»   » ಈ ಸಂತೋಷಕ್ಕೆ ಅವರು ಲೆಕ್ಕಾಚಾರ ಕಲಿತಿರುವುದೂ,

ಈ ಸಂತೋಷಕ್ಕೆ ಅವರು ಲೆಕ್ಕಾಚಾರ ಕಲಿತಿರುವುದೂ,

Posted By: Super
Subscribe to Filmibeat Kannada

ಇಪ್ಪತ್ತೊಂದು ವರ್ಷಗಳ ವೃತ್ತಿ ಬದುಕಲ್ಲಿ ಮೊದಲನೇ ಬಾರಿ ಜಗ್ಗೇಶ್‌ ನಟಿಸಿದ ಚಿತ್ರವೊಂದು ಶತದಿನಗಳ ಪ್ರದರ್ಶನ ಕಂಡಿದೆ. ಅದೇ 'ಜಿಪುಣ ನನ್ನ ಗಂಡ". ಬೆಂಗಳೂರಿನ 'ಸ್ವಪ್ನ ಮಿನಿ ಥಿಯೇಟರ್‌"ನಲ್ಲಿ ಈ ಬುಧವಾರಕ್ಕೆ ಚಿತ್ರಕ್ಕೆ ನೂರು ತುಂಬಿದೆ.

ಉದ್ಯಮ ಮಾತ್ರ 'ಜಿಪುಣ ನನ್ನ ಗಂಡ"ದ ಯಶಸ್ಸನ್ನು ಒಪ್ಪಿಕೊಳ್ಳುತ್ತಿಲ್ಲ . ಯಾಕೆಂದರೆ ಸ್ವಪ್ನ ಮಿನಿ ಥಿಯೇಟರ್‌ ಆಗಿರುವುದರಿಂದ ಮಾಮೂಲು ಚಿತ್ರವೂ ಅಲ್ಲಿ ಆರಾಮಾಗಿ 50 ದಿನ ಓಡುತ್ತದೆ. 'ಜಿಪುಣ ನನ್ನ ಗಂಡ "ಚಿತ್ರ ಅಭಿನಯ್‌ ಥಿಯೇಟರ್‌ನಲ್ಲಿ ಎರಡನೇ ವಾರಕ್ಕೇ ನೆಲಕಚ್ಚಿದಾಗ ಅದನ್ನು ಸ್ವಪ್ನಾಗೆ ವರ್ಗಾಯಿಸಲಾಯಿತು ಮತ್ತು ಜಗ್ಗೇಶ್‌ ಒತ್ತಾಯದ ಮೇರೆಗೆ ಅದು ಸೆಂಚುರಿ ಬಾರಿಸಿತು ಎಂದು ಜಗ್ಗೇಶ್‌ ವಿರೋಧಿಗಳು ಕುಹಕವಾಡುತ್ತಿದ್ದಾರೆ.

ಜಗ್ಗೇಶ್‌ಗೆ ಸಿಟ್ಟು ಬರೋದು ಇಂಥಾ ಮಾತು ಕೇಳಿದಾಗ. ಅವರ ಪ್ರಕಾರ ಸ್ವಪ್ನ ಚಿತ್ರಮಂದಿರದ ಗಾತ್ರ, ಸಾಮರ್ಥ್ಯ ಏನೇ ಇರಬಹುದು, ಅಲ್ಲಿ ವಾರಕ್ಕೆ 4 ಲಕ್ಷ ಷೇರು ಬರುತ್ತದೆ. ದೊಡ್ಡ ಚಿತ್ರಮಂದಿರಗಳಲ್ಲಿ ಬಂದಿದ್ದೆಲ್ಲಾ ಬಾಡಿಗೆಗೆ ಸರಿಹೋಗುತ್ತದೆ. ಪುಟ್ಟ ಥಿಯೇಟರ್‌ ಆದರೇನು ಜಿಪುಣ ನನ್ನ ಗಂಡ ಚಿತ್ರದ ಒಟ್ಟಾರೆ ಗಳಿಕೆ 1 ಕೋಟಿಗೂ ಮೀರಿದೆ ಎಂದು ಜಗ್ಗೇಶ್‌ ವಾದಿಸುತ್ತಾರೆ.

ಇಂಥಾ ಅಂಕಿ ಅಂಶಗಳ ಮೂಲಕ ತಾವಿನ್ನೂ ಓಡುವ ಕುದುರೆ ಎಂದು ಸಾಬೀತು ಪಡಿಸುವಲ್ಲಿ ಜಗ್ಗೇಶ್‌ ನಿಜಕ್ಕೂ ನಿಪುಣನೇ ಸರಿ. ಜಿಪುಣ ನನ್ನ ಗಂಡ ಚಿತ್ರವನ್ನು ಅವರೇ ಹಂಚಿಕೆ ಮಾಡಿದ್ದಾರೆ. ಆ ಮೂಲಕ ಚಿತ್ರಮಂದಿರಗಳಲ್ಲಾಗುವ ಸೋರಿಕೆಯನ್ನೂ ತಡೆಗಟ್ಟಿದ್ದಾರಂತೆ. ಬಾಂಬೆ ಕರ್ನಾಟಕದಲ್ಲಿ ಕನ್ನಡ ಚಿತ್ರಗಳು ಯಶಸ್ಸು ಕಾಣುವುದೇ ಇಲ್ಲ ಅನ್ನುವ ಹಂಚಿಕೆದಾರರ ವಾದವೇ ಸುಳ್ಳು ಅನ್ನೋದೂ ಅವರಿಗೆ ಗೊತ್ತಾಗಿದೆ. ಕೆಲವೆಡೆ ಬೆದರಿಕೆ ತಂತ್ರವನ್ನೂ ಪ್ರಯೋಗಿಸಿದ್ದಾರಂತೆ.

'ಗಂಡ " ಚಿತ್ರದ ನಂತರ ಜಗ್ಗೇಶ್‌ ಕ್ಯಾಮರಾ ಎದುರಿಸಿಲ್ಲ . ಅಂದರೆ ಸುಮಾರು 6 ತಿಂಗಳು ಅವರು ಮನೆವಾಸದಲ್ಲೇ ಇದ್ದರು. ಅದಕ್ಕೆ ಕಾರಣ ಅವರ ಎಡಗಾಲಿನ ಹಿಮ್ಮಡಿಗೆ ಏಟಾಗಿದ್ದು . ಮನೆಯಲ್ಲಿ ತಮ್ಮ ಸೈಕಲ್‌ ಹಿಂದೆ ಓಡಾಡುತ್ತಿದ್ದ ಪಾಮರಿನ್‌ ನಾಯಿಯನ್ನು ದೂರ ಓಡಿಸುವುದಕ್ಕೆ ಪ್ರಯತ್ನ ಪಟ್ಟಿದ್ದೇ ನೆಪವಾಗಿ ಜಗ್ಗೇಶ್‌ ಕಾಲಿಗೇಟು ಮಾಡಿಕೊಂಡರು. ಅನಂತರ ಮೂರುವಾರ ಬೆಡ್‌ ರೆಸ್ಟ್‌.

ಈ ಮಧ್ಯೆ ಎಂಟು ಚಿತ್ರಗಳಿಗೆ ಆಫರ್‌ ಬಂದಿತ್ತು , ಅವೆಲ್ಲವೂ ಕೈ ಬಿಟ್ಟು ಹೋಯಿತು. ಈಗ ಮತ್ತೆ ಅವರು ರೆಡಿಯಾಗಿದ್ದಾರೆ. ಇದೇ ಆಗಸ್ಟ್‌ 24 ರಂದು ಅವರ ಹೊಸಚಿತ್ರ 'ರುಸ್ತುಂ" ಸೆಟ್ಟೇರಲಿದೆ. ಎಂದಿನಂತೆ ಅವರ ಭಾವ ಶ್ರೀನಿವಾಸ್‌ ಅವರೇ ನಿರ್ಮಾಪಕರು. ಅದಾದ ನಂತರ ರಾಕ್‌ಲೈನ್‌ ನಿರ್ಮಾಣದ ರೀಮೇಕ್‌ ಚಿತ್ರ. ಅ್ಲಲಿ ಜಗ್ಗೇಶ್‌ ಜೊತೆ ಶಿವಣ್ಣ ಅವರೂ ನಾಯಕ.

ಈ ಮಧ್ಯೆ ರಾಜಕೀಯಕ್ಕೆ ಬರುವ ಜಗ್ಗೇಶ್‌ ಆಸೆ ಇನ್ನೂ ಜೀವಂತವಾಗಿದೆ. ಮೊನ್ನೆಯಷ್ಟೇ ವಿಧಾನ ಪರಿಷತ್‌ ಸದಸ್ಯರಾಗಲು ಇನ್ನಿಲ್ಲದ ಪ್ರಯತ್ನ ನಡೆಸಿ ವಿಫಲರಾದ ಜಗ್ಗೇಶ್‌ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ. ಈ ಮಧ್ಯೆ ಅವರ ವಾಸ್ತು ಸಂಶೋಧನೆ, ಜ್ಯೋತಿಶ್ಯಾಸ್ತ್ರ ಕಲಿಕೆ, ಸಂಗೀತಾಭ್ಯಾಸ, ಸಮಾಜಸೇವೆ ಇತ್ಯಾದಿಗಳು ಅನಿರ್ಬಂಧಿತವಾಗಿ ಮುಂದುವರಿದಿವೆ.

English summary
Jipuna Nanna Ganda hits century

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada