ಬಾಲಿವುಡ್ ಗೆ ರಿಮೇಕ್ ಆಗುತ್ತಿರುವ 'ಡಿಯರ್ ಕಾಮ್ರೇಡ್' ನಲ್ಲಿ 'ಧಡಕ್' ಜೋಡಿ?
ಬಾಲಿವುಡ್ ಚಿತ್ರರಂಗ ಇತ್ತೀಚಿಗೆ ದಕ್ಷಿಣ ಭಾರತದ ಚಿತ್ರರಂಗದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ದಕ್ಷಿಣದಲ್ಲಿ ಸೂಪರ್ ಹಿಟ್ ಆದ ಸಾಕಷ್ಟು ಸಿನಿಮಾಗಳು ಹಿಂದಿಯಲ್ಲಿ ರಿಮೇಕ್ ಆಗುತ್ತಿವೆ. ಇತ್ತೀಚಿಗಷ್ಟೆ ವಿಜಯ್ ದೇವರಕೊಂಡ ಅಭಿನಯದ 'ಅರ್ಜುನ್ ರೆಡ್ಡಿ' ಸಿನಿಮಾ ಹಿಂದಿಗೆ ರಿಮೇಕ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದೆ.
ಇದರ ಬೆನ್ನಲ್ಲೆ ಈಗ ಮತ್ತೊಂದು ತೆಲುಗು ಸಿನಿಮಾ ಹಿಂದಿಗೆ ರಿಮೇಕ್ ಮಾಡಲು ಸಜ್ಜಾಗಿದೆ ಬಾಲಿವುಡ್. ಅದು ಕೂಡ ವಿಜಯ್ ದೇವರಕೊಂಡ ಸಿನಿಮಾ ಎನ್ನುವುದೇ ವಿಶೇಷ. ಹೌದು, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತಿರುವ 'ಡಿಯರ್ ಕಾಮ್ರೇಡ್' ಸಿನಿಮಾ ರಿಲೀಸ್ ಗು ಮೊದಲೆ ಹಿಂದಿಯಲ್ಲಿ ರಿಮೇಕ್ ಆಗಲು ಸಜ್ಜಾಗಿದೆ.
ಮೊನ್ನೆ ಮೊನ್ನೆಯಷ್ಟೆ ಬಾಲಿವುಡ್ ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ 'ಡಿಯರ್ ಕಾಮ್ರೇಡ್' ಹಿಂದಿಗೆ ರಿಮೇಕ್ ಆಗುವ ವಿಚಾರವನ್ನು ಬಹಿರಂಗ ಪಡಿಸಿದ್ದರು. ಆದ್ರೀಗ ಹೊಸ ವಿಷಯ ಅಂದ್ರೆ ಹಿಂದಿಯ 'ಡಿಯರ್ ಕಾಮ್ರೇಡ್' ಗೆ ನಾಯಕ ಮತ್ತು ನಾಯಕಿ ಫಿಕ್ಸ್ ಆಗಿದ್ದಾರೆ. ಬಾಲಿವುಡ್ ರೋಮ್ಯಾಂಟಿಕ್ ಜೋಡಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಇಶಾನ್ ಖಟ್ಟರ್ ಮತ್ತು ಜಾನ್ಹವಿ ಕಪೂರ್
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷೆಯ 'ಡಿಯರ್ ಕಾಮ್ರೇಡ್' ಸಿನಿಮಾ ಬಾಲಿವುಡ್ ಗೆ ರಿಮೇಕ್ ಆಗುತ್ತಿರುವುದು ಸಂತಸದ ವಿಚಾರವಾದ್ರೆ ಬಾಲಿವುಡ್ 'ಡಿಯರ್ ಕಾಮ್ರೇಡ್' ಸಿನಿಮಾದಲ್ಲಿ ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಮತ್ತು ಶಾಹಿದ್ ಕಪೂರ್ ಸಹೋದರ ಇಶಾನ್ ಖಟ್ಟರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಪಾತ್ರವನ್ನು ಇಶಾನ್ ನಿಭಾಯಿಸಿದ್ರೆ ರಶ್ಮಿಕಾ ಪಾತ್ರದಲ್ಲಿ ಜಾನ್ಹವಿ ಕಾಣಿಸಿಕೊಳ್ಳುತ್ತಿದ್ದಾರೆ.

ಎರಡನೇ ಭಾರಿ ಒಂದಾದ 'ಧಡಕ್' ಜೋಡಿ
ಇಶಾನ್ ಕಟ್ಟರ್ ಮತ್ತು ಜಾನ್ಹವಿ ಕಪೂರ್ ಇಬ್ಬರು ಎರಡನೇ ಬಾರಿಗೆ ಒಂದಾಗುತ್ತಿದ್ದಾರೆ. ಧಡಕ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಈ ಜೋಡಿ ಸಿನಿಮಾ ಸೂಪರ್ ಹಿಟ್ ಆಗದಿದ್ದರು ಈ ಜೋಡಿ ಮಾತ್ರ ಅಭಿಮಾನಿಗಳ ಮನಗೆದ್ದಿತ್ತು. ಜಾನ್ಹವಿ ಕಪೂರ್ ಅವರ ಚೊಚ್ಚಲ ಸಿನಿಮಾ ಇದಾಗಿತ್ತು. ಈ ಜೋಡಿ ಮತ್ತೆ ರೋಮ್ಯಾಂಟಿಕ್ ಸಿನಿಮಾ ಮೂಲಕ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಧಡಕ್ ನಂತರ ಈ ಜೋಡಿಯನ್ನು ತೆರೆಮೇಲೆ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ.

'ಅರ್ಜುನ್ ರೆಡ್ಡಿಯಲ್ಲಿ' ಅಣ್ಣ, 'ಡಿಯರ್ ಕಾಮ್ರೇಡ್' ನಲ್ಲಿ ತಮ್ಮ
ವಿಜಯ್ ದೇವರಕೊಂಡ ಅಭಿನಯದ ಅರ್ಜುನ್ ರೆಡ್ಡಿ ಸಿನಿಮಾದ ಹಿಂದಿ ರಿಮೇಕ್ ಕಬೀರ್ ಸಿಂಗ್ ಚಿತ್ರದಲ್ಲಿ ಶಾಹಿದ್ ಕಪೂರ್ ಮಿಂಚಿದ್ದರು. ಇತ್ತೀಚಿಗಷ್ಟೆ ರಿಲೀಸ್ ಆದ ಕಬೀರ್ ಸಿಂಗ್ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದ್ದಲ್ಲದೆ ಕೋಟಿ ಕೋಟಿ ಬಾಚಿಕೊಂಡಿದೆ. ಈಗ ವಿಜಯ್ ದೇವರಕೊಂಡ ಅಭಿನಯದ ಮತ್ತೊಂದು ಸಿನಿಮಾ 'ಡಿಯರ್ ಕಾಮ್ರೇಡ್' ಹಿಂದಿ ರಿಮೇಕ್ ನಲ್ಲಿ ಶಾಹಿದ್ ಕಪೂರ್ ಸಹೋದರ ಇಶಾನ್ ಖಟ್ಟರ್ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಕರಣ್ ಜೋಹರ್ ನಿರ್ಮಾಣ
ಹಿಂದಿಗೆ ರಿಮೇಕ್ ಆಗುತ್ತಿರುವ 'ಡಿಯರ್ ಕಾಮ್ರೇಡ್' ಸಿನಿಮಾವನ್ನು ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿದೆ. ಆದ್ರೆ ನಿರ್ದೇಶಕ ಯಾರು ಎನ್ನುವುದು ಇನ್ನು ಫೈನಲ್ ಆಗಿಲ್ಲ. ಮೂಲ ನಿರ್ದೇಶಕ ಭರತ್ ಕಮ್ಮ ಅವರೆ ಹಿಂದಿಯಲ್ಲು ಆಕ್ಷನ್ ಕಟ್ ಹೇಳುತ್ತಾರಾ? ಅಥವಾ ಕರಣ್ ಜೋಹರ್ ಅವರೆ ನಿರ್ದೇಶನ ಮಾಡುತ್ತಾರಾ ಎನ್ನುವುದು ಅಧಿಕೃತವಾಗಿಲ್ಲ.

ಜುಲೈ 26ಕ್ಕೆ ಡಿಯರ್ ಕಾಮ್ರೇಡ್ ರಿಲೀಸ್
ಬಹು ನಿರೀಕ್ಷೆಯ 'ಡಿಯರ್ ಕಾಮ್ರೇಡ್' ಸಿನಿಮಾ ಇದೆ ತಿಂಗಳು ಅಂದ್ರೆ ನಾಳೆ ನಾಲ್ಕು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿ ಡಿಯರ್ ಕಾಮ್ರೇಡ್ ತೆರೆಗೆ ಬರುತ್ತಿದೆ. ಈಗಾಗಲೆ ಟ್ರೈಲರ್ ಮತ್ತು ಹಾಡುಗಳ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ 'ಡಿಯರ್ ಕಾಮ್ರೇಡ್' ಹೇಗಿರಲಿದೆ ಎನ್ನುವ ಕುತೂಹಲಕ್ಕೆ ನಾಳೆ ತೆರೆಬೀಳಲಿದೆ.


Click it and Unblock the Notifications











