'ಕ್ರೆಡಿಟ್ ಕುಮಾರ'ನಿಗೆ ತಾರಾಬಲ; ಪತ್ರಕರ್ತ ಹರೀಶ್ ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ
ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕು ಎಂದು ಕನಸು ಹೊತ್ತು ಪ್ರತಿದಿನ ಸಾಕಷ್ಟು ಜನ ಬರುತ್ತಾರೆ. ಆದರೆ ಎಲ್ಲರಿಗೂ ಅಷ್ಟು ಸುಲಭವಾಗಿ ಅವಕಾಶ ಸಿಗಲ್ಲ. ಅವಕಾಶ ಸಿಕ್ಕ ಮಾತ್ರಕ್ಕೆ ಗೆಲ್ಲುವುದು ಇಲ್ಲ. ಆದರೂ ಪ್ರಯತ್ನ ಮಾತ್ರ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
ಇನ್ನು ಹೀರೊ ಆಗಬೇಕು, ಹೀರೊಯಿನ್ ಆಗಬೇಕು, ನಿರ್ದೇಶಕ ಆಗಬೇಕು ಎಂದು ಬಂದವರು ಬಳಿಕ ತಮ್ಮ ಕನಸ್ಸನ್ನು ಪಕ್ಕಕ್ಕಿಟ್ಟು ಸಿಕ್ಕ ಕೆಲಸ ಮಾಡುತ್ತಾ ಮುಂದುವರೆಯುತ್ತಾರೆ. ಆದರೂ ಹೀರೊ ಆಗುವ ಕನಸು ಮಾತ್ರ ನನಸಾಗದೇ ಉಳಿದುಬಿಡುತ್ತದೆ. ಕೆಲವರು ಮಾತ್ರ ಹೇಗಾದರೂ ಮಾಡಿ ಆ ಆಸೆ ಈಡೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಇದೀಗ ಸಿನಿಪತ್ರಕರ್ತ ಹರೀಶ್ ಹೀರೊ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 10 ವರ್ಷಕ್ಕೂ ಹೆಚ್ಚು ಸಮಯ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡಿದ ಹರೀಶ್ ಇದೀಗ ಬೆಳ್ಳಿ ಪರದೆ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ. 'ಕ್ರೆಡಿಟ್ ಕುಮಾರ' ಎನ್ನುವ ಹೊಸ ಚಿತ್ರಕ್ಕೆ ಹೀರೊ ಆಗಿದ್ದಾರೆ. ಈ ಹಿಂದೆ 'ಬಾಂಡ್ ರವಿ' ಎನ್ನುವ ಸಿನಿಮಾ ಕಟ್ಟಿಕೊಟ್ಟಿದ್ದ ಪ್ರಜ್ವಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ 'ಕ್ರೆಡಿಟ್ ಕುಮಾರ' ಚಿತ್ರಕ್ಕೆ ಮುಹೂರ್ತ ನೆರವೇರಿಸಿ ಚಾಲನೆ ನೀಡಲಾಯಿತು. ಈ ಮುಹೂರ್ತ ಸಮಾರಂಭಕ್ಕೆ ನಟ ಧ್ರುವ ಸರ್ಜಾ ನಿರ್ದೇಶಕ ಎಸ್ ಮಹೇಂದರ್, ನಿರ್ಮಾಪಕ ಉದಯ್ ಮೆಹ್ತಾ, ನಟ ಪ್ರಮೋದ್ ಹಾಗೂ ನಿರ್ಮಾಪಕ ನರಸಿಂಹ, ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ, ಸಂಭಾಷಣೆಕಾರ ಮಾಸ್ತಿ ಸೇರಿದಂತೆ ಹಲವರು ಹಾಜರಾಗಿದ್ದರು. ಧ್ರುವ ಸರ್ಜಾ ಕ್ಲ್ಯಾಪ್ ಮಾಡಿ ಚಿತ್ರಕ್ಕೆ ಶುಭ ಕೋರಿದರು.

ಸಾಲ ಮಾಡಿಕೊಂಡು ಒದ್ದಾಡುವ ಒಬ್ಬ ಕ್ಯಾಬ್ ಡ್ರೈವರ್ ಕಥೆ 'ಕ್ರೆಡಿಟ್ ಕುಮಾರ' ಚಿತ್ರದಲ್ಲಿದೆ. ಪಾಯಲ್ ಚಂಗಪ್ಪ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ವಾಗೀಶ್ ಮುತ್ತಿಗೆ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.
ನಾಯಕ ನಟ ಹರೀಶ್ ಮಾತನಾಡಿ, "ಇಡೀ ಚಿತ್ರರಂಗ ಸಹಾಯ ಮಾಡಿದೆ. ಇದು ಮೊದಲ ಹೆಜ್ಜೆ. 2009ರಲ್ಲಿ ಮೊದಲು ಕೇಬಲ್ ಚಾನಲ್‌ವೊಂದರಲ್ಲಿ ಕೆಲಸ ಮಾಡುವಾಗ ಬಣ್ಣ ಹಚ್ಚಿದ್ದು. ಅವತ್ತು ಆರ್ಟಿಸ್ಟ್ ಆಗಬೇಕು ಅಂತ ಅಂದುಕೊಂಡಿದ್ದೆ. ಈಗ ಆ ಕನಸು ನನಸಾಗಿದೆ. ಈ ಅನುಭವ ನನಗೆ ಬೇಕಿತ್ತು, ಈ ಅನುಭವ ಇಲ್ಲ ಅಂದಿದ್ರೆ ನನ್ನ ಜೀವನ ಅಪೂರ್ಣ ಆಗುತ್ತಿತ್ತು" ಎಂದು ಹೇಳಿದ್ದಾರೆ.
"ಭೂಮಿ ಎನ್ನುವ ಪಾತ್ರ ನಾನು ಮಾಡುತ್ತಿದ್ದೇನೆ. ಈ ಹಿಂದೆ ಶಾರ್ಟ್ ಸಿನಿಮಾ ಮಾಡಿದ್ದೇನೆ. ತುಂಬಾ ಪ್ರೀತಿ ಕೊಟ್ಟಿದ್ದೀರಾ. ಈಗ ಸಿನಿಮಾ ಮಾಡುತ್ತಿದ್ದೇನೆ. ನಿಮ್ಮ ಪ್ರೀತಿ ಇರಲಿ. ಮಿಡ್ಲ್ ಕ್ಲಾಸ್ ಹುಡುಗಿ ಆಗಿ ಬ್ಯೂಟಿಶಿಯನ್ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಚಿತ್ರದ ನಾಯಕಿ ಪಾಯಲ್ ಹೇಳಿದ್ದಾರೆ.
'ಕ್ರೆಡಿಟ್ ಕುಮಾರ' ಚಿತ್ರಕ್ಕೆ ಧರ್ಮ ವಿಶ್ ಸಂಗೀತವಿದೆ. 3 ಹಾಡುಗಳಿಗೆ ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಗೂ ನಿರ್ದೇಶಕ ಭರ್ಜರಿ ಚೇತನ್ ಸಾಹಿತ್ಯ ಬರೆಯಲಿದ್ದಾರೆ. ಸದ್ಯ ಮುಹೂರ್ತ ನೆರವೇರಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದ್ದು ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications











