»   » ಜೀರೋಥರ ಒದೆ ತಿನ್ನುವ ಹೀರೋ...

ಜೀರೋಥರ ಒದೆ ತಿನ್ನುವ ಹೀರೋ...

Posted By: Super
Subscribe to Filmibeat Kannada

ಹೀರೋ ಒಬ್ಬಂಟಿಯಾಗಿ ಒಂದು ಡಜನ್‌ ಖಳರಿಗೆ ಚಚ್ಚುವುದು ಕಮರ್ಷಿಯಲ್‌ ಸಿನಿಮಾದ ಮಾಮೂಲು ಸೀನ್‌. ಆದರೆ ಅದಕ್ಕೆ ತದ್ವಿರುದ್ಧವಾಗಿ ವಿಲನ್‌ಗಳೇ ಹೀರೋನನ್ನು ಮನಸಾರೆ ಚಚ್ಚುವ ಸಂಪ್ರದಾಯವನ್ನು ಶುರುಮಾಡಿದಾತ ಕಮಲಹಾಸನ್‌, ಇದು ರಿಯಲಿಸ್ಟಿಕ್‌ ಅಂತ ಜನ ಮೆಚ್ಚಿಕೊಂಡರು. ಒಂದೆರಡು ದೃಶ್ಯಗಳಾದರೆ ಪರವಾಗಿಲ್ಲ. ಚಿತ್ರದುದ್ದಕ್ಕೂ ನಾಯಕ ಏಟು ತಿನ್ನುವ ಕಾಯಕದಲ್ಲಿ ನಿರತನಾದರೆ ಹೇಗಿರಬಹುದು ? ದೇವೇಗೌಡರ ಪುತ್ರ ಕುಮಾರಸ್ವಾಮಿ ನಿರ್ಮಿಸುತ್ತಿರುವ ಜಿತೇಂದ್ರ ಚಿತ್ರದಲ್ಲಿ ಇಂಥಾ ಅರೂಪದ ದೃಶ್ಯಗಳನ್ನು ನೋಡಿ ಆನಂದಿಸಬಹುದಂತೆ. ನವರಸನಾಯಕ ಜಗ್ಗೇಶ್‌ ಅವರಿಗೆ ಈ ಚಿತ್ರದಲ್ಲಿ ಕರುಣಾರಸವನ್ನಷ್ಟೇ ಪ್ರದರ್ಶಿಸುವುದಕ್ಕೆ ಅವಕಾಶ.

ಯಾವ ಹೀರೋ ಕೂಡ ಒಪ್ಪಿಕೊಳ್ಳೋದಕ್ಕೆ ಸಾಧ್ಯವಿಲ್ಲದ ಪಾತ್ರವನ್ನು ಜಗ್ಗೇಶ್‌ ಮಾಡುತ್ತಿದ್ದಾರೆ ಅನ್ನೋದು ಕುಮಾರ ಸ್ವಾಮಿ ಶಹಬಾಸ್‌ಗಿರಿ. ಜಗ್ಗೇಶ್‌ಗೆ ಈ ಪಾತ್ರ ಸಿಕ್ಕಿರುವುದಕ್ಕೂ ಅದೇ ಕಾರಣವಿರಬಹುದೆ ಅನ್ನೋದು ಗೊತ್ತಿಲ್ಲ. ಆದರೆ ಜಗ್ಗೇಶ್‌ಗೆ ತಮ್ಮ ಪಾತ್ರದ ಬಗ್ಗೆ ಆತಂಕವಿದೆ. ಅದನ್ನು ಜನ ಯಾವ ರೀತಿ ಸ್ವೀಕರಿಸುತ್ತಾರೋ ಅನ್ನುವ ಅನುಮಾನವಿದೆ, ಜೊತೆಗೆ ತಾವು ಕಷ್ಟಪಟ್ಟು ರೂಪಿಸಿಕೊಂಡು ಬಂದಿರುವ ಇಮೇಜ್‌ ರಾತ್ರೋರಾತ್ರಿ ನುಚ್ಚು ನೂರಾಗಬಹುದೆ ಅನ್ನುವ ಭೀತಿಯೂ ಇದೆ.

ಅಷ್ಟಕ್ಕೂ ಮತ್ತೊಬ್ಬ ಹೀರೋನನ್ನು ಗೇಲಿ ಮಾಡಿರುವ ಚಿತ್ರಗಳು ಯಾವುದೂ ಉದ್ದಾರವಾಗಿಲ್ಲ. ಅಪ್ಪಿ ತಪ್ಪಿ ಜಿತೇಂದ್ರ ಕ್ಲಿಕ್‌ ಆದರೆ ಅದಕ್ಕೆ ಉಪೇಂದ್ರರೇ ಕಾರಣ ಪುರುಷನಾಗುತ್ತಾರೆ ಅನ್ನೋದು ಉದ್ಯಮಕ್ಕೆ ಗೊತ್ತಿದೆ. ಅಲ್ಲಿ ಕುಮಾರಸ್ವಾಮಿ ಸೇಫಾಗುತ್ತಾರೆ. ಜಗ್ಗೇಶ್‌ ಮತ್ತೆ ತಮ್ಮ ಎಂದಿನ ಶೈಲಿಯಲ್ಲಿ ಉಪೇಂದ್ರರನ್ನು ದೂಷಿಸುವ ಕೆಲಸಕ್ಕೆ ಮರಳುತ್ತಾರೆ. ಛೇ...ಹೀಗಾಗಬಾರದಿತ್ತು.

ಅಂದ ಹಾಗೆ ಇದೇ ಮಾರ್ಚ್‌ನಲ್ಲಿ ಜಗ್ಗೇಶ್‌ ತಮ್ಮ ಸ್ವಂತ ಬ್ಯಾನರ್‌ನಲ್ಲಿ ಚಿತ್ರವೊಂದನ್ನು ಆರಂಭಿಸಲಿದ್ದಾರೆ. ಕನ್ನಡವೇ ನನ್ನಮ್ಮ ಎಂದು ಪ್ರತಿಯಾಂದು ಚಿತ್ರದಲ್ಲೂ ಹಾಡುವ ಜಗ್ಗೇಶ್‌ ಈ ಬಾರಿ ರಿಮೇಕ್‌ ಚಿತ್ರಕ್ಕೆ ಶರಣಾಗಿದ್ದಾರೆ. ಮೂಲ ಚಿತ್ರದ ಹೆಸರು ಬಜೆಟ್‌ ಪದ್ಮನಾಭನ್‌. ಶಿವಾಜಿ ಪ್ರಭು ನಟಿಸಿದ 11 ಚಿತ್ರಗಳು ಸತತ ತೋಪಾದ ನಂತರ ಬಜೆಟ್‌ ಪದ್ಮನಾಭನ್‌ ಅವರಿಗೆ ಹೊಸ ಬದುಕು ಕೊಟ್ಟಿತಂತೆ. ಹಾಗಂತ ಜಗ್ಗೇಶ್‌ ಅವರೇ ಹೇಳುತ್ತಾರೆ. ಅಂದರೆ ಜಗ್ಗೇಶ್‌ ಕೂಡ ಅದೇ ನಿರೀಕ್ಷೆಯಲ್ಲಿದ್ದಾರೆ ಎಂದಾಯಿತು. ಆ ಮೂಲಕ ತಮ್ಮೆಲ್ಲಾ ಚಿತ್ರಗಳು ಕ್ಲಿಕ್‌ ಆಗಿದೆ ಎಂದು ಅವರು ಪದೇ ಪದೇ ಹೇಳಿದ್ದು ಕೂಡ ಸತ್ಯಕ್ಕೆ ದೂರ ಅನ್ನುವುದನ್ನು ಅವರೇ ಪರೋಕ್ಷವಾಗಿ ಒಪ್ಪಿಕೊಂಡಂತೆಯೂ ಆಗಿದೆ.

English summary
Jaggesh indirectly accepts his latest defeats

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada