Rajinikanth: ಜಯನಗರ BMTC ಡಿಪೋದಲ್ಲಿ ಸೂಪರ್ ಸ್ಟಾರ್ ದಿಢೀರ್ ಪ್ರತ್ಯಕ್ಷ: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಸಿನಿಮಾ ರಿಲೀಸ್‌ಗೂ ಮೊದಲೇ ಉತ್ತರ ಭಾರತ ಪ್ರವಾಸ ಕೈಗೊಂಡಿದ್ದ ರಜನಿಕಾಂತ್ ಕಳೆದ ವಾರವಷ್ಟೇ ಚೆನ್ನೈಗೆ ವಾಪಸ್ ಆಗಿದ್ದರು. ಇದೀಗ ದಿಢೀರನೇ ಬೆಂಗಳೂರಿಗೆ ಬಂದಿದ್ದಾರೆ. ಜಯನಗರ ಬಿಎಂಟಿಸಿ ಡಿಪೋಗೆ ದಿಢೀರ್ ಭೇಟಿ ಕೊಟ್ಟಿದ್ದಾರೆ.
ರಜನಿಕಾಂತ್ ಆಗಿಂದಾಗ್ಗೆ ಬೆಂಗಳೂರಿಗೆ ಭೇಟಿ ನೀಡುತ್ತಿರುತ್ತಾರೆ. ಸಹೋದರ ಸತ್ಯ ನಾರಾಯಣ ಮನೆಗೆ ಬರುತ್ತಿರುತ್ತಾರೆ. ಜೊತೆಗೆ ಹಳೇ ಸ್ನೇಹಿತರನ್ನು ಭೇಟಿ ಮಾಡುತ್ತಿರುತ್ತಾರೆ. ಆದರೆ ಇದ್ದಕ್ಕಿದಂತೆ ಜಯನಗರ ಬಿಎಂಟಿಸಿ ಡಿಪೋಗೆ ತಲೈವಾ ಬಂದಿದ್ದು ಎಲ್ಲರಿಗೂ ಅಚ್ಚರಿ ತಂದಿದೆ. ಇಂದು(ಆಗಸ್ಟ್ 29) ಬೆಳಗ್ಗೆ 11.30ರ ಸುಮಾರಿಗೆ ಬಸ್ ಡಿಪೋಗೆ ಬಂದ ತಲೈವಾ 15 ನಿಮಿಷಗಳ ಕಾಲ ಅಲ್ಲೇ ಇದ್ದರು. ಅಲ್ಲಿದ್ದ ಸಿಬ್ಬಂದಿಗಳ ಜೊತೆ ಮಾತನಾಡಿ ಡಿಪೋ ಒಳಗೆ ಸುತ್ತಾಡಿ ರಜನಿಕಾಂತ್ ತೆರಳಿದ್ದಾರೆ.

ತಲೈವಾ ದಿಢೀರ್ ಭೇಟಿಯಿಂದ ಬಿಎಂಟಿಸಿ ಸಿಬ್ಬಂದಿ ಖುಷಿಯಾಗಿದ್ದಾರೆ. ತಲೈವಾ ಜೊತೆ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಒಂದ್ಕಾಲದಲ್ಲಿ ಜಯನಗರ ಬಿಎಂಟಿಸಿ ಡಿಪೋದಲ್ಲಿ ಸೂಪರ್ ಸ್ಟಾರ್ ಕೆಲಸ ನಿರ್ವಹಿಸಿದ್ದರು. ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ದಶಗಳ ಹಿಂದೆ ಇದೇ ಜಯನಗರ ಡಿಪೋದಲ್ಲೇ ಕೆಲಸ ಮಾಡಿದ್ದರು. ಹಾಗಾಗಿ ತಾವು ಕೆಲಸ ನಿರ್ವಹಿಸಿದ್ದ ಡಿಪೋಗೆ ಭೇಟಿ ನೀಡಿ ರಜನಿಕಾಂತ್ ಸಂಭ್ರಮಿಸಿದ್ದಾರೆ. ಈ ವೇಳೆ ಸ್ನೇಹಿತ ರಾಜ್ ಬಹದ್ದೂರ್ ಸಹ ಶಿವಾಜಿರಾವ್ ಗಾಯಕ್‌ವಾಡ್ ಜೊತೆಗಿದ್ದರು.
ರಜನಿಕಾಂತ್ ದಶಕಗಳ ಹಿಂದೆ ಮೆಜೆಸ್ಟಿಕ್ ಮತ್ತು ಶ್ರೀನಗರ ನಡುವೆ ಸಂಚರಿಸುತ್ತಿದ್ದ ಬಸ್ ಸಂಖ್ಯೆ 10ಎರ ಕಂಡೆಕ್ಟರ್ ಆಗಿದ್ದರು. ಆಗ ಸ್ನೇಹಿತ ರಾಜ್ ಬಹದ್ದೂರ್ ಆ ಬಸ್ ಚಾಲಕರಾಗಿದ್ದರು. ಜಯನಗರ ಬಸ್ ಡಿಪೋ- 4ಕ್ಕೆ ಭೇಟಿ ನೀಡಿದ್ದ ರಜನಿಕಾಂತ್ ಅಲ್ಲಿನ ಮೆಕಾನಿಕ್, ಚಾಲಕರು, ಸಿಬ್ಬಂದಿ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಎಲ್ಲರ ಜೊತೆ ಕೆಲ ಹೊತ್ತು ಮಾತನಾಡಿದ್ದಾರೆ. ತಾವು ಕಂಡೆಕ್ಟರ್ ಆಗಿದ್ದ ದಿನಗಳನ್ನು ಮೆಲುಕು ಹಾಕಿದ್ದಾರೆ.
ಜಯನಗರ ಬಸ್ ಡಿಪೋಗೆ ಬರುವ ಮುನ್ನ ರಜನಿಕಾಂತ್ ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದಲ್ಲಿರುವ ರಾಘವೇಂದ್ರ ಮಠಕ್ಕೆ ಭೇಟಿ ನೀಡಿದ್ದರು. ತಲೈವಾ ಹಲವು ವರ್ಷಗಳಿಂದ ರಾಘವೇಂದ್ರ ಸ್ವಾಮಿ ಭಕ್ತರಾಗಿದ್ದಾರೆ. ಸಾಕಷ್ಟು ಬಾರಿ ಮಠಕ್ಕೆ ಭೇಟಿ ನೀಡಿದ್ದಾರೆ. ಮಠಕ್ಕೆ ಭೇಟಿ ನೀಡಿ ಅರ್ಚನೆ ಮಾಡಿಸಿ, ಪೂಜೆ ಸಲ್ಲಿಸಿ ಹೊರಟ್ಟಿದ್ದಾರೆ. ಜಯನಗರದಿಂದ ಗಾಂಧಿಬಜಾರ್‌ನಲ್ಲಿ ಸುತ್ತಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಕರ್ನಾಟಕದಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ.

ವಿಶ್ವದಾದ್ಯಂತ 'ಜೈಲರ್' ಸಿನಿಮಾ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಚಿತ್ರದಲ್ಲಿ ಶಿವರಾಜ್‌ಕುಮಾರ್ ಕೂಡ ನಟಿಸಿದ್ದು ಕರ್ನಾಟಕದಲ್ಲಿ 50 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ. ಇನ್ನು ಸಿನಿಮಾ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗಿದ್ದು ಕನ್ನಡ ವರ್ಷನ್ ಮಾತ್ರ 5 ಕೋಟಿ ರೂ. ಕಲೆಕ್ಷನ್ ಮಾಡಿರುವ ಅಂದಾಜಿದೆ. ಬಹಳ ವರ್ಷಗಳಿಂದ ಒಂದೊಳ್ಳೆ ಬ್ರೇಕ್‌ಗಾಗಿ ಕಾಯುತ್ತಿದ್ದ 'ತಲೈವಾ'ಗೆ ಸಕ್ಸಸ್ ತಂದುಕೊಟ್ಟಿದೆ.
ಇನ್ನು 'ಜೈಲರ್' ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲೂ ರಜನಿಕಾಂತ್ ಬೆಂಗಳೂರು ದಿನಗಳನ್ನು ನೆನಪಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ಕಂಡೆಕ್ಟರ್ ಆಗಿದ್ದ ಸಮಯದಲ್ಲಿ ಮಾಡಿದ ಒಂದು ನಾಟಕ ತಮ್ಮ ಜೀವನವನ್ನೇ ಬದಲಿಸಿತು ಎಂದಿದ್ದರು. ರಾಜ್ಯೋತ್ಸವ ಸಂಭ್ರಮದಲ್ಲಿ ನಡೆದ ನಾಟಕ ಕಾರ್ಯಕ್ರಮದಲ್ಲಿ ಅಚಾನಕ್ ಆಗಿ ದುರ್ಯೋಧನ ಪಾತ್ರದಲ್ಲಿ ನಟಿಸುವಂತಾಯಿತು. ಅಂದು ನನ್ನ ಅಭಿನಯ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು. ನಮ್ಮ ಕುಟುಂಬಸ್ಥರು ಸಂಭ್ರಮಿಸಿದ್ದರು.
ಆ ನಾಟಕ ಮುಗಿದ ಬಳಿಕ ಸ್ನೇಹಿತ ರಾಜ್ ಬಹದ್ದೂರ್ ಚಿತ್ರರಂಗಕ್ಕೆ ಹೋಗುವಂತೆ ಪ್ರೇರೇಪಿಸಿದ. ಹಾಗಾಗಿ ಮದ್ರಾಸ್‌ನಲ್ಲಿ ಆಕ್ಟಿಂಗ್ ಸ್ಕೂಲ್‌ಗೆ ಸೇರಿ ನಟನೆ ಕಲಿತು ಚಿತ್ರರಂಗಕ್ಕೆ ಬಂದೆ. ಇಂದು ನಿಮ್ಮ ಮುಂದೆ ನಿಂತಿದ್ದೀನಿ ಎಂದು ಹೇಳಿದ್ದರು.
.


Click it and Unblock the Notifications











