»   » ಕಾಂಗ್ರೆಸ್‌ ಪಕ್ಷದ ಕಾರ್ಯದರ್ಶಿಯಾದ ನಂತರ ಜಗ್ಗೇಶ್‌ ಹೆಚ್ಚು ಗಟ್ಟಿಯಾದಂತಿದ್ದಾರೆ.

ಕಾಂಗ್ರೆಸ್‌ ಪಕ್ಷದ ಕಾರ್ಯದರ್ಶಿಯಾದ ನಂತರ ಜಗ್ಗೇಶ್‌ ಹೆಚ್ಚು ಗಟ್ಟಿಯಾದಂತಿದ್ದಾರೆ.

Posted By: Super
Subscribe to Filmibeat Kannada

ಉಪೇಂದ್ರ ರಿಯಲ್‌ಸ್ಟಾರ್‌ ಅಲ್ಲ ! ಮೂರು ಸಿನಿಮಾ ಮಾಡಿದ ಮಾತ್ರಕ್ಕೆ ರಿಯಲ್‌ ಸ್ಟಾರ್‌ ಎನ್ನಲಿಕ್ಕಾಗ್ತದಾ? ನಿಜವಾದ ರಿಯಲ್‌ಸ್ಟಾರ್‌ಗಳೆಂದರೆ ರಾಜ್‌ಕುಮಾರ್‌ ಹಾಗೂ ವಿಷ್ಣುವರ್ಧನ್‌ ಮಾತ್ರ. ನೈಂಟಿಫೈವ್‌ ಪ್ಲಸ್‌ ಸಿನಿಮಾಗಳ ಜಗ್ಗೇಶ್‌ ಯರ್ರಾಬಿರ್ರಿ ರಾಂಗಾಗಿದ್ದರು. ತಾವು21 ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಇರುವುದಾಗಿ ಹೇಳಿಕೊಂಡರು. ಗಜಗರ್ಭದ ನಂತರ ತೆರೆಕಂಡ ರುಸ್ತುಂ ಬಿಡುಗಡೆಯ ದಿನ ಜಗ್ಗೇಶ್‌ ಮಾತಿಗೆ ಸಿಕ್ಕಿದ್ದರು. ಸಿನಿಮಾ ತೆರೆಕಂಡ ದಿನವಾದರೂ ಅವರು ಮಾತನಾಡಿದ್ದೆಲ್ಲ ರುಸ್ತುಂ ಹೊರತಾಗಿಯೇ.

ರಿಯಲ್‌ಸ್ಟಾರ್‌ ಬಿರುದು ಕುರಿತು ಮಾತನಾಡತೊಡಗಿದ ಅವರು, ಯಾವುದೇ ನಟ ಜಾತಿ ಹಿನ್ನೆಲೆಯಲ್ಲಿ ಗೆಲ್ಲುತ್ತಾನೆ ಅನ್ನುವುದನ್ನು ತಾವು ನಂಬುವುದಿಲ್ಲ . ಬೇರೆಯವರ ಹಣ ಬಳಸಿಕೊಂಡು ಬೆಳೆಯುವುದೂ ಒಳ್ಳೆಯ ನಡವಳಿಕೆಯಲ್ಲ ಎಂದರು. ಅದು ಬೇರೆಯವರನ್ನು ಕುರಿತ ಮಾತೋ, ಆತ್ಮಾವಲೋಕನವೋ ಸ್ಪಷ್ಟವಾಗಲಿಲ್ಲ . ಜಗ್ಗೇಶ್‌ ವಾಕ್‌ಧಾರೆಯಲ್ಲಿ ಪ್ರಶ್ನೆಗಳಿಗೆ ಅವಕಾಶವಿರಲಿಲ್ಲ .

ಜಗ್ಗೇಶ್‌ ಹೆಚ್ಚು ಜಾಲಾಡಿದ್ದು ನಟೀಮಣಿ ರವಳಿ ಜಾತಕವನ್ನು . ಜಿಪುಣ ನನ್ನ ಗಂಡ ಸಿನಿಮಾದ ಶೂಟಿಂಗ್‌ ಸಮಯದಲ್ಲಿ ಆಯಮ್ಮ ನೀಡಿದ ಕಿರಿಕಿರಿಗಳನ್ನು , ಬೆಂಗಳೂರಿನ ಹೊಟೇಲ್‌ ರೂಂನಿಂದ ಆಕೆ ಮಾಡಿದ ದುಬಾರಿ ಫೋನ್‌ ಕಾಲ್‌ಗಳನ್ನು ಕುರಿತು ಕಿಡಿ ಕಾರಿದರು. ಅಂಥಾ ನಟಿಯನ್ನು ಗೌರವಿಸುವುದಾದರೂ ಹೇಗೆ? ಆಕೆಯನ್ನು 30 ದಿನಗಳ ಕಾಲ ಸಹಿಸಿಕೊಳ್ಳುವುದೆಂದರೆ ತಮಾಷೆಯಾ ಎಂದು ತಮ್ಮ ತಾಳ್ಮೆಗೆ ಸರ್ಟಿಫಿಕೇಟ್‌ ಕೊಟ್ಟುಕೊಂಡರು.

ರವಳಿ ನಂತರ ಜಗ್ಗೇಶ್‌ ಫಿರಂಗಿ ತಿರುಗಿದ್ದು ಉದಯ ಟೀವಿ ಹಾಗೂ ರವಿಚಂದ್ರನ್‌ ಅವರತ್ತ . ಉದಯ ನನ್ನ ಕೆರಿಯರ್‌ ಹಾಳುಮಾಡಲು ಶಪಥ ಮಾಡಿದೆಯಂತೆ. ಶುರುವಿನಲ್ಲಿ ತನ್ನ ಬಳಿ ಇದ್ದ 40 ಚಿಲ್ಲರೆ ಸಿನಿಮಾಗಳಲ್ಲಿ ಉದಯ ಟೀವಿ ಹೆಚ್ಚು ಬಳಸಿದ್ದು ನನ್ನ ಕ್ಲಿಪ್ಪಿಂಗ್‌ಗಳನ್ನೇ. ಈಗ ನನ್ನ ತಾಕತ್ತಿನ ಬಗ್ಗೆ ಮಾತನಾಡಲು ಹೊರಟಿದೆ.

ಹೀಗೆಲ್ಲ ಯಾಕೆ ಮಾಡಬೇಕು?
ಅವರಿಗೆ ಕಡಿಮೆ ರೇಟಿಗೆ ನನ್ನ ಸಿನಿಮಾಗಳ ಹಕ್ಕು ಬೇಕು. ಈ ಮುನ್ನ ನಾನು ಉದಯ ಟೀವಿ ಕಾರ್ಯಕ್ರಮಗಳಲ್ಲಿ ಉಚಿತವಾಗಿ ಭಾಗವಹಿಸಿದ್ದೇನೆ. ಸಾಧು ಕೋಕಿಲಾ ಅರ್ಧ ಗಂಟೆಯ ಕಾರ್ಯಕ್ರಮಕ್ಕೆ 25 ಸಾವಿರ ರುಪಾಯಿ ಚಾರ್ಜು ಮಾಡುತ್ತಾರಂತೆ. ನಮ್ಮ ಜನಪ್ರಿಯತೆಯನ್ನು ಬಳಸಿಕೊಂಡು ಅವರು ಹಣ ಮಾಡುತ್ತಾರೆ. ರುಸ್ತುಂ ಸಿನಿಮಾದ ಹಕ್ಕುಗಳನ್ನು ಉದಯ ಟೀವಿ 14 ಲಕ್ಷ ರುಪಾಯಿಗಳಿಗೆ ಕೇಳಿತು. ಆದರೆ, ಈ ಟೀವಿ 20 ಲಕ್ಷ ರುಪಾಯಿಗಳ ಆಫರ್‌ ಮುಂದಿಟ್ಟಿದೆ. ಅವರು ನನ್ನ ತಾಕತ್ತು ಗುರ್ತಿಸಿದ್ದಾರೆ... ಜಗ್ಗೇಶ್‌ ಮಾತು ಮುಂದುವರಿಯುತ್ತಲೇ ಇತ್ತು .

ತಮ್ಮ ವಿರುದ್ಧ ಸಂಚು ಹೂಡಿರುವ ಉದಯ ಟೀವಿಯಾಂದಿಗೆ ದಾವಣಗೆರೆಯಲ್ಲಿ ಏಕಾಂಗಿ ಕಾರ್ಯಕ್ರಮ ಏರ್ಪಡಿಸಿರುವುದಕ್ಕಾಗಿ ರವಿಚಂದ್ರನ್‌ ಬಗೆಗೂ ಜಗ್ಗೇಶ್‌ ಸಿಟ್ಟು ಕಾರಿಕೊಂಡರು. ಅಂದಹಾಗೆ, ತನ್ನನ್ನು ಫಿನಿಶ್‌ ಮಾಡುವ ಉದಯ ಟೀವಿಯ ಶಪಥ ಜಗ್ಗೇಶ್‌ ಕಿವಿಗೆ ಬಿದ್ದಿದ್ದು ಈ ಟೀವಿ ಮೂಲಕವಂತೆ. ಅಂದರೆ, ಇದನ್ನು ಚಾನಲ್‌ಗಳ ವಾರ್‌ ಎನ್ನಬಹುದಾ!?

English summary
Upendra is not a real star, says Jaggesh

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada