ಜೆಟ್‌ಲಾಗ್ ಪಾರ್ಟಿ ಕೇಸ್: ಇಂದು ಪೊಲೀಸ್ ವಿಚಾರಣೆ ಎದುರಿಸಲಿದ್ದಾರೆ ದರ್ಶನ್ ಸೇರಿ ಹಲವು ಮಂದಿ
ರಾಜ್ಯ, ನೆರೆ ರಾಜ್ಯ ಮತ್ತು ವಿದೇಶಗಳಲ್ಲಿ ನಟ ದರ್ಶನ್ ಅಭಿನಯದ 'ಕಾಟೇರ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ಕಾರಣಕ್ಕೆ ಕಾಟೇರ ತಂಡ ದುಬೈನಲ್ಲಿ ನಡೆದ ಪ್ರೀಮಿಯರ್ ಶೋನಲ್ಲಿ ಭಾಗಿ ಆಗಿ, ಸಿನಿಮಾಕ್ಕೆ ಪ್ರಚಾರ ನೀಡಿದೆ. ಆದರೆ, ಸಿನಿಮಾ ಜೊತೆ ಜೊತೆಗೆ ಪೊಲಿಸ್ ಕೇಸ್‌ಗೂ ಕೂಡ ತಂಡ ಸುದ್ದಿಯಾಗಿದೆ.
ಕಾಟೇರ ತಂಡ ದುಬೈಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸೆಲಬ್ರಿಟಿ ಶೋ ಆಯೋಜಿಸಿತ್ತು. ಆದಾದ ನಂತರ ನಿಯಮ ಉಲ್ಲಂಘಿಸಿ ರಾತ್ರಿಯಿಡೀ ಜೆಟ್‌ಲಾಗ್ ಪಬ್‌ನಲ್ಲಿ ಪಾರ್ಟಿ ಮಾಡಿದ್ದರು ಎಂದು ಪ್ರಕರಣ ದಾಖಲಾಗಿದೆ. ಇದೇ ಕಾರಣಕ್ಕೆ ನಟ ದರ್ಶನ್ ತೂಗುದೀಪ ಸೇರಿದಂತೆ 8 ಜನರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಬಹಳಷ್ಟು ಮಂದಿ ದುಬೈನಲ್ಲಿ ಇದ್ದ ಕಾರಣ ಪೊಲೀಸ್ ವಿಚಾರಣೆಗೆ ಹಾಜರಾಗಿರಲಿಲ್ಲ.

ವಿಚಾರಣಗೆ ಹಾಜರಾಗಲಿರುವ ನಟ ದರ್ಶನ್!
ನಟ ದರ್ಶನ್ ಕಾಟೇರ ಚಿತ್ರತಂಡದ ಜೊತೆಗೆ ದುಬೈನಿಂದ ವಾಪಸ್ ಆಗಿದ್ದು, ಜನವರಿ 12 ರ ಶುಕ್ರವಾರ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ಹಿಂದೆ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸ್ ಅಧಿಕಾರಿಗಳು ಚಿತ್ರತಂಡದ ಸದಸ್ಯರು ಹಾಗೂ ಕೆಲವು ಸೆಲೆಬ್ರಿಟಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು.
ಜನವರಿ 12 ರ ಶುಕ್ರವಾರ ಮಧ್ಯಾಹ್ನ ಕಾಟೇರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ದರ್ಶನ್ ತೂಗುದೀಪ, ನಿರ್ದೇಶಕ ತರುಣ್ ಸುಧೀರ್, ನಟ ಅಭಿಷೇಕ್ ಅಂಬರೀಷ್ ಸೇರಿದಂತೆ ನೋಟಿಸ್ ಜಾರಿಯಾಗಿರುವ ಎಲ್ಲರೂ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆಗಾಗಿ ಬರಲಿದ್ದಾರೆ. ಈಗಾಗಲೇ ಮಾಧ್ಯಮಗಳು ಪೊಲೀಸ್ ಠಾಣೆ ಮುಂದೆ ಮೊಕ್ಕಂ ಹೂಡಿವೆ.

ನಟ, ನಿರ್ಮಾಪಕರಿಗೆ ನೋಟಿಸ್
ತಡರಾತ್ರಿವರೆಗೆ ಪಾರ್ಟಿ ಮಾಡಿದ ಕಾರಣ ನಟ ದರ್ಶನ್ ಜೊತೆಗೆ ಡಾಲಿ ಧನಂಜಯ್, ಚಿಕ್ಕಣ್ಣ, ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್ ಹಾಗೂ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಯಾರೊಬ್ಬರು ನೋಟಿಸ್‌ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಸುದ್ದಿಯಾಗಿತ್ತು.


Click it and Unblock the Notifications











