ಏನ ಮಾಡಿದರೇನು ಭವ ಹಿಂಗದು ಅನ್ನೋದಕ್ಕೆ ಜಗ್ಗೇಶ್ ಉದಾಹರಣೆಯಾಗುತ್ತಿದ್ದರೆಯೇ?
ಮಾತಿನ ಮಲ್ಲ ಜಗ್ಗೇಶ್ ಮೂರು ತಿಂಗಳ ಮೌನ ವ್ರತದ ನಂತರ ಮತ್ತೆ ಕಣಕ್ಕಿಳಿದಿದ್ದಾರೆ. ಅವರ ಹೊಸ ಚಿತ್ರ ಶುಕ್ರದೆಸೆ ಸೆಟ್ಟೇರಿದೆ. ಎಂದಿನಂತೆ ಅವರ ಭಾವ ಶ್ರೀನಿವಾಸ್ ಅವರೇ ನಿರ್ಮಾಪಕ. ಕಿಲಾಡಿ ಚಿತ್ರ ಭಯಂಕರ ಹಿಟ್ ಆಗಿದ್ದರಿಂದ ಶ್ರೀನಿವಾಸ್ ಮತ್ತೊಂದು ಚಿತ್ರ ನಿರ್ಮಿಸುವ ಉತ್ಸಾಹ ತೋರಿದ್ದಾರೆ ಅನ್ನೋದು ಜಗ್ಗೇಶ್ ವಿವರಣೆ. ಆದರೆ ಗಾಂಧಿನಗರದ ಸುದ್ದಿ ಪ್ರಕಾರ, ಕಿಲಾಡಿಯಲ್ಲಿ ಅಸಲು ವಾಪಸ್ಸಾಗದೇ ಇದ್ದುದರಿಂದ ಶ್ರೀನಿವಾಸ್ ಇನ್ನೊಂದು ಚಿತ್ರ ನಿರ್ಮಿಸುತ್ತಿದ್ದಾರೆ. ಬೇರೆ ಕನ್ನಡ ಚಿತ್ರ ಸಿಗದೇ ಇದ್ದುದರಿಂದ ಕಿಲಾಡಿಯನ್ನೇ ಮುಂದುವರಿಸಬೇಕಾಯಿತು ಎಂದು ತ್ರಿವೇಣಿ ಥಿಯೇಟರ್ ಮಾಲಿಕರು ಹೇಳಿದ್ದಾರೆ ಅನ್ನುವ ಸುದ್ದಿಗೆ ಆಧಾರವಿಲ್ಲ .
ಇಂಥ ಆರೋಪಗಳನ್ನೆಲ್ಲಾ ಎಡಗೈನಲ್ಲಿ ತಳ್ಳಿಹಾಕುವ ವಿದ್ಯೆ ಜಗ್ಗೇಶ್‌ಗೆ ಗೊತ್ತು . ಉದಾಹರಣೆಗೆ ಇ್ತತೀಚೆಗೆ ಜಗ್ಗೇಶ್ ಚಿತ್ರಗಳು ಕಡಿಮೆಯಾಗ್ತಾ ಇವೆಯಲ್ಲಾ ಎಂದು ಗೊಣಗಿದರೆ ಸಾಕು ಅವರ ಬಳಿ ಸಿದ್ಧ ವಿವರಣೆ ಇದೆ.
ಅಸಂಖ್ಯ ಅವಕಾಶಗಳು ಬರ್ತಾ ಇವೆ ಸ್ವಾಮಿ. ಆದ್ರೆ ನಾನು ಒಪ್ಪಿಕೊಳ್ತಾ ಇಲ್ಲ. ನನ್ನ ಒಂದು ಚಿತ್ರಕ್ಕೆ ಇನ್ನೊಂದು ಸಿನಿಮಾ ಕಾಂಪಿಟಿಟರ್ ಆಗಬಾರದು. ಉಪೇಂದ್ರ, ವಿಷ್ಣುವರ್ಧನ್ ಮಾಡ್ತಾ ಇರೋದು ಇದನ್ನೇ. ವರ್ಷಕ್ಕೆರಡು ಚಿತ್ರ ಮಾಡ್ತಿದ್ದಾರೆ. ಅದಕ್ಕೇ ಡಿಮ್ಯಾಂಡ್‌ನಲ್ಲಿದ್ದಾರೆ. ಸಪ್ಲೈ ಜಾಸ್ತಿಯಾದರೆ ಡಿಮ್ಯಾಂಡ್ ಕಡಿಮೆ ಅನ್ನೋ ಇಕನಾಮಿಕ್ಸನ್ನು ಜಗ್ಗೇಶ್ ಚಿತ್ರರಂಗಕ್ಕೂ ತಂದಿದ್ದಾರೆ.
ಆನ್ ದಿ ರೆಕಾರ್ಡ್ ಜಗ್ಗೇಶ್ ಅವರ ಮುಖ್ಯ ಶತ್ರುವೆಂದರೆ ಟೀವಿ ಚಾನೆಲ್‌ಗಳು. ಇದರಿಂದಾಗಿ ಶೇ.70ರಷ್ಟು ಸಿನಿಮಾ ಪ್ರೇಕ್ಷಕರು ಟೀವಿ ವೀಕ್ಷಕರಾಗಿದ್ದಾರೆ. ಎರಡನೆಯ ಶತ್ರು ಪರಭಾಷಾ ಚಿತ್ರಗಳು. ಈಗ ಅಚ್ಚ ಕನ್ನಡಿಗರೇ ಮೊಹಬ್ಬತೇಯಂಥ ಹಿಂದಿ ಸಿನಿಮಾಗಳನ್ನು ನೋಡುತ್ತಿದ್ದಾರೆ. ಅದಹಾಗೆ ಜಗ್ಗೇಶ್ ಅವರ ಹೊಸಚಿತ್ರಕ್ಕೆ ನಿರ್ದೇಶಕರಾಗಿರುವವರು ತಮಿಳಿನ ವಿಮಲ್.
ವೈಯಕ್ತಿಕವಾಗಿ ಹೇಳುವುದಾದಲ್ಲಿ ಅವರ ಮೂರನೇ ಶತ್ರುವೆಂದರೆ ಅವರ ಹೈಟು ಮತ್ತು ಕಲರ್. ಐದಡಿ ಆರಿಂಚು ಎತ್ತರವಿರುವುದರಿಂದ ನಾಯಕಿಯರು ಸಿಗುತ್ತಿಲ್ಲ . ಅವರ ಸಲುವಾಗಿ ಹೈ ಹೀಲ್ಡ್ ಧರಿಸಿದ್ದು ಕಾಲಿಗೇ ಮುಳುವಾಗಿದೆ. ಹಾಗಿದ್ದೂ ಜಗ್ಗೇಶ್ ಚಿತ್ರಕ್ಕೆಂದೇ ಮೀಸಲಾಗಿರುವ ಪ್ರೇಕ್ಷಕ ವರ್ಗವಿದೆ. ಅದನ್ನು ಕಿತ್ತುಕೊಳ್ಳುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ.
ಆಫ್ ದಿ ರೆಕಾರ್ಡ್ ಜಗ್ಗೇಶ್‌ಗೆ ಇನ್ನಷ್ಟು ವೈರಿ ಕಾಟವಿದೆ. ತಾನೊಬ್ಬ ಶೂದ್ರನಾಗಿರುವುದರಿಂದ ಬೆಳೆಯುವುದಕ್ಕೆ ಸಾಧ್ಯವಾಗಿಲ್ಲ . ಎಲ್ಲೆಲ್ಲೂ ಜಾತಿ ಕಾಟಾಂತ ಸಿನಿಮಾ ರಂಗಕ್ಕೆ ಬಂದರಂತೆ. ಇಲ್ಲೂ ಅದೇ ಶಾಪವಾಗಿದೆ ಅನ್ನೋದು ಅವರ ದುಃಖ. ವಿಶ್ವಾಮಿತ್ರನ ಥರ ತಪಸ್ಸು ಮಾಡಿ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳನ್ನು ಒಲಿಸಿಕೊಂಡಿದ್ದಂತೂ ಆಗಿದೆ, ಮಂತ್ರಗಳನ್ನೂ ಕಂಠಪಾಠ ಮಾಡಿಕೊಂಡಿದ್ದಾರೆ.
ಸಂಗೀತ, ವಾಸ್ತು, ಜ್ಯೋತಿಷ್ಯ, ಮಂತ್ರ, ತಂತ್ರ ಹೀಗೆ ಜಗ್ಗೇಶ್ ಕಲಿಯದ ವಿದ್ಯೆಯೇ ಇಲ್ಲ. ಅವರು ಕಂಪ್ಯೂಟರ್‌ನಲ್ಲೂ ಜ್ಞಾನಾರ್ಜನೆ ಮಾಡುತ್ತಿದ್ದಾರೆ ಎಂದು ಹಿಂದೊಮ್ಮೆ ವರದಿಯಾಗಿತ್ತು . ತೋಳ್ಬಲದಲ್ಲೂ ತನ್ನನ್ನು ಮೀರಿಸಿದವರಿಲ್ಲ ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಾಳೆ ನಾಡಿದ್ದರಲ್ಲಿ ಅವರು ಶತ ಚಿತ್ರಗಳ ನಟನಾಗಲಿದ್ದಾರೆ. ಅವರ ಚಿತ್ರಗಳೂ ಅವರೇ ಹೇಳುವಂತೆ ಯಾವತ್ತೂ ಸೋತಿಲ್ಲ . ಹಾಗಿದ್ದೂ ಈ ಕೊರಗೇಕೆ. ;?
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications