನ ನಂತರ ಸಂತೋಷ್ ಆನಂದ್‌ರಾಮ್ ಮತ್ತೆ ಪವರ್‌ಸ್ಟಾರ್‌ಗೆ ಯುವರತ್ನ ಸಿನಿಮಾ ಮಾಡಿದರು. ಈ ಚಿತ್ರದಲ್ಲಿ ಶಿಕ್ಷಣಕ್ಕೆ ಖಾಸಗೀಕರಣ ಬೇಡ ಎಂಬುದನ್ನು ಒತ್ತಿ ಹೇಳಿ ಸಂದೇಶ ನೀಡಿದ್ದ ಸಂತೋಷ್ ಆನಂದ್‌ರಾಮ್ ಇದರ ಬೆನ್ನಲ್ಲೇ ನವರಸ ನಾಯಕ ಜಗ್ಗೇಶ್ ಅವರಿಗೆ 'ರಾಘವೇಂದ್ರ ಸ್ಟೋರ್ಸ್' ಸಿನಿಮಾವನ್ನು ನಿರ್ದೇಶಿಸಿದರು. ಹೌದು, 2021ರ ಸೆಪ್ಟೆಂಬರ್ 22ರಂದು ಈ ಸಿನಿಮಾವನ್ನು ಘೋಷಿಸಲಾಯಿತು.

ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಅತಿ ಎತ್ತರಕ್ಕೆ ಹಾರಿಸಿರುವ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿಯೇ ಈ ಚಿತ್ರವೂ ತಯಾರಾಯಿತು. ಕಾಂತಾರ ಜತೆ ಜತೆಗೆ ಚಿತ್ರೀಕರಣವನ್ನು ಮುಗಿಸಿದ್ದ ಈ ಚಿತ್ರದ ಟೀಸರ್ ಸಹ ಕಾಂತಾರ ಟೀಸರ್ ಬಿಡುಗಡೆಯಾಗುವ ಹಿಂದಿನ ದಿನ ಬಿಡುಗಡೆಗೊಂಡಿತ್ತು. ಕಾಂತಾರ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟು ಕೋಟಿ ಕೋಟಿ ಲೂಟಿ ಮಾಡಿ, ಈಗ ಓಟಿಟಿಗೂ ಸಹ ಬಂದಿದ್ದು, ರಾಘವೇಂದ್ರ ಸ್ಟೋರ್ಸ್ ಮಾತ್ರ ಇನ್ನೂ ಬಿಡುಗಡೆಯಾಗಿಲ್ಲ.
ಚಿತ್ರತಂಡ ಎಲ್ಲಿಯೂ ಈ ಬಗ್ಗೆ ಪೋಸ್ಟ್ ಮಾಡುವುದಾಗಲಿ ಅಥವಾ ಅಪ್‌ಡೇಟ್ ನೀಡುವುದನ್ನಾಗಲಿ ಮಾಡದ ಕಾರಣ ಈ ಚಿತ್ರ ನಿಂತುಹೋಯ್ತಾ, ಚಿತ್ರ ಚಿತ್ರಮಂದಿರಗಳಿಗೆ ಬರದೇ ನೇರವಾಗಿ ಓಟಿಟಿಗೆ ಬರುತ್ತಾ ಎಂಬ ಅನುಮಾನಗಳು ಶುರುವಾದವು. ಚಿತ್ರದ ಕುರಿತಾಗಿ ಇಂತಹ ಹಲವು ಅನುಮಾನಗಳು ಹರಿದಾಡಿದರೂ ಚಿತ್ರತಂಡ ಮಾತ್ರ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಆದರೆ ಇದೀಗ ಚಿತ್ರದ ಕೆಲಸ ಸಂಪೂರ್ಣವಾಗಿ ಮುಗಿದಿದ್ದು, ಪ್ರೇಕ್ಷಕರೊಬ್ಬರು ಈ ಚಿತ್ರವನ್ನು ವೀಕ್ಷಿಸಿ ಚಿತ್ರ ಹೇಗಿದೆ ಎಂಬುದನ್ನು ತಿಳಿಸಿದ್ದಾರೆ.

ಈ ಚಿತ್ರವನ್ನು ನೋಡಿರುವ ಪ್ರೇಕ್ಷಕ ಬೇರೆ ಯಾರೂ ಅಲ್ಲ, ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ನವರಸ ನಾಯಕ ಜಗ್ಗೇಶ್. ಹೌದು, ಈ ಕುರಿತಾಗಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಜಗ್ಗೇಶ್ "ರಾಘವೇಂದ್ರ ಸ್ಟೋರ್ಸ್ ಸಿನಿಮಾ ನೋಡಿದೆ. ಅದ್ಭುತ ನಿರ್ದೇಶನ, ಅದ್ಭುತ ಸಂಗೀತ, ಅದ್ಭುತ ಸಂಕಲನ, ಅದ್ಭುತ ಛಾಯಾಗ್ರಹಣ, ಒಟ್ಟಾರೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಅದ್ಭುತ ಚಿತ್ರ. ಧನ್ಯವಾದ ಇಂಥ ಅದ್ಭುತ ಚಿತ್ರ ಕಟ್ಟಿಕೊಟ್ಟ ಸಂತೋಷ್ ಆನಂದ್‌ರಾಮ್ ಅವರಿಗೆ. ನನ್ನ ಪ್ರಕಾರ ಈ ಚಿತ್ರ ಕನ್ನಡಿಗರ ಮನಗೆಲ್ಲುತ್ತದೆ, ಬಹಳ ವರ್ಷ ನೆನಪಿನಲ್ಲಿ ಉಳಿಯುತ್ತದೆ. ಅತಿ ಶೀಘ್ರದಲ್ಲೇ ಚಿತ್ರಮಂದಿರದಲ್ಲಿ.." ಎಂದು ತಿಳಿಸಿದ್ದಾರೆ.
ಈ ಮೂಲಕ ಚಿತ್ರ ಗೆದ್ದೇ ಗೆಲ್ಲಲಿದೆ ಎಂಬ ಸೂಚನೆಯನ್ನು ಜಗ್ಗೇಶ್ ನೀಡಿದ್ದು, ರಾಮಾಚಾರಿ, ರಾಜಕುಮಾರ ಹಾಗೂ ಯುವರತ್ನ ಮೂಲಕ ಹ್ಯಾಟ್ರಿಕ್ ಬಾರಿಸಿದ್ದ ಸಂತೋಷ್ ಆನಂದ್‌ರಾಮ್ ಈಗ ಹೊಂಬಾಳೆ ಫಿಲ್ಮ್ಸ್ ಜತೆಗೂಡಿ ಹ್ಯಾಟ್ರಿಕ್ ಬಾರಿಸಲಿದ್ದಾರೆ. ಹೌದು, ಸಂತೋಷ್ ಆನಂದ್‌ರಾಮ್ ರಾಜಕುಮಾರ ಹಾಗೂ ಯುವರತ್ನ ಬಳಿಕ ನಿರ್ದೇಶಿಸಿರುವ ಚಿತ್ರ ಇದಾಗಿದ್ದು, ಹೊಂಬಾಳೆ ಜತೆಗಿನ ಹ್ಯಾಟ್ರಿಕ್ ಪ್ರಾಜೆಕ್ಟ್ ಆಗಿದೆ.
ಇನ್ನು ಇದೇ ಪೋಸ್ಟ್ ಒಂದರ ಕಾಮೆಂಟ್‌ಗೆ ಜಗ್ಗೇಶ್ ಪ್ರತಿಕ್ರಿಯಿಸಿದ್ದು ಏಪ್ರಿಲ್ ತಿಂಗಳಿನಲ್ಲಿ ಚಿತ್ರ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದಿದ್ದಾರೆ. ಈ ಮೂಲಕ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಾ ಅಥವಾ ನೇರವಾಗಿ ಓಟಿಟಿಗೆ ಬರುತ್ತಾ ಎಂಬ ಗೊಂದಲಕ್ಕೆ ಜಗ್ಗೇಶ್ ತೆರೆ ಎಳೆದಿದ್ದಾರೆ. ಇದಾದ ಬಳಿಕ ಸಂತೋಷ್ ಆನಂದ್‌ರಾಮ್ ಯುವ ರಾಜ್‌ಕುಮಾರ್‌ಗೆ ಸಿನಿಮಾ ಮಾಡಲಿದ್ದು, ಮತ್ತೊಂದು ಬತ್ತಳಿಕೆಯಲ್ಲಿ ಇದ್ದ ಮತ್ತೊಂದು ಅಸ್ತ್ರ ಆಚೆ ಬರಲಿದೆ.


Click it and Unblock the Notifications











