ಶ್ರೀರಾಮನವಮಿ ಸಂಭ್ರಮದಲ್ಲಿ ಜೋಗಿ ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್ ಹೊಸ ಅಧ್ಯಾಯ
'ಕೆಡಿ' ಚಿತ್ರದ ವಿವಾದಾತ್ಮಕ ಹಾಡಿನ ಕಾರಣಕ್ಕೆ ಇತ್ತೀಚೆಗೆ ನಿರ್ದೇಶಕ ಪ್ರೇಮ್ ಸುದ್ದಿಯಾಗಿದ್ದರು. ಪತ್ನಿ ರಕ್ಷಿತಾ ಕೂಡ ಪತಿಯ ಬೆಂಬಲಕ್ಕೆ ನಿಂತಿದ್ದರು. ಹಾಡಿನ ಸಾಹಿತ್ಯದ ಬಗ್ಗೆ ಪ್ರೇಮ್ ಕೇಳಿ ವಿವಾದಕ್ಕೆ ತೆರೆ ಎಳೆದಿದ್ದರು. ಇದೀಗ ಶ್ರೀರಾಮನವಮಿ ಸಂಭ್ರಮದಲ್ಲಿ ಖುಷಿ ಸುದ್ದಿ ಹಂಚಿಕೊಂಡಿದ್ದಾರೆ.
ಹೊಸ ಪ್ರತಿಭೆಗಳಿಗೆ ವೇದಿಕೆ ನೀಡುವ ಉದ್ದೇಶದಿಂದ 'ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್' ಎಂಬ ಚಿತ್ರ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದಾರೆ. ಮೊದಲ ಸಿನಿಮಾ ಕೂಡ ಘೋಷಣೆ ಮಾಡಿದ್ದಾರೆ. ತಮ್ಮ ಶಿಷ್ಯ ಬಳಗದಲ್ಲೇ ಇದ್ದ ಮಂಜುನಾಥ್ ಬಿ.ಎಸ್ ಎಂಬುವವರಿಗೆ ಮೊದಲ ಸಿನಿಮಾ ನಿರ್ದೇಶನದ ಜವಾಬ್ದಾರಿ ವಹಿಸಿದ್ದಾರೆ.

ಶ್ರೀರಾಮನವಮಿ ಸಂಭ್ರಮದಲ್ಲಿ ಸ್ಪೆಷಲ್ ವಿಡಿಯೋ ರಿಲೀಸ್ ಮಾಡಿ ಈ ಹೊಸ ಸಾಹಸದ ಬಗ್ಗೆ ಪ್ರೇಮ್ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದ ಟೈಟಲ್ ಹಾಗೂ ಇನ್ನುಳಿದ ತಾಂತ್ರಿಕ ವರ್ಗದ ವಿವರಗಳನ್ನು ಚಿತ್ರತಂಡ ಶೀಘ್ರದಲ್ಲೇ ಕೊಡಲಿದೆ. ಅಂದಹಾಗೆ ರಕ್ಷಿತಾ ಸಹೋದರ ರಾಣಾ ಚಿತ್ರದ ಹೀರೊ ಆಗಿ ನಟಿಸಲಿದ್ದಾರೆ. ಒಂದ್ಕಡೆ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ದೇಶನ ಮಾಡುವ ಜೊತೆಗೆ ತಮ್ಮ ಬ್ಯಾನರ್‌ನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲ ಮನಸ್ಸು ಮಾಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಪ್ರೇಮ್ ಅವರ ಜೊತೆ ಸಹ-ನಿರ್ದೇಶಕರಾಗಿ ಹಾಗೂ ಚಿತ್ರಸಾಹಿತಿಯಾಗಿ ಗುರುತಿಸಿಕೊಂಡಿರುವ ಮಂಜುನಾಥ್ ಇದೀಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್ ಮೂಲಕ ಮುಂದೆ ಮತ್ತಷ್ಟು ಸಿನಿಮಾ ನಿರ್ಮಾಣದ ಪ್ರಯತ್ನ ನಡೀತಿದೆ.
'ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್' ಸಂಸ್ಥೆಯ ಮೊದಲ ಚಿತ್ರಕ್ಕೆ ಖ್ಯಾತ ಛಾಯಾಗ್ರಾಹಕ ವಿಲಿಯಂ ಡೆವಿಡ್ ಆಯ್ಕೆ ಆಗಿದ್ದಾರೆ. ಯುವ ಪ್ರತಿಭೆ ರೋಮಿಯೋ ಎಂಬುವವರು ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸದ್ಯ ಪ್ರೇಮ್ 'ಕೆಡಿ' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗುತ್ತಿದ್ದು ಶೀಘ್ರದಲ್ಲೇ ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ.
ಏಪ್ರಿಲ್ 30ರಂದು 'ಕೆಡಿ' ಸಿನಿಮಾ ತೆರೆಗೆ ಬರಲಿದೆ. ಧ್ರುವ ಸರ್ಜಾ ಜೊತೆಗೆ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಂಜಯ್ ದರ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಚಿತ್ರದ ತಾರಾಗಣದಲ್ಲಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಿರುವುದು ವಿಶೇಷ.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ 'ಕೆಡಿ' ಸಿನಿಮಾ ನಿರ್ಮಾಣ ಆಗ್ತಿದೆ. ಬರೋಬ್ಬರಿ 4 ವರ್ಷಗಳ ಬಳಿಕ ಸಿನಿಮಾ ಬಿಡುಗಡೆ ಆಗ್ತಿದೆ. ಐಪಿಎಲ್ ಆರ್ಭಟದ ನಡುವೆ ಧೈರ್ಯ ಮಾಡಿ ಸಿನಿಮಾ ಬಿಡುಗಡೆಗೆ ಪ್ರೇಮ್ ಮುಂದಾಗಿದ್ದಾರೆ. ಇತ್ತೀಚೆಗೆ ಚಿತ್ರದ ಸ್ಪೆಷಲ್ ಸಾಂಗ್ ರಿಲೀಸ್ ಆಗಿ ವಿವಾದಕ್ಕೀಡಾಗಿತ್ತು. ಹಿಂದಿ ವರ್ಷನ್ ಸಾಂಗ್ ಯೂಟ್ಯೂಬ್‌ನಿಂದ ಡಿಲೀಟ್ ಆಗಿದೆ.
ಈಗಾಗಲೇ ಕ್ಷಮೆ ಕೇಳಿರುವ ಪ್ರೇಮ್ ಹೊಸ ಸಾಹಿತ್ಯ ಬರೆದು ಮತ್ತೆ ಸಾಂಗ್ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಸಂಜಯ್ ದತ್ ಹಾಗೂ ನೋರಾ ಫತೇಹಿ ಈ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ದರ್ಶನ್ ಜೊತೆಗೂ ಪ್ರೇಮ್ ಸಿನಿಮಾ ಮಾಡಬೇಕಿತ್ತು. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ವಿಚಾರಣಧೀನ ಖೈದಿಯಾಗಿ ಜೈಲು ಸೇರಿದ್ದಾರೆ. ಹಾಗಾಗಿ ಆ ಸಿನಿಮಾ ತಡವಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯೇ ಈ ಚಿತ್ರಕ್ಕೂ ಹಣ ಹೂಡಲಿದೆ. ಎರಡು ವರ್ಷಗಳ ಹಿಂದೆ ದರ್ಶನ್ ಹುಟ್ಟುಹಬ್ಬಕ್ಕೆ ಸಣ್ಣ ಟೀಸರ್ ಬಿಟ್ಟು ಪ್ರೇಮ್ ನಿರೀಕ್ಷೆ ಮೂಡಿಸಿದ್ದರು. ದರ್ಶನ್ ಡೈಲಾಗ್ ಟೀಸರ್‌ನಲ್ಲಿ ಗಮನ ಸೆಳೆದಿತ್ತು.


Click it and Unblock the Notifications











