»   » ರೆಹಮಾನ್‌ ಯಜಮಾನ್ಯದಲ್ಲಿ ಜಿಲ್ಲಾಧಿಕಾರಿ ಸೆಟ್ಟಿಗೆ

ರೆಹಮಾನ್‌ ಯಜಮಾನ್ಯದಲ್ಲಿ ಜಿಲ್ಲಾಧಿಕಾರಿ ಸೆಟ್ಟಿಗೆ

Posted By: Staff
Subscribe to Filmibeat Kannada

ಗೋಕುಲಾಷ್ಟಮಿಗೂ ಇಮಾಂ ಸಾಬರಿಗೂ ಎತ್ತಣಿಂದೆತ್ತಣ ಸಂಬಂಧ ಅನ್ನುವುದಕ್ಕೆ ಅಪವಾದಂತಿರುವ ಈ ಯಜಮಾನದ ರೆಹಮಾನ್‌ ಸಾಹೇಬರು ಹೊಸ ಸಾಹಸಕ್ಕೆ ಅಣಿಯಾಗುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ನಡೆಯುತ್ತಿರುವುದು ಅವರ ಯಜಮಾನಿಕೆಯೇ. ಥೈಲಿಯ ಓಡಾಟ ಅಷ್ಟು ಜೋರಾಗಿದೆ.

ಭಾರೀ ಬಜೆಟ್ಟಿನ ಚಿತ್ರ ಜಿಲ್ಲಾಧಿಕಾರಿ ಚಿತ್ರವನ್ನು ತೆರೆಗೆ ತರಲು ರೆಹಮಾನ್‌ ಈಗ ರೆಡಿ . ಎಂದಿನಂತೆ ಕೆ.ಮೆಹರುನ್ನಿಸಾ ರೆಹಮಾನ್‌, ಕೆ. ಮುಸ್ತಫ ಜೋಡಿ ನಿರ್ಮಾಪಕರ ಸೀಟಿನಲ್ಲಿದೆ. ಸಿನಿಮಾದ ತಾರಾಗಣವೇನೂ ಕಡಿಮೆಯದ್ದಲ್ಲ . ಅಸುರನ ಯಶಸ್ಸಿನಿಂದ ಚೇತರಿಸಿಕೊಂಡಿರುವ ಶಿವಣ್ಣ ಜಿಲ್ಲಾಧಿಕಾರಿಯ ಪಾತ್ರದಲ್ಲಿದ್ದಾರೆ. ಅವರೊಂದಿಗೆ ಡ್ಯುಯೆಟ್‌ ಹಾಡಲಿಕ್ಕೆ ಕಾಳಹಸ್ತಿ ಖ್ಯಾತಿಯ ನಗ್ಮಾ ಒಪ್ಪಿದ್ದಾರೆ. ಅಲ್ಲಿಗೆ, ಕುರುಬನ ರಾಣಿಯ ನಂತರ ಶಿವಣ್ಣನೊಂದಿಗೆ ಮತ್ತೊಮ್ಮೆ ನಗ್ಮಾ ಕುಣಿದು ಕುಪ್ಪಳಿಸುತ್ತಾರೆ ಎಂದಾಯಿತು.

ಜಿಲ್ಲಾಧಿಕಾರಿ ಚಿತ್ರೀಕರಣ ಸೋಮವಾರ(ಏ.9)ದಿಂದಲೇ ಶುರು . ರೆಹಮಾನ್‌ ಮುಸಲ್ಮಾನರಾದರೂ, ಅವರಿಗೂ ಹನುಮಂತನಗರದ ರಾಮಾಂಜನೇಯನಿಗೂ ಎಂಥದ್ದೋ ಬಗೆಹರಿಯದ ನಂಟು. ಜಿಲ್ಲಾಧಿಕಾರಿಯ ರಥಯಾತ್ರೆ ಪ್ರಾರಂಭವಾಗುವುದು ಅಲ್ಲಿಂದಲೇ. ಆಂಜನೇಯನ ಗುಡಿಯಲ್ಲಿ ಮುಹೂರ್ತ ಮಾಡಿದರೆ, ಚಿತ್ರ ಗೆಲ್ಲುತ್ತದೆ ಅನ್ನುವುದು ಸಾಹೇಬರ ನಂಬುಗೆ. ಅದು ನಿಜ ಎಂಬಂತೆ ಯಜಮಾನ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಕಂಡಿದೆ. ಅಲ್ಲೇ ಮುಹೂರ್ತ ಮಾಡಿದ ಸುದೀಪ್‌ ಅಭಿನಯದ ಹುಚ್ಚನ ಬಗೆಗೂ ಗಾಂಧೀನಗರ ಆಶಾಭಾವದಿಂದಿದೆ.

ರಾಜೇಶ್‌ ರಾಮನಾಥ್‌ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ. ಗಂಟೆಗಿಷ್ಟು ಸಾಲು ಎಂದು ಟೈಂ ಟೇಬಲ್‌ ಹಾಕಿಕೊಂಡು ಕೆಲಸ ಮಾಡುತ್ತಿರುವ ಕೆ. ಕಲ್ಯಾಣ್‌ ಜಿಲ್ಲಾಧಿಕಾರಿಗೆ ಹಾಡು ಬರೆಯುತ್ತಿದ್ದಾರೆ. ಕಾದಂಬರಿಕಾರ ಬಿ.ಎಲ್‌. ವೇಣು ಸಂಭಾಷಣೆ ಬರೆಯುವ ಮೂಲಕ ಚಿತ್ರರಂಗದ ನಂಟು ಉಳಿಸಿಕೊಂಡಿರುವುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ. ಬಹುಶಃ ಇದಕ್ಕೆ, ರೆಹಮಾನ್‌ ಚಿತ್ರದುರ್ಗದ ಬೇರುಗಳನ್ನು ಹೊಂದಿರುವುದು ಕಾರಣವಿದ್ದರೂ ಇದ್ದೀತು. ವೇಣು, ದುರ್ಗದ ಪಾಳೇಪಟ್ಟಿನಲ್ಲಿ ಮೊದಲ ಸಾಲಲ್ಲಿ ಮಿಂಚುವ ಸಾಹಿತಿ.

ಲಾಕಪ್‌ ಡೆತ್‌ ಓಂ ಪ್ರಕಾಶ್‌ ರಾವ್‌ ತಿಕ್ಕಲುಗಳ ಬಗ್ಗೆ ಸಿನಿಮಾ ಮಂದಿ ಏನು ಹೇಳಿದರೂ, ಅದಕ್ಕೆ ರೆಹಮಾನ್‌ ತಲೆ ಕೆಡಿಸಿಕೊಂಡಿಲ್ಲ ಅನ್ನುವುದಕ್ಕೆ ಜಿಲ್ಲಾಧಿಕಾರಿಯ ಸಾರಥ್ಯ ಓಂಪ್ರಕಾಶ್‌ಗೆ ಸಿಕ್ಕಿದೆ ಅನ್ನುವುದು ಸಾಕ್ಷಿ . ಹುಚ್ಚನ ನಿರ್ದೇಶನವೂ ಓಂ ಪ್ರಕಾಶರದ್ದೆ . ಹುಚ್ಚ ತೆರೆ ಕಾಣುವ ಮುನ್ನ ಜಿಲ್ಲಾಧಿಕಾರಿ ಸೆಟ್ಟೇರುತ್ತಿದ್ದಾನೆ. ಅಲ್ಲಿಗೆ ಓಂಪ್ರಕಾಶ್‌ ಹುಚ್ಚನ ಕೆಲಸ ರೆಹಮಾನರಿಗೆ ಕಂಡಾಪಟ್ಟೆ ಇಷ್ಟವಾಗಿದೆ ಎಂದಾಯಿತು. ನಿರ್ಮಾಪಕರನ್ನು ಓಂ ಪ್ರಕಾಶ್‌ ಚೆನ್ನಾಗಿಟ್ಟಿರಲಿ.

English summary
Rehman to produce Jilladhikari. Shivrajkumar and nagma to act in the movie. Om Prakash to direct the movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada