»   » ಯಾರು ಹಿತವರು ಮೂವರೊಳಗೆ ಎಂದು

ಯಾರು ಹಿತವರು ಮೂವರೊಳಗೆ ಎಂದು

Posted By: Staff
Subscribe to Filmibeat Kannada

ನಿಂಬೆಹಣ್ಣಿನಂಥ ಹುಡುಗಿ ಜ್ಯೂಹಿಚಾವ್ಲಾ ಕನ್ನಡಕ್ಕೆ ಮತ್ತೆ ಮರಳುತ್ತಿದ್ದಾರೆ, ದಶಕದ ನಂತರ. ಜ್ಯೂಹಿ ಅವರ ಮರು ಆಗಮನದ ಕೀರ್ತಿಯೂ ಯಥಾಪ್ರಕಾರ 'ಶಕುನಿ"ಗೆ ಅರ್ಥಾತ್‌ ರವಿಚಂದ್ರನ್‌ ಅವರಿಗೇ ಸಲ್ಲಬೇಕು.

ಪರಭಾಷಾ ತಾರೆಯರನ್ನು ಆಮದು ಮಾಡಿಕೊಳ್ಳುವ ಟ್ರೆಂಡ್‌ ಶುರು ಮಾಡಿದವರೇ ರವಿಚಂದ್ರನ್‌. ಕನ್ನಡದಲ್ಲಿ ನಾಯಕಿಯರಿಲ್ಲ ಎಂದು ಪ್ರೇಮಲೋಕದ ದಿನಗಳಲ್ಲಿ ಹೇಳುತ್ತಿದ್ದ ಮಾತನ್ನು ಅವರು ಈಗಲೂ ನಂಬಿಕೊಂಡಿದ್ದಾರೆ. 'ಹಳ್ಳಿಮೇಷ್ಟ್ರು" ಬಿಂದಿಯಾ ಅವಾಂತರದ ನಂತರ ಬಾಲಿವುಡ್‌ ನಾಯಕಿಯರ ಮೋಹವನ್ನು ರವಿ ಸ್ವಲ್ಪ ಕಡಿಮೆ ಮಾಡಿಕೊಂಡಿದ್ದರೂ, ಈಗಲೂ ಅವರಿಗೆ ಪರಭಾಷಾ ನಾಯಕಿಯರತ್ತಲೇ ಒಲವು.

ಒಂದೆರಡು ವರ್ಷಗಳ ಕೆಳಗೆ ನಾಯಕಿಯರನ್ನು ಹುಡುಕುವ ಕಷ್ಟದ ಬಗ್ಗೆ ಮಾತನಾಡುತ್ತಿದ್ದ ರವಿ- 'ಮತ್ತೆ ಕರೆಯೋಣವೆಂದರೆ ಖುಷ್ಬೂ ದಪ್ಪಗಾಗಿದ್ದಾಳೆ, ಜ್ಯೂಹಿ ಕೈಗೆಟುಕುತ್ತಿಲ್ಲ " ಎಂದು ಅಳಲು ತೋಡಿಕೊಂಡಿದ್ದರು. ಈಗ, ಖುಷ್ಬೂ ಇನ್ನಷ್ಟು ದುಂಡಗಾಗಿದ್ದರೆ ಜ್ಯೂಹಿ ಕೈ ಅಳತೆಯಲ್ಲಿದ್ದಾರೆ. ಹೊಸ ಹೀರೋಯಿನ್‌ಗಳ ದಾಳಿಯಿಂದ ಬಾಲಿವುಡ್‌ ಪಾಲಿಗೆ ಜ್ಯೂಹಿಯೀಗ ಹೊಳಪು ಕಳಕೊಂಡ ನಾಣ್ಯ.

ರವಿಚಂದ್ರನ್‌ಗೆ ನಾಯಕಿಯಾಗಿ ಜ್ಯೂಹಿ ಕನ್ನಡಕ್ಕೆ ಮರಳುತ್ತಿರುವುದು ಕೋಟಿ ನಿರ್ಮಾಪಕ ರಾಮು ಅವರ ಶಕುನಿ ಚಿತ್ರಕ್ಕಾಗಿ. ನಿರ್ಮಾಣ ರಾಮು ಅವರಾದರೂ ಚಿತ್ರದ ಸಂಪೂರ್ಣ ಸೂತ್ರಧಾರ ರವಿಚಂದ್ರನ್‌. ರಾಮು ಅವರು ಸದ್ಯಕ್ಕೆ ತಮ್ಮ ಬಹು ನಿರೀಕ್ಷೆಯ ಚಿತ್ರ ಹಾಲಿವುಡ್‌ಗೆ ಅಲ್ಪ ವಿರಾಮವಿಟ್ಟಿದ್ದಾರೆ. ಹಾಲಿವುಡ್‌ಗಿಂತ ಮುನ್ನವೇ ಶಕುನಿ ಸೆಟ್ಟೇರುವುದೀಗ ಖಚಿತವಾಗಿದೆ.

'ರಾಮು ಎಲ್ಲ ರೀತಿಯ ಸ್ವಾತಂತ್ರ್ಯವನ್ನು ನನಗೆ ಕೊಟ್ಟಿದ್ದಾರೆ. ಆದ್ದರಿಂದ ನಾನೇ ನಿರ್ಮಾಪಕ ಅಂದರೂ ತಪ್ಪಿಲ್ಲ" ಎನ್ನುತ್ತಾರೆ ರವಿ. ಪ್ರೇಮಲೋಕ, ಕಿಂದರಿಜೋಗಿ, ಶಾಂತಿಕ್ರಾಂತಿ ನಂತರ ಕನ್ನಡದ ಮಟ್ಟಿಗೆ ಶಕುನಿ ಜ್ಯೂಹಿಗೆ ನಾಲ್ಕನೇ ಚಿತ್ರ. ನಾಲ್ಕೂ ಚಿತ್ರಗಳಲ್ಲಿ ರವಿಚಂದ್ರನ್‌ ನಾಯಕ.

ಶಕುನಿಗೆ ಮೂವರು ನಾಯಕಿಯರು, ಜ್ಯೂಹಿ ಅವರಲ್ಲೊಬ್ಬಳು. ಉಳಿದ ಇಬ್ಬರು ನಾಯಕಿಯರಲ್ಲಿ ಒಂದು ಪಾತ್ರಕ್ಕೆ ಮಸ್ತು ಮಸ್ತು ಹುಡುಗಿ ರವೀನಾ ಟಂಡನ್‌ ಆಯ್ಕೆಯಾಗಿದ್ದಾರೆ. ಮತ್ತೊಂದು ಪಾತ್ರಕ್ಕೆ ಗಂಗೂಲಿಯಾಂದಿಗೆ ಕಾಳಹಸ್ತಿಯಲ್ಲಿ ನಾಗಪೂಜೆ ಮಾಡಿದ ಖ್ಯಾತಿಯ ನಗ್ಮಾ ಆಯ್ಕೆಯಾಗಿದ್ದಾರೆ. ಕನ್ನಡಿಗನದು ಭಾಗ್ಯವೋ ಭಾಗ್ಯ!

English summary
Juhi, Raveena Tendon and Nagma to act in Kannada movie - Shakuni

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada