ಬಾಲಿವುಡ್‌ನತ್ತ ಮುಖ ಮಾಡಿದ ಜೋಗಿ ಪ್ರೇಮ್, ಕನ್ನಡದ ಶೋಮ್ಯಾನ್‌ಗೆ ಹೊಸದೇನಲ್ಲ ಹಿಂದಿ ಚಿತ್ರರಂಗ...!
ಚಿತ್ರವೊಂದು ಬಿಡುಗಡೆಯಾಗುವ ಮುನ್ನವೇ ನಿರೀಕ್ಷೆಗೂ ಮೀರಿ ಮಾರ್ಕೆಟ್ ಮಾಡುವ ಬುದ್ದಿವಂತ ನಿರ್ದೇಶಕರಲ್ಲಿ ಜೋಗಿ ಪ್ರೇಮ್ ಮೊದಲಿಗರು. ಚಿತ್ರ ಹೇಗಾದರೂ ಇರಲಿ ಆದರೆ ಬಂಡವಾಳ ಹೂಡಿದ ನಿರ್ಮಾಪಕರಿಗಂತೂ ಪ್ರೇಮ್ ಮೋಸವಾಗದಂತೆ ನೋಡಿಕೊಳ್ಳುತ್ತಾರೆ ಎನ್ನುವುದು ಪ್ರೇಮ್ ಮೇಲೆ ಸಾಕಷ್ಟು ನಿರ್ಮಾಪಕರಿಗೆ ಇರುವ ನಂಬಿಕೆ ಮತ್ತು ವಿಶ್ವಾಸ.
ಕನ್ನಡ ಚಿತ್ರರಂಗದ ನಿರ್ಮಾಪಕರ ಈ ನಂಬಿಕೆ ಮತ್ತು ವಿಶ್ವಾಸ ಈಗ ಪ್ರೇಮ್ ಅವರನ್ನು ಬಾಲಿವುಡ್‌ಗೆ ಕರೆದೊಯ್ದಿದೆ. ಹೌದು, ಸದ್ಯ ಕೆಡಿ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ತಮ್ಮ ಕಮಾಲ್ ತೋರಿಸಲು ಮುಂದಾಗಿರುವ ಪ್ರೇಮ್ ಅವರಿಗೆ ಬಾಲಿವುಡ್‌ನ ಟಿಕೆಟ್ ಸಿಕ್ಕಿದೆ. ಖುದ್ದು, ಪ್ರೇಮ್ ಈ ವಿಚಾರವನ್ನು
ಬೆಂಗಳೂರು ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಗೊಳಿಸಿದ್ದಾರೆ. 2025ರಲ್ಲಿ ಹಿಂದಿ ಚಿತ್ರವನ್ನು ನಾನು ನಿರ್ದೇಶಿಸುವುದು ಖಚಿತ ಎಂದಿರುವ ಪ್ರೇಮ್, ಬಾಲಿವುಡ್‌ನ ಬಹುದೊಡ್ಡ ಸ್ಟಾರ್ ಒಬ್ಬರು ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಿದ್ದಾರೆ. ಆ ಸ್ಟಾರ್ ಯಾರು ? ಚಿತ್ರದ ಹೆಸರೇನು ? ಇತ್ಯಾದಿ ವಿವರಗಳನ್ನೆಲ್ಲ ಶೀಘ್ರದಲ್ಲಿಯೇ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

ಇನ್ನು ಸದ್ಯ ಬಾಲಿವುಡ್‌ನಲ್ಲಿ ದಕ್ಷಿಣದ ಅನೇಕ ನಿರ್ದೇಶಕರು ತಮ್ಮ ಚಿತ್ರದ ಕಥೆ ಮತ್ತು ನಿರೂಪಣೆ ಶೈಲಿಯಿಂದ ಅಲ್ಲಿನ ಜನರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿರುವ ಪ್ರೇಮ್ ತಮ್ಮ ಕಥೆಯನ್ನು ಕೂಡ ಪ್ರೇಕ್ಷಕರು ಮೆಚ್ಚಿಕೊಳ್ಳುವ ವಿಶ್ವಾಸ ಇದೆ ಎಂದಿದ್ದಾರೆ. ಹಿಂದಿ ಚಿತ್ರವನ್ನು ನಿರ್ದೇಶಿಸುತ್ತಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.
ಹಾಗೇ ನೋಡಿದರೆ ಪ್ರೇಮ್ ಈ ಹಿಂದೆ ಅಂದರೆ 2024ರಲ್ಲಿಯೇ ಬಾಲಿವುಡ್ ಚಿತ್ರವನ್ನು ನಿರ್ದೇಶಿಸಬೇಕಿತ್ತು. ಆ ಅವಕಾಶ ಇತ್ತು ಕೂಡ. ಆದರೆ ಆ ಚಿತ್ರ ರಿಮೇಕ್ ಆಗಿತ್ತು. ಈ ಕಾರಣಕ್ಕೆ ಮಾಡಿದರೆ ಸ್ವಮೇಕ್ ಮಾಡುವುದಾಗಿ ಹೇಳಿ ಪ್ರೇಮ್ ಹಿಂದೆ ಸರಿದಿದ್ದರು. ಆದರೆ ಈಗ ಕಾಲ ಕೂಡಿ ಬಂದಿದೆ. ಹೊಸದೊಂದು ಕಥೆ ಪ್ರೇಮ್ ತಲೆಯಲ್ಲಿ ಮೊಳಕೆಯೊಡಿದೆ.
ಅಂದ್ಹಾಗೇ ಹಿಂದಿ ಚಿತ್ರರಂಗ ಪ್ರೇಮ್ ಅವರಿಗೆ ಹೊಸದೇನಲ್ಲ. ಬಾಲಿವುಡ್‌ಗೆ ಕೂಡ ಪ್ರೇಮ್ ಹೊಸಬರಲ್ಲ. ಆ ಕಾಲದಲ್ಲಿಯೇ ತಮ್ಮ ಜೋಗಿ ಚಿತ್ರದ ಮೂಲಕ ಬಾಲಿವುಡ್‌ನ ಬೆಕ್ಕಸ ಬೆರಗಾಗಿಸಿದ್ದವರು ಪ್ರೇಮ್. ಇನ್ನು ಹಿಂದಿ ಭಾಷೆಯ ಮೇಲೆ ಪ್ರೇಮ್‌ಗೆ ಹಿಡಿತ ಇರದಿದ್ದರೂ ಕೂಡ ಯಾನಾ ಗುಪ್ತಾ, ಮಲ್ಲಿಕಾ ಶೆರಾವತ್ ಅವರನ್ನು ಬಾಲಿವುಡ್‌ನಿಂದ ಕನ್ನಡಕ್ಕೆ ಕರೆತಂದು ಇಲ್ಲಿ ಕುಣಿಸಿದವರು ಪ್ರೇಮ್. ಇಷ್ಟೇ ಯಾಕೆ ಜೆನ್ನಿಫರ್ ಕೋತ್ವಾಲ್, ಪ್ರಿಯಾಂಕ ಕೊಠಾರಿ ಮತ್ತು ಆಮಿ ಜಾಕ್ಸನ್ ಅವರಂತಹ ಬಾಲಿವುಡ್ ಸುಂದರಿಯರನ್ನು ಕರೆತಂದು ಇಲ್ಲಿ ನಾಯಕಿಯನ್ನಾಗಿಸಿದವರು ಕೂಡ ಇದೇ ಪ್ರೇಮ್.
ಇಂಥಾ ಪ್ರೇಮ್ ಈಗ ತಮ್ಮ ಕೆಡಿ ಚಿತ್ರದ ಮೂಲಕ ಸಂಜಯ್ ದತ್ ಅವರ ಜೊತೆ ಕೆಲಸ ಮಾಡಿದ್ದಾರೆ. ಅನೇಕ ವರ್ಷಗಳ ನಂತರ ಶಿಲ್ಪಾ ಶೆಟ್ಟಿ ಅವರನ್ನು ಮತ್ತೆ ಕನ್ನಡ ಚಿತ್ರರಂಗಕ್ಕೆ ಕರೆತಂದಿದ್ದಾರೆ. ಹೀಗೆ ಬಾಲಿವುಡ್‌ನಲ್ಲಿನ ಹೊಸಬರನ್ನು ಮತ್ತು ಸೂಪರ್ ಸ್ಟಾರ್‌ಗಳನ್ನು ಒಟ್ಟೊಟ್ಟಿಗೆ ಹ್ಯಾಂಡಲ್ ಮಾಡಿದ ಅನುಭವ ಪ್ರೇಮ್ ಅವರಿಗೆ ಇರುವುದರಿಂದ ಬಾಲಿವುಡ್ ಚಿತ್ರವನ್ನು ನಿರ್ದೇಶಿಸುವುದು ಪ್ರೇಮ್‌ಗೆ ಕಷ್ಟಕರವೇನಲ್ಲ. ಕಥೆಯ ಮೇಲೆ ತುಸು ಹೆಚ್ಚಿನ ಗಮನ ವಹಿಸಿ, ಹಿಂದಿ ಪ್ರೇಕ್ಷಕರು ಅಲುಗಾಡದಂತೆ ಚಿತ್ರಕಥೆಯನ್ನು ರಚಿಸಿದರೆ ಪ್ರೇಮ್ ಬಾಲಿವುಡ್‌ನಲ್ಲಿ ಕೂಡ ತಮ್ಮ ಹೆಸರಿನ ಬಾವುಟವನ್ನು ಅನಾಯಾಸವಾಗಿ ಹಾರಿಸಬಹುದು. ತಮ್ಮ ಈ ಪ್ರಯತ್ನದಲ್ಲಿ ಪ್ರೇಮ್ ಯಶಸ್ವಿಯಾಗಲಿ ಎನ್ನುವುದೇ ಗಾಂಧಿನಗರ ಹಾಗೂ ಕನ್ನಡದ ಕಲಾಭಿಮಾನಿಗಳ ಆಶಯ. ಗುಡ್ ಲಕ್ ಭೈರೇಗೌಡ್ರೇ.


Click it and Unblock the Notifications











