ಮದುವೆಯಾಗಿ ಒಂದು ವರ್ಷದೊಳಗೆ ಗುಡ್ ನ್ಯೂಸ್ ನೀಡಿದ ಡಾಲಿ ಧನಂಜಯ್
ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಇಂತಹ ಪ್ರಶ್ನೆಗಳಿಗೆ ಹಲವು ಸಲ ಹಲವಾರು ತಾರೆಯರು ಉರಿದು ಬಿದ್ದಿದ್ದು ಇದೆ.
ಆದರೂ ಕೂಡ ಈ ಪ್ರಶ್ನೆ ಎದುರಾಗಿಯೇ ಆಗುತ್ತೆ. ಹೀಗೆ ಸಿಕ್ಕ ಸಿಕ್ಕಲ್ಲಿ ಪ್ರಶ್ನೆಗಳನ್ನು ಕೇಳುವವರಿಗೆ ಡಾಲಿ ಧನಂಜಯ್ ಈಗ ಉತ್ತರವನ್ನು ನೀಡಿದ್ದಾರೆ. ಮದುವೆಯಾದ ಒಂದು ವರ್ಷದ ನಂತರ ತಾವು ತಂದೆಯಾಗುತ್ತಿರುವುದಾಗಿ ಬಹಿರಂಗವಾಗಿ ಹೇಳಿದ್ದಾರೆ. ಹೌದು, ಅಸಲಿಗೆ ಡಾಲಿ ಧನಂಜಯ್ ಇತ್ತೀಚೆಗೆ ''ಉದಯ ಕನ್ನಡಿಗ - 2025'' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕರ್ನಾಟಕದ ಅಭಿವೃದ್ದಿಗೆ ವಿಶಿಷ್ಟ ಕೊಡುಗೆ ನೀಡಿರುವ ವಿವಿಧ ಕ್ಷೇತ್ರಗಳ ಸಾಧಕರನ್ನು ಈ ವೇದಿಕೆಯಲ್ಲಿ ಗೌರವಿಸಲಾಯ್ತು. ಶಿವರಾಜ್ ಕುಮಾರ್.. ಪ್ರಕಾಶ್ ರಾಜ್.. ಹಿರಿಯ ಕಲಾವಿದರಾದ ಶ್ರೀನಾಥ್.. ಉಮಾಶ್ರೀ.. ಶಶಿಕುಮಾರ್.. ಮಂಡ್ಯ ರಮೇಶ್.. ಗಿರಿಜಾ ಲೋಕೇಶ್.. ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್.. ಬರಗೂರು ರಾಮಚಂದ್ರಪ್ಪ.. ಸಿಂಪಲ್ ಸುನಿ.. ಓಂ ಸಾಯಿ ಪ್ರಕಾಶ್.. ಅರುಣ್ ಸಾಗರ್..
ಹೀಗೆ ಚಿತ್ರರಂಗದ ಹಲವಾರು ತಾರೆಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇದೇ ಸಮಯದಲ್ಲಿ ಡಾಲಿ ಧನಂಜಯ್ ಅವರಿಗೆ ಪ್ರಶಸ್ತಿಯನ್ನು ನೀಡಲಾಯ್ತು. ಈ ಸಮಯದಲ್ಲಿ ವೇದಿಕೆ ಮೇಲೆ ಎರಡು ಗುಲಾಬಿ ಹೂಗಳನ್ನು ನೀಡಲಾಯ್ತು.
ಆಗ ಗುಲಾಬಿ ಹೂ ಸ್ವೀಕರಿಸಿದ ಡಾಲಿ ಧನಂಜಯ್ ಎರಡು ಗುಲಾಬಿ ಹೂ ಇದೆ. ಇದರಲ್ಲಿ ಒಂದನ್ನು ಮನೆಗೆ ತಗೊಂಡು ಹೋಗಿ ನಾನು ನನ್ನ ಹೆಂಡ್ತಿಗೆ ಕೊಡ್ತೀನಿ. ಇನ್ನೊಂದನ್ನ ಸದ್ಯದಲ್ಲೇ ಇನ್ನೊಂದು ಜೀವ ಜೊತೆಯಾಗುತ್ತಿದೆ. ಅದಕ್ಕೆ ಅಂತ ಹೇಳಿ ಕೊಡುವುದಾಗಿ ಹೇಳಿದ್ದಾರೆ. ಈ ಮೂಲಕ ತಾವು ತಂದೆಯಾಗುತ್ತಿರುವ ಸಿಹಿ ಸುದ್ದಿಯನ್ನು ಡಾಲಿ ಧನಂಜಯ್ ಹಂಚಿಕೊಂಡಿದ್ದಾರೆ.
ಸದ್ಯ ಉದಯ ಟಿವಿ ಹಂಚಿಕೊಂಡ ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಹಲವರು ಡಾಲಿ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಅಂದ್ಹಾಗೇ ಕೆಲ ದಿನಗಳ ಹಿಂದೆ ಡಾಕ್ಟರ್ ಧನ್ಯತಾ ತಮ್ಮ ತಾಯಿ, ಅಕ್ಕ, ಅಕ್ಕನ ಗಂಡ ಮತ್ತು ಅವರ ಮಗನ ಜೊತೆ ಮಾರೀಶಿಯಸ್‌ಗೆ ಹೋಗಿದ್ದರು. ತಮ್ಮ ಪ್ರವಾಸದ ಫೋಟೊಗಳನ್ನು ಕೂಡ ಹಂಚಿಕೊಂಡಿದ್ದರು. ಆಗಲೇ ಹಲವರಿಗೆ ಧನ್ಯತಾ ಗರ್ಭಿಣಿಯಾಗಿರಬಹುದು ಎನ್ನುವ ಅನುಮಾನ ಬಂದಿತ್ತು. ಫೋಟೊಗಳಲ್ಲಿ ಬೇಬಿ ಬಂಪ್ ಕಾಣಿಸಿಕೊಂಡಿತ್ತು. ಈಗ ಅನುಮಾನ ನಿಜಾ ಆಗಿದೆ. ಡಾಲಿ ಧನಂಜಯ್ ಮತ್ತು ಧನ್ಯತಾ ಬದುಕಿನಲ್ಲಿ ಹೊಸ ಅತಿಥಿಯ ಆಗಮನವಾಗಲಿದೆ.
ಇನ್ನುಳಿದಂತೆ ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ಕಳೆದ ವರ್ಷ ಫೆಬ್ರವರಿಯಲ್ಲಿ ಅದ್ಧೂರಿಯಾಗಿ ನಡೆದಿತ್ತು. ಕನ್ನಡ ಚಿತ್ರರಂಗದ ತಾರೆಯರು ಮಾತ್ರವಲ್ಲದೇ ರಾಜಕಾರಣಿಗಳು ಕೂಡ ಈ ಮದುವೆಗೆ ಸಾಕ್ಷಿಯಾಗಿದ್ದರು. ಅಭಿಮಾನಿಗಳು ಕೂಡ ಬಂದು ಶುಭ ಕೋರಿದ್ದರು.
ಮದುವೆ ಮುಂಚೆಯೇ ಡಾಲಿ ಧನಂಜಯ್ ಮತ್ತು ಧನ್ಯತಾ ಇಬ್ಬರಿಗೂ ಒಬ್ಬರ ಪರಿಚಯ ಒಬ್ಬರಿಗೆ ಇತ್ತು. ಜಯನಗರ 4ನೇ ಬ್ಲಾಕ್‌ನಲ್ಲಿ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದರು. ಇದಾದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಧನಂಜಯ್ ಅವರ ಯಾವುದಾದರೂ ಚಿತ್ರ ಬಿಡುಗಡೆಯಾದಾಗ ಅಥವಾ ಪ್ರಶಸ್ತಿ ಬಂದಾಗ ಧನ್ಯತಾ ಮೆಸೇಜ್ ಮಾಡುತ್ತಿದ್ದರು. ಡಾಲಿ ಕೂಡ ರಿಪ್ಲೈ ಮಾಡುತ್ತಿದ್ದರು. ಹೀಗೆ ಶುರುವಾದ ಪರಿಚಯ ಆ ನಂತರ ಸ್ನೇಹದ ಸ್ವರೂಪ ಪಡೆದು ಮದುವೆಯ ಹಂತದವರೆಗೆ ಕರೆದುಕೊಂಡು ಬಂತು. ಈಗ ಇಬ್ಬರು ಪೋಷಕರಾಗಿ ಬಡ್ತಿ ಪಡೆಯುತ್ತಿದ್ದಾರೆ.


Click it and Unblock the Notifications