»   » ನಮ್ಮೂರು ಮೈಸೂರು.. ನೀವೆಲ್ಲ ನಮ್ಮೋರು ಎಂದವರು ಯಾರು?

ನಮ್ಮೂರು ಮೈಸೂರು.. ನೀವೆಲ್ಲ ನಮ್ಮೋರು ಎಂದವರು ಯಾರು?

Posted By: Staff
Subscribe to Filmibeat Kannada
Jamindaru cassette release
ಕಳೆದ ಭಾನುವಾರ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸಂಭ್ರಮವೋ ಸಂಭ್ರಮ. ತಾರೆಗಳೆಲ್ಲಾ ಒಂದೆಡೆ ಕಲೆತಿದ್ದರು. ಈ ತಾರೆಗಳ ಕಾಣಲು ನೂರಾರು.. ಸಾವಿರಾರು ಅಭಿಮಾನಿಗಳು. ಅದು ವಿಷ್ಣುವರ್ಧನ್‌ ದ್ವಿಪಾತ್ರದಲ್ಲಿ ನಟಿಸಿರುವ 'ಜಮೀನ್ದಾರ್ರು" ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ.

ವಿಷ್ಣು ಅಂದು ತುಂಬಾ ಭಾವುಕರಾಗಿದ್ದರು. ತೊದಲಿದರು. ನನಗೆ ಆನಂದ ಹೆಚ್ಚಾಗಿ ಮಾತುಗಳೇ ಹೊರಡುತ್ತಿಲ್ಲ ಎಂದು ಹೇಳಿಯೂ ಬಿಟ್ಟರು. ನನ್ನೂರು ಮೈಸೂರು, ನೀವೆಲ್ಲಾ ನಮ್ಮೋರು ಎಂದರು. ನೆನಪಿನ ಬುತ್ತಿಯಿಂದ ಸವಿನೆನಪುಗಳನ್ನು ಹೊರತೆಗೆದ ವಿಷ್ಣು, ಮೈಸೂರು ತಮಗೆ ನೀಡಿದ ಪ್ರೋತ್ಸಾಹ ಸ್ಮರಿಸಿದರು. ಅಭಿಮಾನಿಗಳಿಗೆ ಕೃತಜ್ಞತೆ ಅರ್ಪಿಸಿದರು.

ಎಸ್‌. ನಾರಾಯಣ್‌ ನಿರ್ದೇಶನದಲ್ಲಿ ಅದೂ ದ್ವಿಪಾತ್ರದಲ್ಲಿ 'ಜಮೀನ್ದಾರ್ರು" ಚಿತ್ರದಲ್ಲಿ ನಟಿಸುತ್ತಿರುವುದೇ ಒಂದು ಸೌಭಾಗ್ಯ ಎಂದರು. ಈ ವಿಷಯದಲ್ಲಿ ನಾರಾಯಣ್‌ ಕೂಡ ಹಿಂದೆ ಬೀಳಲಿಲ್ಲ. ತಾವು ಮಾತನಾಡುವಾಗ ವಿಷ್ಣುವರ್ಧನ್‌ರನ್ನು ಹಾಡಿ ಹೊಗಳಿದರು. ವಿಷ್ಣು ಅವರೊಂದಿಗೆ ಅರ್ಧ ಗಂಟೆ ಮಾತನಾಡಿದರೆ, ಐದು ಕತೆಗೆ ವಸ್ತು ಸಿಗತ್ತೆ. ಜಮೀನ್ದಾರ್ರು ಸೆಟ್‌ನಲ್ಲಿ ವಿಷ್ಣು ಅವರ ಅಭಿನಯ ನೋಡಿಯೇ ಡೈಲಾಗ್‌ ಬರೆದ ಬಗ್ಗೆ ನಾರಾಯಣ್‌ ಹೇಳಿದರು.

 'ಜಮೀನ್ದಾರ್ರು" ಗೆಟಪ್ಪಲ್ಲಿ ವಿಷ್ಣುವರ್ಧನ್‌ ಅವರನ್ನು ನೋಡಿ ಭಯ ಆಯ್ತು ಎಂದ ನಾರಾಯಣ್‌ ಬೆಟ್ಟಪ್ಪನ ಪಾತ್ರಕ್ಕೆ ವಿಷ್ಣು ಜೀವ ತುಂಬಿದ್ದಾರೆ ಎಂದರು. ಈ ಚಿತ್ರದ ಕಥೆಗೆ ವಿಷ್ಣು ಅವರೇ ಸ್ಫೂರ್ತಿ. ನನಗಿನ್ನೂ ಆಪಾತ್ರದಿಂದ ಹೊರಬರಲು ಸಾಧ್ಯವೇ ಆಗುತ್ತಿಲ್ಲ ಎಂದರು.

ಮಹಾರಾಜರ ಊರಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ರೆಬೆಲ್‌ಸ್ಟಾರ್‌ ಅಂಬರೀಶ್‌ 'ಜಮೀನ್ದಾರ್ರು" ಕ್ಯಾಸೆಟ್‌ ಅನ್ನೂ ಬಿಡುಗಡೆ ಮಾಡಿದರು. ಬೆಂಗಳೂರಿನ ಹೊರಗೆ ಕ್ಯಾಸೆಟ್‌ ಬಿಡುಗಡೆ ಸಮಾರಂಭ ಏರ್ಪಡಿಸಿರುವ ಮಾರ್ಸ್‌ ರಿರೆಕಾರ್ಡಿಂಗ್‌ ಸಂಸ್ಥೆಯನ್ನು ಪ್ರಶಂಸಿಸಿದರು.

ಝಗಮಗಿಸುವ ವೇದಿಕೆಯಲ್ಲಿ ವಿಷ್ಣುವರ್ಧನ್‌, ಪ್ರೇಮಾ, ತಾರಾ, ಎಸ್‌. ನಾರಾಯಣ್‌, ಅಂಬರೀಶ್‌, ಕಲ್ಯಾಣ್‌ರನ್ನು ಕಂಡು ಧನ್ಯರಾದ ಅಭಿಮಾನಿಗಳು ಡಾ. ಸಂಜಯ್‌ ಹಾಗೂ ತಂಡದವರು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮವನ್ನು ನೋಡಿ ಆನಂದಿಸಿದರು.

ಶ್ರೀಲಕ್ಷ್ಮೀ ಕಂಬೈನ್ಸ್‌ ಲಾಂಛನದಲ್ಲಿ ತಯಾರಾಗಿರುವ 'ಜಮೀನ್ದಾರ್ರು" ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ಮಾಪಕ ಕೆ. ಮಂಜು, ಮೈಸೂರು ಪೊಲೀಸ್‌ ಆಯುಕ್ತ ಚಂದ್ರಶೇಖರ್‌, ಮೈಸೂರು ಮಹಾಪೌರ ಬಿ.ಕೆ. ಪ್ರಕಾಶ್‌ ಮೊದಲಾದವರು ಪಾಲ್ಗೊಂಡಿದ್ದರು.

English summary
Vishnu and jamindaru team at palace city mysore

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada