'ಜೈಹನುಮಾನ್' ತೆಲುಗು ಸಿನಿಮಾ ಅಲ್ಲ, ಕನ್ನಡ ಸಿನಿಮಾ; ರಿಷಬ್ ಶೆಟ್ಟಿ
'ಕಾಂತಾರ'-1 ಬಳಿಕ ರಿಷಬ್ ಶೆಟ್ಟಿ ಸೈಲೆಂಟ್ ಆಗಿಬಿಟ್ಟಿದ್ದಾರೆ. ಸದ್ದಿಲ್ಲದೇ 'ಜೈಹನುಮಾನ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಪತ್ನಿ ಸಮೇತ ಕಾಣಿಸಿಕೊಂಡಿದ್ದ ಡಿವೈನ್ ಸ್ಟಾರ್ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮುಂದಿನ ಯೋಜನೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಶಾಂತ್ ವರ್ಮಾ ನಿರ್ದೇಶನದ 'ಜೈಹನುಮಾನ್' ತೆಲುಗು ಅಲ್ಲ ಕನ್ನಡ ಸಿನಿಮಾ ಎಂದು ಹೇಳಿದ್ದಾರೆ. ಅದು ಹೇಗೆ ಎನ್ನುವುದನ್ನು ತಮ್ಮದೇ ಶೈಲಿಯಲ್ಲಿ ಹೇಳಿ ನಕ್ಕಿದ್ದಾರೆ. "ಕನ್ನಡ ಬಿಟ್ಟು ನಾವು ಎಲ್ಲೂ ಹೋಗಲ್ಲ. ಯಾರೋ ಕೇಳಿದ್ರು, 'ಜೈಹನುಮಾನ್' ತೆಲುಗು ಸಿನ್ಮಾ ಅಲ್ವಾ ಅಂತ.. ನಾನು ಇಲ್ಲ ಕನ್ನಡ ಸಿನ್ಮಾ ಅಂದೆ.. ಅದು ಹೆಂಗೆ ಅಂತ ಮರುಪ್ರಶ್ನೆ ಬಂತು. ಹೌದು ನಿರ್ಮಾಪಕರು, ನಿರ್ದೇಶಕರು ತೆಲುಗಿನವ್ರು.. ಹೀರೊ ನಾನು ಕನ್ನಡದವನು. ಹನುಮಂತ ಹಾಗೂ ನಾನು ಇಬ್ಬರೂ ಕನ್ನಡದವ್ರು.. ಹಾಗಾಗಿ ಕನ್ನಡ ಸಿನಿಮಾ ತಾನೇ ಎಂದೆ" ರಿಷಬ್ ಹೇಳಿರುವುದು ವೈರಲ್ ಆಗ್ತಿದೆ.

'ಜೈಹನುಮಾನ್' ಸಿನಿಮಾ ಯಾವ ಭಾಷೆಯಲ್ಲಿ ಚಿತ್ರೀಕರಣವಾಗುತ್ತದೆ ಎನ್ನುವ ಪ್ರಶ್ನೆಗೆ "ತೆಲುಗಿನವ್ರು ತೆಲುಗಿನಲ್ಲಿ ಮಾತನಾಡ್ತಾರೆ, ಕನ್ನಡದವ್ರು ಕನ್ನಡದಲ್ಲಿ ಮಾತನಾಡ್ತಾರೆ, ಹಿಂದಿಯವ್ರು ಹಿಂದಿಯಲ್ಲಿ ಮಾತನಾಡ್ತಾರೆ. ಒಟ್ಟಾರೆ ಪ್ಯಾನ್ ಇಂಡಿಯಾ ಸಿನಿಮಾ ಹಲವು ಭಾಷೆಗಳಲ್ಲಿ ಬರುತ್ತೆ. ಡಬ್ಬಿಂಗ್ ಮಾಡುವುದು ಸುಲಭವಾಗಿದೆ. ನಿರ್ದೇಶಕರಿಗೆ ಯಾವ ಭಾಷೆ ಬೇಕೋ ಆ ಭಾಷೆಯಲ್ಲಿ ಚಿತ್ರೀಕರಣ ಮಾಡ್ತಾರೆ" ಎಂದು ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಮೊಟ್ಟೆ ಮೊದ್ಲಾ ಕೋಳಿ ಮೊದ್ಲಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಕೊಟ್ರೆ ಜನ ನೋಡ್ತಿಲ್ವಾ, ಜನ ನೋಡ್ತಿದ್ದಾರೆ ಒಳ್ಳೆ ಸಿನಿಮಾ ಕೊಡ್ತಿಲ್ವಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಬಂದಾಗ ಜನ ನೋಡ್ತಾರೆ. 'ಸು ಫ್ರಂ ಸೋ' ಸಿನಿಮಾ ಬಂದಾಗ ಎಲ್ಲಾ ನುಗ್ಗಿ ನೋಡಿದ್ರು. ಜೆಪಿ ತುಮ್ಮಿನಾಡು ಹೊಸ ನಿರ್ದೇಶಕರು. ರಾಜ್ ಬಿಟ್ರೆ ಎಲ್ಲಾ ಹೊಸ ಕಲಾವಿದರೇ.. ಸಿನಿಮಾ ಇಷ್ಟವಾಗಿದ್ದಕ್ಕೆ ಜನ ನೋಡಿದ್ರು.. ಜನಪ್ರಿಯ ಕಲಾವಿದರು ಇದ್ದು ಜನ ನೋಡ್ಲಿಲ್ಲ ಅಂದ್ರೆ, ಸಿನಿಮಾ ಚೆನ್ನಾಗಿಲ್ಲ ಅಂತ ಅರ್ಥ.
ಮಲಯಾಳಂನಲ್ಲಿ 'ವಾಳಾ- 2', ತಮಿಳಿನಲ್ಲಿ 'ಯೂತ್' ಎನ್ನುವ ಸಿನಿಮಾಗಳು ಬಂತು.. ಅದು ಎಲ್ಲಿಂದ ಹೇಗೆ ಬಂತು ಗೊತ್ತಿಲ್ಲ. ನೋಡಿದ್ರೆ 200 ಕೋಟಿ ಕಲೆಕ್ಷನ್ ಆಯ್ತು.. ನಂಬರ್ ಅಲ್ಲ, ಅಷ್ಟು ಜನ ನೋಡಿದ್ರು ಎನ್ನುವುದು ಮುಖ್ಯ. ಓಟಿಟಿ ಬಂದಿದೆ ಅಂತ ಎಲ್ಲರೂ ಹೇಳ್ತಾರೆ. ಆದರೆ ಟಿವಿ ರೀತಿ ಈಗ ಓಟಿಟಿ ಕೂಡ ಹಳೇದಾಯ್ತು.. ಓಟಿಟಿಗೆ ಬೇಕಾದ ಕಂಟೆಂಟ್ ಸಿಕ್ತಿದೆ. ಚಿತ್ರಮಂದಿರಕ್ಕೆ ಬಂದು ಜನ ಸಿನಿಮಾ ನೋಡಲು ಏನು ಮಾಡಬೇಕು ಎನ್ನುವುದು ಮುಖ್ಯ. ಅಂತಿಮವಾಗಿ ಚಿತ್ರಮಂದಿರವೇ ಅಂತಿಮ ಎಂದು ರಿಷಬ್ ಶೆಟ್ಟಿ ವಿವರಿಸಿದ್ದಾರೆ.
ಸಣ್ಣ ಸಿನಿಮಾ ಆದರೆ ವರ್ಷಕ್ಕೆ ಒಂದು ಮಾಡಬಹುದು. ದೊಡ್ಡ ಸಿನಿಮಾ ಅಂದಾಗ ಅದಕ್ಕೆ ಬೇಕಾಗಿರುವುದು ಎಲ್ಲವೂ ಸಿಗಲು ತಡವಾಗುತ್ತದೆ. ನಾನು 'ಜೈಹನುಮಾನ್' ಚಿತ್ರದಲ್ಲಿ ನಟಿಸುವುದರ ಜೊತೆ ಎರಡು ಪ್ರಾಜೆಕ್ಟ್ ಸ್ಕ್ರಿಪ್ಟ್ ಮಾಡ್ತಿದ್ದೀನಿ. ಕೆಲವೊಮ್ಮೆ ಆಗುತ್ತೆ, ಕೆಲವೊಮ್ಮೆ ಆಗುವುದಿಲ್ಲ. 'ಕಾಂತಾರ' ಸಿನಿಮಾ ಒಂದೇ ವರ್ಷದಲ್ಲಿ ಕಥೆ ಬರೆದು, ಚಿತ್ರೀಕರಣ ಮಾಡಿ ರಿಲೀಸ್ ಮಾಡಿಬಿಟ್ಟೆವು. ಸಿನಿಮಾ ಆಗಬೇಕು ಮಾಡೋಕೆ ಆಗಲ್ಲ. 'ಕಾಂತಾರ-1' ನಾವು ಮಾಡಿದ ಸಿನಿಮಾ ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ.
ಬರಹಗಾರರನ್ನು ಕನ್ನಡ ಚಿತ್ರರಂಗದಲ್ಲಿ ಬೆಳೆಸುತ್ತಿಲ್ಲ. ಮೊದಲಿನಿಂದ ಅದೇ ತಪ್ಪು ಮಾಡಿದ್ದಕ್ಕೆ ಈಗ ಪರಿಸ್ಥಿತಿ ಈ ರೀತಿಯಾಗಿದೆ. ಬೆಂಗಳೂರಿನ ಬರಹಗಾರರು ಈಗ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಬರಹಗಾರರನ್ನು ಬೆಳೆಸುತ್ತಿದ್ದೇವೆ.


Click it and Unblock the Notifications