ಸುದೀಪ್ ಬಿಜೆಪಿ ಪರ ನಿಲ್ತಾರಾ, ಇಲ್ವಾ? ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದ ಬೊಮ್ಮಾಯಿ!
ಇಂದು ( ಏಪ್ರಿಲ್ 5 ) ಬೆಳಗ್ಗೆಯಿಂದ ಮುಂದಿನ ತಿಂಗಳು ನಡೆಯಲಿರುವ ಹದಿನಾರನೇ ಕರ್ನಾಟಕ ವಿಧಾನಸಭಾ ಚುನಾವಣೆಯ ಕುರಿತ ಮಹತ್ವದ ಬೆಳವಣಿಗೆಯೊಂದರ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಗಳು ಹರಿದಾಡುತ್ತಲೇ ಇವೆ. ಹೌದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕನ್ನಡ ಚಲಚಿತ್ರರಂಗದ ನಟ ಕಿಚ್ಚ ಸುದೀಪ್ ಭಾಗವಹಿಸಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಸುದೀಪ್ ಬಿಜೆಪಿ ಪಕ್ಷ ಸೇರಲಿದ್ದು, ತಮ್ಮ ಆಪ್ತರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿದ್ದವು.
ಆದರೆ ಈ ಸುದ್ದಿಗಳನ್ನು ಜೆಪಿ ನಗರದಲ್ಲಿನ ತಮ್ಮ ನಿವಾಸದ ಮುಂದೆ ಮಾಧ್ಯಮಗಳ ಜತೆ ಮಾತನಾಡುವ ಮೂಲಕ ಸುದೀಪ್ ತಳ್ಳಿಹಾಕಿದರು. ನಾನು ಯಾವ ಪಕ್ಷವನ್ನೂ ಸಹ ಸೇರುತ್ತಿಲ್ಲ, ಚುನಾವಣೆಯ ಟಿಕೆಟ್ ಬೇಕು ಎಂದೂ ಸಹ ಕೇಳಿಲ್ಲ, ನನಗೆ ಚುನಾವಣೆಯಲ್ಲಿ ಭಾಗವಹಿಸುವ ಆಸಕ್ತಿ ಸಹ ಇಲ್ಲ ಎಂದು ಹೇಳಿಕೆ ನೀಡಿದರು. ಈ ಮೂಲಕ ನಿನ್ನೆಯಿಂದ ಹರಿದಾಡಿದ್ದ ಎಲ್ಲಾ ಸುದ್ದಿಗಳನ್ನೂ ಸುದೀಪ್ ತಳ್ಳಿಹಾಕಿದರು. ಅಲ್ಲದೇ ಮಧ್ಯಾಹ್ನ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ತಾನು ಹಾಗೂ ಸಿಎಂ ಬೊಮ್ಮಾಯಿಯವರು ಪಾಲ್ಗೊಳ್ಳಲಿದ್ದು, ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಿದ್ದೇನೆ ಎಂದಿದ್ದರು.

ಅದರಂತೆ ಇಂದು ಮಧ್ಯಾಹ್ನ ಎರಡು ಗಂಟೆ ವೇಳೆಗೆ ಬೆಂಗಳೂರಿನ ಅಶೋಕ ಹೊಟೇಲ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕಿಚ್ಚ ಸುದೀಪ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು. ಈ ವೇಳೆ ಸುದೀಪ್ ಬಿಜೆಪಿಗೆ ಸೇರುತ್ತಾರಾ ಇಲ್ವಾ ಎಂಬ ಸ್ಪಷ್ಟನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ಆತ್ಮೀಯ ಮಾಧ್ಯಮ ಮಿತ್ರರೇ ತಾವೆಲ್ಲಾ ನಿನ್ನೆಯಿಂದ ನಿರೀಕ್ಷೆ ಮಾಡಿ ಮಾಡಲಾಗಿದ್ದ ಸುದ್ದಿ ಈಗ ನಿಜವಾಗಿದೆ ಎಂದು ಮಾತನ್ನು ಆರಂಭಿಸಿದ ಬಸವರಾಜ ಬೊಮ್ಮಾಯಿ ನಿಮ್ಮ ಊಹೆ ಸರಿಯಾಗಿದೆ ಅದಕ್ಕಾಗಿ ನಿಮಗೆ ಅಭಿನಂದನೆಗಳು ಎಂದರು. ಇನ್ನು ಕಿಚ್ಚ ಸುದೀಪ್ ಕುರಿತು ಮಾತನಾಡಿದ ಬಸವರಾಜ ಬೊಮ್ಮಾಯಿ ನಮ್ಮವರೇ ಆದಂತಹ ಆತ್ಮೀಯರು ಎಂಬುದು ನಿಮಗೆ ಗೊತ್ತಿದೆ, ಅವರು ಈವತ್ತು ತಮ್ಮ ನಿಲುವನ್ನು ಪ್ರಕಟಣೆ ಮಾಡ್ತಾರೆ, ಆಮೇಲೆ ನಾನು ಅದರ ಬಗ್ಗೆ ಮಾತನಾಡುತ್ತೇನೆ ಎಂದು ತೀರ್ಮಾನವನ್ನು ತಿಳಿಸಲು ಸುದೀಪ್ ಅವರ ಕೈಗೆ ಮೈಕ್ ಕೊಟ್ಟರು.
ಸುದೀಪ್ ಬಸವರಾಜ ಬೊಮ್ಮಾಯಿ ಅವರನ್ನು ನಾನು ಚಿಕ್ಕ ವಯಸ್ಸಿನಿಂದಲೂ ನೋಡುತ್ತಾ ಬೆಳೆದವನು, ಅವರನ್ನು ಮಾಮ ಎಂದೇ ಕರೆಯುತ್ತೇನೆ, ಹೀಗಾಗಿಯೇ ಅವರ ಪರವಾಗಿ ನಾನು ನಿಲ್ಲುತ್ತೇನೆ, ಯಾವ ಪಕ್ಷದ ಪರವೂ ಅಲ್ಲ ಎಂದರು. ಈ ಮೂಲಕ ಸುದೀಪ್ ತಾನು ಬಿಜೆಪಿ ಪರ ಅಲ್ಲ, ತನ್ನ ಕಷ್ಟಕ್ಕೆ ಆದವರ ಪರ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು ಹಾಗೂ ಮಾಧ್ಯಮದವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸುದೀಪ್ ಉತ್ತರಿಸಿದರು.

ನಂತರ ಮಾತನಾಡಿದ ಬಸವರಾಜ ಬೊಮ್ಮಾಯಿ ಸುದೀಪ್ ಹಾಗೂ ತಮ್ಮ ಸಂಬಂಧವನ್ನು ಗೌರವಿಸಿ ಎಂದರು. ಸುದೀಪ್ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ, ನಾನು ಇರುವಂತಹ ಸ್ಥಾನ ಮತ್ತು ನನ್ನ ಪಕ್ಷಕ್ಕೆ ಬೆಂಬಲ ಕೊಡಲು ಬಂದಿದ್ದಾರೆ, ಅಂದರೆ ಅದರ ಅರ್ಥ ಕೇವಲ ತನ್ನ ಜತೆಗಿನ ಸಂಬಂಧಕ್ಕೆ ಗೌರವ ಕೊಟ್ಟು ಸುದೀಪ್ ಬೆಂಬಲ ನೀಡುತ್ತಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.
ಇನ್ನೂ ಮುಂದುವರಿದು ಮಾತನಾಡಿದ ಬಸವರಾಜ ಬೊಮ್ಮಾಯಿ ನನಗೆ ಇವತ್ತಿಂದ ಅಲ್ಲ, ಮೊದಲಿಂದಲೂ ಸಹ ಸಂಬಂಧ ಇರೋದ್ರಿಂದ ಅವರ ಹತ್ತಿರ ಮಾತನಾಡಿದ್ದೀನಿ, ನೀನು ನಮ್ಮ ಪಕ್ಷವನ್ನು ಸೇರಿಕೊಳ್ಳದೇ ಇದ್ದರೂ ಸಹ ನಿನ್ನ ಪ್ರಚಾರ ನಮಗೆ ಅಗತ್ಯವಿದೆ ಅಂತ ಮಾತನಾಡಿದ್ದೀನಿ. ಅವರು ಏನು ಹೇಳಿದ್ರು ಅಂದ್ರೆ ನಾನು ನಿಮಗೋಸ್ಕರ ಬೆಂಬಲ ಕೊಡ್ತೀನಿ, ನೀವೇನು ಹೇಳ್ತೀರ ಅದನ್ನು ನಿಮಗೋಸ್ಕರ ಮಾಡಲು ಸಿದ್ಧವಿದ್ದೇನೆ ಎಂದಿದ್ದಾರೆ. ಅದರ ಅರ್ಥ ನನ್ನ ಜತೆಗೆ ನನ್ನ ಪಕ್ಷಕ್ಕೂ ಸಹ ಈ ಚುನಾವಣೆಯಲ್ಲಿ ಪ್ರಚಾರವನ್ನು ಅವರು ಮಾಡ್ತಾರೆ ಎಂದು ತಿಳಿಸಿದರು. ಈ ಮೂಲಕ ಸುದೀಪ್ ಈ ಬಾರಿ ಬಿಜೆಪಿ ಪರ ಪ್ರಚಾರ ಮಾಡುವುದು ಪಕ್ಕಾ ಎಂದು ತಿಳಿಸಿದರು.


Click it and Unblock the Notifications











