ಪತ್ರಕರ್ತ ವಿನಾಯಕರಾಮ್ ಕಲಗಾರು ಈಗ ಖಳನಟ
ಒಂದು ಕಡೆ ಶ್ರೇಷ್ಠ ಖಳನಟ ಪ್ರಶಸ್ತಿ ನೀಡಬೇಕೆ ಬೇಡವೆ ಎಂಬ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ಗೆ ಹೊಸ ಖಳನಟನ ಎಂಟ್ರಿಯಾಗಿದೆ. ಅವರು ಬೇರಾರು ಅಲ್ಲ, ಸಿನಿಮಾ ಪತ್ರಕರ್ತರಾಗಿ, ಸಂಭಾಷಣೆಕಾರರಾಗಿ ಗುರುತಿಸಿಕೊಂಡಿರುವ ವಿನಾಯಕರಾಮ್ ಕಲಗಾರು.
ವಿಜಯಕರ್ನಾಟಕದಲ್ಲಿ ಒಂದಷ್ಟು ವರ್ಷ ಇದ್ದು, ಸಿನಿಮಾ ಬರವಣಿಗೆಗೆ ವಿ-ಚಿತ್ರ ರೂಪ ಕೊಟ್ಟು ಅದರಿಂದ ಓದುಗ ಬಳಸಿಕೊಂಡ ಅವರ ಅದೆಷ್ಟೋ ಚಿತ್ರ ವಿಮರ್ಶೆಗಳು ಫಿಲ್ಮಿಬೀಟ್ ಕನ್ನಡದಲ್ಲೂ ಪ್ರಕಟವಾಗಿತ್ತು. 'ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಕಾಲಂ ಬರೆಯುತ್ತಿರುವ ಅವರು, ಸಿನಿ ಸುದ್ದಿಗಳನ್ನೂ ಸಂಪಾದಿಸುವ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಈಟಿವಿ ಕನ್ನಡದ 'ಡಾನ್ಸಿಂಗ್ ಸ್ಟಾರ್' ಹಿಂದಿರುವ ಕ್ರಿಯಾಶೀಲ ವ್ಯಕ್ತಿ ಕಲಗಾರು. [ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಹಾಕಿದ ಪಿ.ಶೇಷಾದ್ರಿ]
'ಗೊಂಬೆಗಳ ಲವ್' ಖ್ಯಾತಿಯ ಸಂತೋಷ್ ಆಕ್ಷನ್ ಕಟ್ ಹೇಳುತ್ತಿರುವ 'ದಾದಾ ಈಸ್ ಬ್ಯಾಕ್' ಚಿತ್ರದಲ್ಲಿ ಅವರು ಖಳನಟನಾಗಿ ಕಾಣಿಸಲಿದ್ದಾರೆ. ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಪಾರ್ಥೀಬನ್ ಸಹ ಅಭಿನಯಿಸುತ್ತಿರುವುದು ವಿಶೇಷ.

ರಾಜ್ಯ ಪ್ರಶಸ್ತಿ ಪುರಸ್ಕೃತ ಅನೂಪ್ ಸೀಳಿನ್ ಅವರ ಸಂಗೀತ, ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣ ಇರುವ ಈ ಚಿತ್ರದಲ್ಲಿ ಕಲಗಾರು ಅವರು ಸೆಕೆಂಡ್ ವಿಲನ್ ಆಗಿ ಕಾಣಿಸಲಿದ್ದಾರೆ. ಅರುಣ್ ಮತ್ತು ಶ್ರುತಿ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದು.
ವಿನಾಯಕರಾಮ್ ಕಲಗಾರು ಖಳನಟನಾಗಿ ಆಯ್ಕೆಯಾಗಿದ್ದು ಹೇಗೆ? ಅವರ ಮಾತಿನಲ್ಲೇ ಕೇಳಿ, "ತೀರಾ ಬೇಕಾದ, ನನ್ನಂಥಾ ನನ್ನನ್ನೂ ತುಂಬಾ ಹಚ್ಚಿಕೊಂಡಿರೋ ಗೆಳೆಯ ಸಂತೋಷ್ ನಿರ್ದೇಶನದ ಹೊಚ ಚಿತ್ರವಿದು. ಹಿಂದೆ ಇದೇ ಸಂತೋಷ್ ಬೊಂಬೆಗಳ ಲವ್ ಎಂಬ ಸಿನಿಮಾ ಮಾಡಿದ್ದರು. ಆ ಸಿನಿಮಾ ಯಾರಿಗೆ ಹಿಡಿಸಿತ್ತೋ ಬಿಟ್ಟಿತ್ತೋ ಗೊತ್ತಿಲ್ಲ. ನಾನು ಶೋ ಮುಗಿಸಿ ಹೊರಬಂದು ಇಡೀ ದಿನ ಕನ್ ಫ್ಯೂಸ್ ಆಗಿದ್ದೆ. ಗಂಟೆಗಟ್ಟಲೇ ಸುಮ್ಮನಿದ್ದುಬಿಟ್ಟಿದ್ದೆ.
ಅದೊಂದು ಬೆಟ್ಟ ಬೆಳಗ್ಗೆ ಅದೇ ಸಂತೋಷ್ ಕಾಲ್ ಮಾಡಿ, ಸರ್ ವೈಟ್ ಎಂಡ್ ವೈಟ್ ಡ್ರೆಸ್ ನಲ್ಲಿ ನೀವು ಈಗಲೇ ಮಾಗಡಿ ರಸ್ತೆಯ ಹತ್ತಿರ ಇರೋ ರೇಷ್ಮೆ ಗೂಡು ಫ್ಯಾಕ್ಟರಿ ಹತ್ತಿರ ಬರಬೇಕು ಎಂದರು. ಸರಿ, ಬಂದೇ ಇರಿ, ನೀವು ಕರೆದರೆ ಬರದೇ ಇರುತ್ತೀನಾ ಎಂದು ವೈಟ್ ಎಂಡ್ ವೈಟ್ ಡ್ರೆಸ್ ಹಾಕಿಕೊಂಡು ಹೋದೆ.
ಅಲ್ಲಿ ವಿಲ ವಿಲ ವಿಲನ್ ಶರತ್ ಲೋಹಿತಾಶ್ವ ಇದ್ದರು. ಅವರ ಕೆಂಗಣ್ಣು ನೋಡಿ ಬೆಚ್ದಿ ಬೀಳುವಷ್ಟರಲ್ಲಿ ಸಂತೋಷ್ ಬಂದು-ಸರ್ ನೀವು ನಮ್ಮ ಸಿನಿಮಾದಲ್ಲಿ ಎಂ ಎಲ್ ಎ ಕ್ಯಾರೆಕ್ಟರ್ ಮಾಡುತ್ತಿದ್ದೀರಾ. ನೀವೇ ಸೆಕೆಂಡ್ ವಿಲನ್ನು ಎನ್ನುಬಿಡೋದೇ...
ಅವನ ಪ್ರೀತಿಗಂತ, ಆ ಹುಡುಗರು ಹಠಕ್ಕೆ ಬಿದ್ದು ಮಾಡುವ ಸಿನಿಮಾ ಕೆಲಸಕ್ಕಿಂತ ದೊಡ್ಡ ವಿಷಯ- ವಸ್ತುವಾಗಲಿ ಇಲ್ಲ ಎಂಬ ನಿರ್ಧಾರಕ್ಕೆ ಬಂದು, ಸಂತೋಷ್ ಅದು ಏನೇನು ಡೈಲಾಗ್ ಹೇಳಿಕೊಟ್ಟರೋ ಅದನ್ನೆಲ್ಲಾ ಹೇಳಿಬಿಟ್ಟೆ...
ಬೈ ದ ಬೈ ಇಷ್ಟು ದಿನ ನನ್ನನ್ನು ಎಷ್ಟೆಲ್ಲಾ ರೀತಿಯಲ್ಲಿ ಸಹಿಸಿಕೊಂಡಿದ್ದಿರೋ...ಇನ್ನು ಮುಂದೆ ವಿಲನ್ ಪಾತ್ರದಲ್ಲೂ ಸಹಿಸಿಕೊಳ್ಳಬೇಕು! ದಟೀಸ್ ದಾದಾ ಈಸ್ ಬ್ಯಾಕ್...ವಿಲನ್ ಕಮ್ ಎಂ ಎಲ್ ಎ ರಾಜಣ್ಣಂಗೇ... ಜೈ ಅಂತೀರೋ, ದಿಕ್ಕಾರ ಅಂತೀರೋ ನಿಮಗೆ ಮತ್ತು ನಿಮಗಷ್ಟೇ ಬಿಟ್ಟಿದ್ದು!". (ಫಿಲ್ಮಿಬೀಟ್ ಕನ್ನಡ)


Click it and Unblock the Notifications











