»   » ಹುಟ್ಟುಹಬ್ಬ ಆಚರಿಸಿಕೊಳ್ಳುವ ವ್ಯಕ್ತಿ ಕನಸು ಕಾಣುವುದು ಲೋಕಾರೂಢಿ.

ಹುಟ್ಟುಹಬ್ಬ ಆಚರಿಸಿಕೊಳ್ಳುವ ವ್ಯಕ್ತಿ ಕನಸು ಕಾಣುವುದು ಲೋಕಾರೂಢಿ.

Posted By: Staff
Subscribe to Filmibeat Kannada

'ನಾನೇನೂ ಟಾಟಾ ಅಥವಾ ಬಿರ್ಲಾ ಅಲ್ಲ . ಅಂದಮಾತ್ರಕ್ಕೆ ಸುಮ್ಮನಿರುವವನೂ ಅಲ್ಲ . ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸಮಾಜಸೇವೆ ಮಾಡಿಯೇ ಮಾಡುತ್ತೇನೆ!" ಜಗ್ಗೇಶ್‌ ಹುಟ್ಟುಹಬ್ಬದ ಖುಷಿಯಲ್ಲಿದ್ದರು. ನಲವತ್ತನೇ ಹುಟ್ಟುಹಬ್ಬ; ಆ ಸಂಭ್ರಮ ಆಚರಿಸಲು 40 ಕಿಲೋ ತೂಕದ ಕೇಕ್‌! ಸಂಗಾತಿ ಪರಿಮಳಾ ಹಾಗೂ ಎರಡನೇ ಮಗ ಜಗ್ಗೇಶ್‌ ಜೊತೆಯಲ್ಲಿದ್ದರು. ಹುಟ್ಟುಹಬ್ಬದ ಕಾರ್ಯಕ್ರಮ ನಡೆದದ್ದು ಪ್ರೆಸ್‌ಕ್ಲಬ್‌ನಲ್ಲಿ - ಮಾ.17 ರ ಭಾನುವಾರ.

ಹುಟ್ಟುಹಬ್ಬದ ನೆನಪು ಹಸಿರಾಗಿರಬೇಕು ಎನ್ನುವುದು ಜಗ್ಗೇಶ್‌ ಆಸೆ. ಅದಕ್ಕಾಗಿಯೇ ಅವರು ಆ ದಿನದಂದು ಬಡ ಬಗ್ಗರಿಗೆ ಅನುಕೂಲವಾಗುವಂತಹ ಯಾವುದಾದರೂ ಕೆಲಸ ಮಾಡುತ್ತಾರೆ. ಕಳೆದ ವರ್ಷ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಜನರಿಗೆ ಅನುಕೂಲವಾಗಲೆಂದು ಆಂಬುಲೆನ್ಸ್‌ ಕೊಡುಗೆ ನೀಡಿದ್ದರು. ಈ ಬಾರಿ ಆಂಬುಲೆನ್ಸ್‌ ನೀಡಿದ್ದು - ತವರಿನವರಿಗೆ- ತುರುವೇಕೆರೆಯ ಜನರಿಗೆ.

ನನ್ನ ಸಂಪಾದನೆಯಲ್ಲಿ ನೂರಕ್ಕೆ 20 ಭಾಗ ಸಮಾಜ ಸೇವೆಗೆ ಮೀಸಲು. ಇದರಲ್ಲೇನು ರಾಜಕೀಯ ಇಲ್ಲ . ನನ್ನ ಮುಂದಿನ ಹುಟ್ಟುಹಬ್ಬಕ್ಕೆ ಬೆಂಗಳೂರಿನ ಪೊಲೀಸ್‌ ಪಡೆಗೆ ಎರಡು ಚೀತಾ ವಾಹನ ನೀಡುತ್ತೇನೆ ಎಂದು ಜಗ್ಗೇಶ್‌ ಮುಂಗಡವಾಗಿ ಘೋಷಿಸಿದರು.

ಅನಿವಾಸಿ ಗೆಳೆಯರು ಸಮಾಜ ಸೇವೆ ಕಾರ್ಯಕ್ರಮಗಳಲ್ಲಿ ನನ್ನೊಂದಿಗೆ ಕೈಗೂಡಿಸಲು ಮುಂದೆ ಬಂದಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಬಯಸುವ ನನ್ನ ಗೆಳೆಯರು ಹಾಗೂ ಅಭಿಮಾನಿಗಳಿಗೆ ತಮ್ಮದೇ ಆದ ಸ್ವಂತ ಹಾದಿಯಲ್ಲಿ ಚಿಂತಿಸುವಂತೆ ನಾನು ಹೇಳುತ್ತೇನೆ. ಆಗಷ್ಟೇ ಸುಂದರ ಸಮಾಜವನ್ನು ರೂಪಿಸಲು ಸಾಧ್ಯ ಎಂದರು ಜಗ್ಗೇಶ್‌. ಅವರ ಚಿಂತನಾ ಲಹರಿಗೆ ಹುಟ್ಟುಹಬ್ಬದ ಉತ್ಸಾಹವಿತ್ತು . ನೆನಪುಗಳ ಮೆಲುಕಿನ ಹಿನ್ನೆಲೆಯಿತ್ತು .

ನನ್ನ ಜೀವನದಲ್ಲಿ ಘಟನೆಗಳೆಲ್ಲವೂ ವೇಗವಾಗಿ ನಡೆದವು. ಇಪ್ಪತ್ತನೇ ವಯಸ್ಸಿಗೇ ಮದುವೆಯಾಯಿತು. ಉದ್ಯಮದಲ್ಲಿ ಸೋಲು- ಯಶಸ್ಸು ಬೇಗನೇ ಸಿಕ್ಕವು. ನಾನು ಅದೃಷ್ಟವಂತ ಎಂದು ಸಂತೋಷ ವ್ಯಕ್ತಪಡಿಸಿದ ಜಗ್ಗೇಶ್‌, ತಮ್ಮ ಯಶಸ್ಸಿನಲ್ಲಿ ಶೇ.25 ರಷ್ಟಕ್ಕೆ ಮಾಧ್ಯಮ ಪ್ರತಿನಿಧಿಗಳು ಕಾರಣ ಎಂದು ಧನ್ಯವಾದ ಅರ್ಪಿಸಿ, ಮಾಧ್ಯಮದ ಪ್ರತಿನಿಧಿಗಳಿಗೆ ಪುಳಕ ಉಂಟು ಮಾಡಿದರು.

ಇಪ್ಪತ್ತು ವರ್ಷಗಳ ಹಿಂದೆ- 300 ರುಪಾಯಿ ಸಂಪಾದಿಸಲಿಕ್ಕೆ ಹೆಣಗಾಡುತ್ತಿದ್ದೆ . ಆ ದಿನಗಳನ್ನು ಯಾವತ್ತಿಗೂ ಮರೆಯಲಿಕ್ಕೆ ಸಾಧ್ಯವಿಲ್ಲ . ಇವತ್ತು ನನ್ನ ಕುಟುಂಬಕ್ಕೆ ಸಾಕಾಗಿ ಮಿಕ್ಕುವಷ್ಟು ಸಂಪಾದನೆ ಇದೆ. ಈ ಸಂಪಾದನೆಯಲ್ಲಿ ಸಮಾಜಸೇವೆಗೂ ಪಾಲಿದೆ ಎಂದು ಭಾವುಕರಾಗಿ ಹೇಳಿದ ಜಗ್ಗೇಶ್‌- ಕಷ್ಟದ ದಿನಗಳಲ್ಲಿ 300 ರುಪಾಯಿ ನೆರವು ನೀಡಿದ ಕೆ.ವಿ.ರಾಜು ಅವರನ್ನು ನೆನಪಿಸಿಕೊಂಡರು. ರಾಜು ಅವರಿಗೆ ತಮ್ಮ ಹೃದಯದ ಮೂಲೆಯಲ್ಲೊಂದು ಸ್ಥಾನವಿದೆ ಎಂದು ಹೃದಯ ಮುಟ್ಟಿಕೊಂಡರು. ಹುಟ್ಟುಹಬ್ಬದ ದಿನ ಸಮಾಜ ಮುಖಿಯಾಗುವ ಜಗ್ಗೇಶ್‌ ನೂರು ಹುಟ್ಟುಹಬ್ಬ ಆಚರಿಸಿಕೊಳ್ಳಲಿ ಎಂದು ಹಾರೈಸೋಣವೇ..!

English summary
Jaggesh celebrates his birthday with social work

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada