ಫಿಲ್ಮ್ ಚೇಂಬರ್ ಚುನಾವಣೆ; ಮತ್ತೆ ಗೆದ್ದು ಅಧ್ಯಕ್ಷೆ ಸ್ಥಾನಕ್ಕೆ ನಟಿ ಜಯಮಾಲ ಆಯ್ಕೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆದಿದೆ. ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿರಿಯ ನಟಿ ಜಯಮಾಲ ಭರ್ಜರಿ ಗೆಲುವು ಸಾಧಿಸಿದ್ದಾರೆ. ವಾಣಿಜ್ಯ ಮಂಡಳಿ ಉಪಾಧ್ಯಕ್ಷ, ಕಜಾಂಚಿ, ಕಾರ್ಯದರ್ಶಿ, ಗೌರವ ಕಾರ್ಯದರ್ಶಿ (ವಿತರಕರ ವಲಯ), ಗೌರವ ಕಾರ್ಯದರ್ಶಿ (ಪ್ರದರ್ಶಕರ ವಲಯ) ಸ್ಥಾನಗಳಿಗೂ ಚುನಾವಣೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಜಯಮಾಲ ಎದುರು ಭಾಮಾ ಹರೀಶ್ ಸ್ಪರ್ಧಿಸಿದ್ದರು. ಈ ಬಾರಿ 843 ಮತಗಳು ಚಲಾವಣೆ ಆಗಿದ್ದು 512 ವೋಟ್ ಪಡೆದು ಜಯಮಾಲ ಗೆಲುವಿನ ನಗೆ ಬೀರಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚುನಾವಣೆಯಲ್ಲಿ ಕೂಡ ಸಿಎಂ ಸಿದ್ದರಾಮಯ್ಯ ಬಣಕ್ಕೆ ಜಯ ಲಭಿಸಿದಂತಾಗಿದೆ. ಸಿಎಂ ಬಣದಲ್ಲಿ ಜಯಮಾಲ ಗುರ್ತಿಸಿಕೊಂಡಿದ್ದರು. ಅದೇ ರೀತಿ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಭಾಮಾ ಹರೀಶ್ ಆಪ್ತರಾಗಿದ್ದರು. ಹಾಗಾಗಿ ಜಯಮಾಲ ಅವರನ್ನು ಗೆಲ್ಲಿಸಲು ಸಿಎಂ ಆಪ್ತರು ಶ್ರಮಿಸಿದ್ದರು ಎನ್ನಲಾಗ್ತಿದೆ.

ನಿರ್ಮಾಪಕ ಮುನಿರತ್ನ ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರ ಹಿಂಪಡೆಯುವಂತೆ ಸಿಎಂ ಆಪ್ತರು ಮನವೊಲಿಸಿದ್ದರು. ಅಂತೂ ಇಂತೂ ಈಗ ಸಿಎಂ ಸಿದ್ಧರಾಮಯ್ಯ ಅವರ ಬಣದಲ್ಲಿ ಗುರ್ತಿಸಿಕೊಂಡಿದ್ದ ಜಯಮಾಲ ಜಯಭೇರಿ ಬಾರಿಸಿದಂತೆ ಆಗಿದೆ.
ಇನ್ನುಳಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಗೌರವ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುಂದರ್ ರಾಜು (ನಿರ್ಮಾಪಕರು), ಕಿಶೋರ್ (ಎಕ್ಸಿಬ್ಯೂಟರ್) ಹಾಗೂ ಕೆ.ಮಂಜು (ಡಿಸ್ಟ್ರಿಬ್ಯೂಟರ್) ಗೆಲುವಿನ ನಗೆ ಬೀರಿದ್ದಾರೆ. ಅದೇ ರೀತಿ ಕಾರ್ಯದರ್ಶಿ ಸ್ಥಾನಗಳಿಗೆ ಎ. ಗಣೇಶ್ (ನಿರ್ಮಾಪಕ), ರಮೇಶ್ (ಡಿಸ್ಟ್ರಿಬ್ಯೂಟರ್), ಅಶೋಕ್ (ಎಕ್ಸಿಬ್ಯೂಟರ್) ಚುನಾಯಿತರಾಗಿದ್ದಾರೆ. ಜಯಸಿಂಹ ಮುಸುರಿ ಗೆದ್ದು ಖಜಾಂಚಿ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ.
ನಟರಾದ ಶಿವರಾಜ್‌ಕುಮಾರ್, ಡಾಲಿ ಧನಂಜಯ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿ ಹಲವರು ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಮತದಾನ ಮಾಡಿದರು. ವಾಣಿಜ್ಯ ಮಂಡಳಿ ಕಚೇರಿ ಪಕ್ಕದಲ್ಲೇ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಇಂದು(ಜನವರಿ 31) ಬೆಳಗ್ಗೆ ಮತದಾನ ನಡೆದು ಸಂಜೆ ವೇಳೆಗೆ ಮತ ಎಣಿಕೆ ನಡೆದು ಫಲಿತಾಂಶ ಹೊರಬಿತ್ತು.
ಈ ಹಿಂದೆ 2008ರಲ್ಲಿ ಹಿರಿಯ ನಟಿ ಜಯಮಾಲ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಆಗಿ ಸೇವೆ ಸಲ್ಲಿಸಿದ್ದರು. ಇದೀಗ 2ನೇ ಬಾರಿ ಆಯ್ಕೆ ಆಗಿದ್ದಾರೆ. ಮತದಾನಕ್ಕೂ ಮುನ್ನ ನಡೆದ ಸಭೆಗಳಲ್ಲಿ ಗಲಾಟೆ ನಡೆದಿತ್ತು. ಎರಡೂ ಬಣದವರು ಮೈಕ್ ಕಿತ್ತು ಬಿಸಾಕಿ ಗದ್ದಲ ಎಬ್ಬಿಸಿದ್ದರು.
2024 -25ರ ಸಾಲಿನ ಚುನಾವಣೆಯಲ್ಲಿ ಎಂ. ನರಸಿಂಹಲು ಗೆದ್ದು ಅಧ್ಯಕ್ಷರಾಗಿದ್ದರು. ಅವರ ಅಧಿಕಾರವಧಿ ಮುಗಿದ ಬಳಿಕ ಚುನಾವಣೆ ನಡೆಸಲು ತೀರ್ಮಾನಿಸಲಾಗಿತ್ತು. ಇನ್ನು ಒಂದು ವರ್ಷ ಹಿರಿಯ ನಟಿ ಜಯಮಾಲ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸಿನಿಮಾಗಳ ಟೈಟಲ್ ರಿಜಿಸ್ಟರ್, ಸಿನಿಮಾಗಳ ಬಿಡುಗಡೆ, ವಾಣಿಜ್ಯ ವ್ಯವಹಾರಗಳಿಂದ ಸಂಬಂಧಿಸಿದಂತೆ ವಾಣಿಜ್ಯ ಮಂಡಳಿ ಕಾರ್ಯ ನಿರ್ವಹಿಸುತ್ತದೆ. ವಾಣಿಜ್ಯ ಮಂಡಳಿ ಕನ್ನಡ ಚಿತ್ರರಂಗದ ಪ್ರಮುಖ ಸಂಘಟನೆಯಾಗಿದ್ದು, ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತದೆ. ಸದಸ್ಯರ ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ಉದ್ಯಮದ ಅಭಿವೃದ್ಧಿಗೆ ಬೆಂಬಲವಾಗಿ ನಿಲ್ಲುತ್ತದೆ.


Click it and Unblock the Notifications











